ಬಾಗೇಪಲ್ಲಿ: ತಾಲೂಕಿನ ಲಗುಮದ್ದೇಪಲ್ಲಿ ಗ್ರಾಮದಲ್ಲಿ 70 ದಶಕಗಳ ಹಿಂದೆ ನಿರ್ಮಿಸಿರುವ ಕನ್ನಡ ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು, ಶಿಕ್ಷಕರು ಭಯದ ವಾತಾವರಣದಲ್ಲೇ ಕಲಿಯುವ ದುಸ್ಥಿತಿ ಎದುರಾಗಿದೆ.
ಶಾಲೆಯ ಕೊಠಡಿಗಳ ಚಾವಣಿಯ ಹಂಚು, ಸಿಮೆಂಟ್ ಉದುರುತ್ತಿದ್ದು, ಮಕ್ಕಳನ್ನು ಸೇರಿಸಲು ಪಾಲಕರು ಹಿಂಜರಿಯುವಂತಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ನೂತನ ಕಟ್ಟಡ ನಿರ್ಮಾಣಕ್ಕೆ ಅಸಕ್ತಿ ತೋರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ತಾಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಯಲ್ಲಂಪಲ್ಲಿ ಗ್ರಾಪಂ ವ್ಯಾಪ್ತಿಯ ಈ ಶಾಲೆಯಲ್ಲಿ 1ರಿಂದ 7ನೇ ತರಗತಿಗೆ 2019-20ನೇ ಸಾಲಿನಲ್ಲಿ 60 ಮಕ್ಕಳು ಹಾಜರಾತಿ ಪಡೆದುಕೊಂಡಿದ್ದರು. ಧಾರಾಕಾರವಾಗಿ ಬೀಳುತ್ತಿರುವ ಮಳೆಗೆ ಯಾವಾಗ ಕೊಠಡಿಗಳು ಕುಸಿಯುತ್ತವೋ ಎಂಬ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಹೀಗಾಗಿ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪಾಲಕರು ಹಿಂದೇಟು ಹಾಕಿರುವ ಕಾರಣ 2020-21ನೇ ಸಾಲಿನ ಮಕ್ಕಳ ಹಾಜರಾತಿ ಸಂಖೆಯಲ್ಲಿ ಕಡಿಮೆ ಆಗಿ, 50 ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಹಾಜರಾತಿ ಸಂಖ್ಯೆ ಮತ್ತಷ್ಟು ಕುಸಿಯಲಿದೆ.
ತಲೆಗೆ ಬೀಳುತ್ತೆ ಸಿಮೆಂಟ್: 1950ರಲ್ಲಿ ನಿರ್ಮಿಸಿರುವ ಹಂಚಿನ ಚಾವಣಿಯ ಎರಡು ಕೊಠಡಿಗಳು, 2005ರಲ್ಲಿ ನಿರ್ಮಿಸಿರುವ ಕಾಂಕ್ರೀಟ್ ಚಾವಣಿಯ ಮೂರು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ಹಾಕಿರುವ ಸಿಮೆಂಟ್ ಕಳಚಿ, ಕಂಬಿಗಳು ಮುರಿದು ತುಂಡಾಗಿ ಸಿಮೆಂಟ್ ಸಮೇತ ಮಕ್ಕಳ ಮತ್ತು ಶಿಕ್ಷಕರ ತಲೆ ಮೇಲೆ ಬೀಳುತ್ತಿವೆ.
ಮಕ್ಕಳ ಹಾಜರಾತಿ ಕುಸಿತ: ಮಳೆಗಾಲದಲ್ಲಿ ಶಾಲೆಯ ಕೊಠಡಿಗಳು ಸಂಪೂರ್ಣ ಜಲಾವೃತವಾಗುತ್ತವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾಗಲು, ಹಾಜರಾತಿ ಇಲ್ಲದೆ ಶಾಲೆ ಮುಚ್ಚಲು ಸ್ಥಳೀಯ ಜನಪ್ರತಿನಿ ಧಿಗಳ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ತನವೇ ಇದಕ್ಕೆ ಕಾರಣ ಎನ್ನಲಾಗಿದೆ. ಶಿಕ್ಷಕರು, ಸಾರ್ವಜನಿಕರು ಶಿಥಿಲಗೊಂಡಿರುವ ಶಾಲೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿ ಕ್ರಮಕ್ಕೆ ಮುಂದಾಗಿಲ್ಲ ಎಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
1950ರಲ್ಲಿ ಸ್ಥಾಪನೆ ಆಗಿರುವ ಸರ್ಕಾರಿ ಶಾಲೆಯಲ್ಲಿ ನಾವು ಓದಿದ್ದೇವೆ, ಇದೀಗ ನಮ್ಮ ಮಕ್ಕಳು ಓದುತ್ತಿದ್ದಾರೆ. 20 ವರ್ಷ ಹಿಂದೆಯೇ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಸರ್ಕಾರದ ಗಮನ ಸೆಳೆದಿದ್ದೇವೆ. ಗ್ರಾಮಸ್ಥರ ಮನವಿಗೆ ಇಲಾಖೆ ಅಧಿ ಕಾರಿಗಳು ಗಮನ ನೀಡುತ್ತಿಲ್ಲ.
– ಮುರಳಿ, ಮಕ್ಕಳ ಪಾಲಕರು, ಲಗುಮದ್ದೇಪಲ್ಲಿ
ಲಗುಮದ್ದೇಪಲ್ಲಿ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳು ಓದುವುದರ ಜೊತೆಗೆ, ಹಲವು ವರ್ಷಗಳಿಂದ ನಾನು ಅಡುಗೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕಟ್ಟಡದ ಚಾವಣಿಯ ಹಂಚು, ಗೋಡೆಗಳು ಬಿದ್ದುಹೋಗಿ ಮಳೆ ಬಂದರೆ ಕಟ್ಟಡ ಸಂಪೂರ್ಣ ಸೋರುತ್ತದೆ. ಹಲವು ವರ್ಷಗಳ ಹಿಂದೆಯೇ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ.
– ಶಿರೋಮಣಿ, ಅಡುಗೆ ಸಹಾಯಕಿ
1, 3 ಮತ್ತು 5ನೇ ತರಗತಿಗೆ ಮೂರು ಮಕ್ಕಳನ್ನು ಕಳುಹಿಸುತ್ತಿದ್ದೇವೆ. ಮೂರು ಕಿ.ಮೀ. ದೂರದಿಂದ ನಮ್ಮ ಮಕ್ಕಳು ಶಾಲೆಗೆ ಬರುತ್ತಾರೆ. ಆದರೆ, ಕನಿಷ್ಠ ಮೂಲ ಸೌಲಭ್ಯಗಳು ಕಲ್ಪಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅ ಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
– ದೇವರಾಜು, ಪೋಷಕರು
-ಆರ್.ಎನ್.ಗೋಪಾಲರೆಡ್ಡಿ