Advertisement
ವಿಧಾನಸಭಾಧ್ಯಕ್ಷರ ಆದೇಶದಂತೆ ವಿಧಾನಸಭೆ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳಿಗೆ ಹಣ ಮಂಜೂರು ಮಾಡುವ ಆರ್ಥಿಕ ಅಧಿಕಾರವನ್ನು ಹಿಂಪಡೆದು ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ಸಭಾಧ್ಯಕ್ಷರಿಗೆ ಇದ್ದ ಹಣ ಮಂಜೂರಾತಿ ಅಧಿಕಾರವನ್ನೂ ಹಿಂಪಡೆಯಲಾಗಿದೆ.
ವಿಧಾನಸಭೆ ಸಚಿವಾಲಯದ ಆಡಳಿತ ಸುಧಾರಣೆ ಮತ್ತು ಆಡಳಿತ ಹಿತದೃಷ್ಟಿಯಿಂದ ಸಭಾಧ್ಯಕ್ಷರನ್ನೊಳಗೊಂಡಂತೆ ವಿಧಾನಸಭೆ ಕಾರ್ಯದರ್ಶಿಯಿಂದ ಹಿಡಿದು ಅಧೀನ ಕಾರ್ಯದರ್ಶಿ ಹಂತದವರೆಗೆ ನಿರ್ದಿಷ್ಟು ಮೊತ್ತವನ್ನು ಮಂಜೂರು ಮಾಡಲು 2018ರ ಫೆ. 21ರಂದು ಆದೇಶ ಹೊರಡಿಸಲಾಗಿತ್ತು.
Related Articles
Advertisement
ಆದರೆ, ಈ ಆದೇಶವು ಸಚಿವಾಲಯದ ಅಧಿಕಾರಿಗಳು ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿರುವುದರಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಅನಗತ್ಯ ಆರ್ಥಿಕ ವೆಚ್ಚದಿಂದ ಉಂಟಾಗುವ ಹೊರೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆದೇಶ ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಯಾಕಾಗಿ ಈ ಕ್ರಮ?:ಇತ್ತೀಚಿನ ದಿನಗಳಲ್ಲಿ ಸಚಿವಾಲಯದ ಕೆಲವು ಖರೀದಿ, ಟೆಂಡರ್‌ಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ರಮೇಶ್‌ಕುಮಾರ್ ಅವರು ವಿಧಾನಸಭಾಧ್ಯಕ್ಷರಾದ ಬಳಿಕ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಕೆಲವು ಪ್ರಕರಣಗಳ ಬಗ್ಗೆ ಆಂತರಿಕ ತನಿಖೆಗೂ ಆದೇಶಿಸಿದ್ದರು. ಈ ವೇಳೆ ವಿಧಾನಸಭೆ ಕಾರ್ಯದರ್ಶಿಗಳು ಸೇರಿದಂತೆ ಅಧಿಕಾರಿಗಳಿಗೆ ನೀಡಿದ ಆರ್ಥಿಕ ಅಧಿಕಾರದಿಂದ ಈ ಲೋಪಗಳಾಗಿರುವುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ನೀಡಿರುವ ಅಧಿಕಾರ ವಾಪಸ್ ಪಡೆಯಲಾಗಿದೆ.