ಉಡುಪಿ: ಸಾಮಾಜಿಕ ಅರಣ್ಯೀಕರಣ (ಸೋಶಿಯಲ್ ಫಾರೆಸ್ಟ್ರಿ)ದಿಂದ ಆಗುತ್ತಿರುವ ಹೆಚ್ಚುವರಿ ಆರ್ಥಿಕ ಹೊರೆ ತಗ್ಗಿಸಲು ಕೆಲವು ಹುದ್ದೆಗಳನ್ನು ಕಡಿತಗೊಳಿಸಲು ರಾಜ್ಯ ಸರಕಾರ ಹಾಗೂ ಅರಣ್ಯ ಇಲಾಖೆ ಚಿಂತಿಸುತ್ತಿವೆ.
ಉಡುಪಿಯಲ್ಲಿ 1,500 ಹೆಕ್ಟೇರ್ ವರೆಗೆ, ದ.ಕ.ದಲ್ಲಿ 2,000ಕ್ಕೂ ಅಧಿಕ ಹೆಕ್ಟೇರ್‌ಗಳಲ್ಲಿ ಸಾಮಾಜಿಕ ಅರಣ್ಯ ಪರಿಕಲ್ಪನೆಯಡಿ ಸಸಿಗಳನ್ನು ಈವರೆಗೆ ನೆಡಲಾಗಿದೆ. ಅರಣ್ಯ ಪ್ರದೇಶ ಹೊರತುಪಡಿಸಿ ಸರಕಾರಿ, ಪಂಚಾಯತ್ ಮತ್ತು ಹಡಿಲು ಬಿದ್ದ ಭೂಮಿ ಮತ್ತು ಖಾಸಗಿ ಜಮೀನುಗಳಲ್ಲಿ ಅರಣ್ಯ ನಿರ್ಮಾಣ ಮಾಡುವುದನ್ನು ಸಾಮಾಜಿಕ ಅರಣ್ಯ ಪರಿಕಲ್ಪನೆಯ ಒಳಗೆ ತರಲಾಗಿದೆ. ಈಗ ನರೇಗಾದಡಿಯೂ ಸಾಮಾಜಿಕ ಅರಣ್ಯ ನಿರ್ಮಾಣ ಸಂಬಂಧ ಅನುದಾನ ನೀಡಲಾಗುತ್ತದೆ.
ಅರಣ್ಯ ಇಲಾಖೆಯಿಂದ ಬೃಹದಾಕಾರವಾಗಿ ಬೆಳೆಯುವ ಮರಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಅರಣ್ಯ ನೀತಿ 1988ರಂತೆ ಸಾಮಾಜಿಕ ಅರಣ್ಯ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಅದರಂತೆ ರಸ್ತೆ ಬದಿಗಳಲ್ಲಿಯೂ ಗಿಡ ನೆಡಲಾಗುತ್ತದೆ.ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಘಟಕವು 30 ಸಾಮಾಜಿಕ ಅರಣ್ಯ ವಿಭಾಗಗಳನ್ನು ಹೊಂದಿದೆ.
ಇದರ ಮೂಲಕ ಜಿಲ್ಲಾ ಪಂಚಾಯತ್‌ನಡಿ ಬರುವ ಜಿಲ್ಲಾ ವಲಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಾಲೆಗಳ ಬದಿ, ಗೋಮಾಳ, ರೈಲ್ವೇ ಹಳಿ ಬದಿ, ನದಿ ಅಂಚಿನಲ್ಲಿ, ಶಾಲಾ-ಕಾಲೇಜು ಆವರಣಗಳಲ್ಲಿ, ಸಂಸ್ಥೆಗಳ ಆವರಣಗಳಲ್ಲಿ ಮತ್ತು ಇತರ ಅರಣ್ಯೇತರ ಪ್ರದೇಶಗಳಲ್ಲಿ ಅರಣ್ಯೀಕರಣ ಮಾಡುವುದು ಇದರ ಉದ್ದೇಶವಾಗಿದೆ. ಅರಣ್ಯ ಇಲಾಖೆಯ ಜತೆಗೆ ಜಿ.ಪಂ. ವ್ಯಾಪ್ತಿಯಲ್ಲೂ ಇದು ಬರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡಿಎಫ್ಒ ಹುದ್ದೆಗೆ ಕತ್ತರಿ: ಸಾಮಾಜಿಕ ಅರಣ್ಯ ಘಟಕದ ಅಡಿಯಲ್ಲಿ ವಿವಿಧ ಸ್ತರದ ಹುದ್ದೆಗಳು ಇವೆ. ಇದರ ಜತೆಗೆ ಇಲಾಖೆಗೆ ಆರ್ಥಿಕ ಹೊರೆಯೂ ಆಗುತ್ತಿದೆ. ಹೀಗಾಗಿ ಕೆಲವು ಹುದ್ದೆಗಳನ್ನು ಕೈಬಿಡಲು ಸರಕಾರದ ಹಂತದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ. ಡಿಎಫ್ಒ ಹುದ್ದೆಗಳು ಎಲ್ಲ ಸಾಮಾಜಿಕ ಅರಣ್ಯ ಘಟಕದಲ್ಲೂ ಇರುವುದರಿಂದ ಆ ಹುದ್ದೆಯನ್ನು ಆರಂಭಿಕ ಹಂತದಲ್ಲಿ ತೆಗೆಯುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸರಕಾರದಿಂದ ಯಾವುದೇ ಅಧಿಕೃತ ಆದೇಶ ಆಗಿಲ್ಲ.