Advertisement

ಇನ್ನು ಅತಿಗಣ್ಯರ ವಿಶೇಷ ಭದ್ರತೆಗೆ ಬೀಳುತ್ತೆ ಕತ್ತರಿ!

10:58 AM Sep 16, 2017 | Team Udayavani |

ಹೊಸದಿಲ್ಲಿ: ವಿಐಪಿಗಳು ತಮ್ಮ ವಾಹನಗಳಿಗೆ ಕೆಂಪು ಬೀಕನ್‌ ದೀಪ ಹಾಕಿಕೊಂಡು, ಸೈರನ್‌ ಸದ್ದು ಮಾಡುತ್ತಾ ಸುತ್ತಾಡುವುದಕ್ಕೆ ಪ್ರಸಕ್ತ ವರ್ಷದ ಆರಂಭದಲ್ಲಿ ನಿರ್ಬಂಧ ಹೇರಿ ಭಾರೀ ಚರ್ಚೆಗೆ ನಾಂದಿ ಹಾಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, ಈಗ ಮತ್ತೂಮ್ಮೆ ವಿಐಪಿಗಳು ಪಡೆಯುವ ಮಹತ್ವದ ಸೌಲಭ್ಯವೊಂದಕ್ಕೆ ಕತ್ತರಿ ಹಾಕಲು ಮುಂದಾಗಿದೆ.

Advertisement

ಪ್ರಸ್ತುತ ಅತಿ ಹೆಚ್ಚು ಮಂದಿಗೆ ವಿಐಪಿ ಭದ್ರತೆ ಒದಗಿಸುತ್ತಿರುವ ಅಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ, ಈ ಪ್ರತಿಷ್ಠಿತರ ಪಟ್ಟಿಯಿಂದ ಒಂದಷ್ಟು ಮಂದಿಗೆ ಕೊಕ್‌ ನೀಡಿ, “ವಿಐಪಿ ಪಟ್ಟಿ’ಯನ್ನು ಮೊಟಕುಗೊಳಿಸಲು ನಿರ್ಧರಿಸಿದೆ ಎಂದು ಸರಕಾರದ ಹಿರಿಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ರನ್ನೂ ಒಳಗೊಂಡಂತೆ ಪ್ರಧಾನಿ ಮೋದಿ ಹಾಗೂ ಸರಕಾರದ ವಿರುದ್ಧ ಆಗಾಗ ಗಟರು ಹಾಕುವ ವಿಪಕ್ಷಗಳ ನಾಯಕರು ಪಡೆಯುತ್ತಿರುವ ವಿಐಪಿ ಭದ್ರತೆಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ.

ಇವರದ್ದೇ ದೊಡ್ಡ ಪಟ್ಟಿ: ಐಪಿ ಸ್ಥಾನಮಾನ ಹೊಂದಿ ಸರಕಾರದಿಂದ “ಎಕ್ಸ್‌’, “ವೈ’, “ಝಡ್‌’ ಮತ್ತು “ಝಡ್‌ ಪ್ಲಸ್‌’ ಭದ್ರತೆ ಪಡೆಯುವ ಪ್ರತಿಷ್ಠಿತರ ಅತಿ ದೊಡ್ಡ ಪಟ್ಟಿ ಹೊಂದಿರುವ ಹೆಗ್ಗಳಿಕೆ ಮೋದಿ ನೇತೃತ್ವದ ಸರಕಾರಕ್ಕಿದೆ. ಈ ಹಿಂದೆ ಆಡಳಿತ ನಡೆಸಿದ ಯುಪಿಎ ಸರಕಾರ 350 ವಿಐಪಿಗಳಿಗೆ ಭದ್ರತೆ ನೀಡಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಬರೋಬ್ಬರಿ 475 ಪ್ರಮುಖ ವ್ಯಕ್ತಿಗಳಿಗೆ ಭದ್ರತೆ ನೀಡುತ್ತಿದೆ. ಅಲ್ಲದೆ ಹಿಂದಿನ ಯಾವುದೇ ಸರಕಾರ ಕೂಡ ಇಷ್ಟೊಂದು ದೊಡ್ಡ ಸಂಖ್ಯೆಯ ವಿಐಪಿಗಳಿಗೆ ಭದ್ರತೆ ನೀಡಿದ ಇತಿಹಾಸವಿಲ್ಲ.

ವಿರೋಧಿಗಳಿಗೆ ಕೊಕ್‌?: ಪ್ರಸ್ತುತ ಅಧಿಕಾರದಲ್ಲಿರದ ಕೆಲ ರಾಜಕೀಯ ನಾಯಕರು ರಾಷ್ಟ್ರೀಯ ಭದ್ರತಾ ಸಿಬಂದಿ (ಎನ್‌ಎಸ್‌ಜಿ) ಹಾಗೂ ಅರೆಸೇನಾಪಡೆ ಮೂಲಕ ಉನ್ನತ ಮಟ್ಟದ ಭದ್ರತೆ ಪಡೆಯುತ್ತಿದ್ದು, ಅಂಥವರನ್ನು ಪಟ್ಟಿಯಿಂದ ಹೊರಗಿಡುವ ಚಿಂತನೆ ಕೇಂದ್ರದ್ದಾಗಿದೆ. ಪ್ರಮುಖವಾಗಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್‌ ಯಾದವ್‌, ಎನ್‌ಎಸ್‌ಜಿ ಹಾಗೂ ಅರೆಸೇನಾಪಡೆ ಎರಡರಿಂದಲೂ ಭದ್ರತೆ ಪಡೆಯುತ್ತಿದ್ದಾರೆ. ಅಲ್ಲದೆ ಲಾಲು ಈಗ ಶಾಸಕಗಿಯೂ ಉಳಿದಿಲ್ಲ. 

ಹೀಗಾಗಿ ಅವರಿಗೆ ನೀಡಿರುವ ವಿಐಪಿ ಭದ್ರತೆಯನ್ನು ಕೇಂದ್ರ ಹಿಂಪಡೆಯುವ ಸಾಧ್ಯತೆ ದಟ್ಟವಾಗಿದೆ. ಇವರೊಂದಿಗೆ ಉತ್ತರ ಪ್ರದೇಶ ಮಾಜಿ ಸಿಎಂ ಅಖೀಲೇಶ್‌ ಯಾದವ್‌, ತಮಿಳುನಾಡು ಮಾಜಿ ಸಿಎಂ ಎಂ.ಕರುಣಾನಿಧಿ ಅವರೂ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ವಿಶೇಷವೆಂದರೆ ಬಿಜೆಪಿಯವರೇ ಆಗಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್‌ ಸಿಂಗ್‌ ಕೂಡ ವಿಐಪಿ ಭದ್ರತೆಯಿಂದ ವಂಚಿತರಾಗುವ ಸಾಧ್ಯತೆಯಿದೆ.

Advertisement

50 ಮಂದಿಗೆ ಝಡ್‌ ಪ್ಲಸ್‌ ಸೆಕ್ಯುರಿಟಿ
ಲಾಲು, ಅಖೀಲೇಶ್‌, ಕರುಣಾನಿಧಿ ಸೇರಿ ಪ್ರಸ್ತುತ ಅಧಿಕಾರದಲ್ಲಿರದ ಹಲವು ರಾಜಕಾರಣಿಗಳು ಝಡ್‌ ಪ್ಲಸ್‌ ಭದ್ರತೆ ಪಡೆಯುತ್ತಿದ್ದಾರೆ. ಅಂದರೆ ಇವರ ರಕ್ಷಣೆಗೆ 35ರಿಂದ 40 ಭದ್ರತಾ ಸಿಬಂದಿ ಸದಾ ಸಿದ್ಧರಾಗಿರುತ್ತಾರೆ. ಮೋದಿ ನೇತೃತ್ವದ ಸರಕಾರ ಪ್ರಸ್ತುತ 50 ಮಂದಿ ಪ್ರತಿಷ್ಠಿತರಿಗೆ ಅತ್ಯುನ್ನತ ಮಟ್ಟದ ಝಡ್‌ ಪ್ಲಸ್‌ ಭದ್ರತೆ ಒದಗಿಸುತ್ತಿದ್ದು, ಹಿಂದಿನ ಯುಪಿಎ ಸರಕಾರ 25 ಮಂದಿಗೆ ಮಾತ್ರ ಈ ಶ್ರೇಣಿಯ ಭದ್ರತೆ ಒದಗಿಸಿತ್ತು.

ಉನ್ನತ ಶ್ರೇಣಿ ಭದ್ರತೆ ಪಡೆಯುವ ಪ್ರಮುಖರು
ಯೋಗ ಗುರು ಬಾಬಾ ರಾಮ್‌ದೇವ್‌ (ಝಡ್‌), ಅಧ್ಯಾತ್ಮ ಮಾತೆ ಮಾತಾ ಅಮೃತಾನಂದಮಯಿ (ಝಡ್‌), ರಾಮ ಜನ್ಮಭೂಮಿ ದೇವಾಲಯ ಮಂಡಳಿಯ ಅಧ್ಯಕ್ಷರಾಗಿರುವ ಮಹಾಂತ್‌ ನೃತ್ಯ ಗೋಪಾಲ್‌ ದಾಸ್‌ (ವೈ), ವಿವಾದಾತ್ಮಕ ರಾಜಕಾರಣಿ ಸಾಕ್ಷಿ ಮಹಾರಾಜ್‌ (ವೈ), ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (ಎಸ್‌ಪಿಜಿ), ಮಾಜಿ ಸಿಎಂಗಳಾದ ಮುಲಾಯಂ ಸಿಂಗ್‌ ಯಾದವ್‌ ಹಾಗೂ ಅವರ ಪುತ್ರ ಅಖೀಲೇಶ್‌ ಯಾದವ್‌ (ಎಸ್‌ಪಿಜಿ), ಬಿಎಸ್‌ಪಿ ನಾಯಕಿ ಮಾಯಾವತಿ (ಎಸ್‌ಪಿಜಿ), ಇವರೊಂದಿಗೆ ರಾಜನಾಥ್‌ ಸಿಂಗ್‌ರ ಪುತ್ರ, ಮೊದಲ ಬಾರಿ ಶಾಸಕರಾಗಿರುವ ಪಂಕಜ್‌ ಸಿಂಗ್‌ ಸೇರಿದಂತೆ ಪ್ರಮುಖ 15 ರಾಜಕಾರಣಿಗಳ ಮಕ್ಕಳಿಗೆ ಎನ್‌ಎಸ್‌ಜಿ ಭದ್ರತೆ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next