Advertisement

“ಕಾಣಲಾಗದ್ದನ್ನು ಕಂಡ’ವಿಜ್ಞಾನಿಗಳು

11:10 PM Apr 27, 2019 | mahesh |

ಅದು ಊಹೆಗೂ ನಿಲುಕದ ಅತಿ ವಿಶಿಷ್ಟ, ಭೀಕರ, ವಿಚಿತ್ರ ಆಕಾಶಕಾಯ. ಗುರುತ್ವ ಅದೆಷ್ಟು ಅಗಾಧವೆಂದರೆ ಅಲ್ಲಿ ಬೆಳಕೂ ಹೊರಬರಲಾರದಷ್ಟು ಬಂಧಿ.. ಅದರ ದ್ರವ್ಯರಾಶಿಯೆಲ್ಲ “ಸಿಂಗ್ಯುಲ್ಯಾರಿಟಿ’ ಅಥವಾ “ಏಕೈಕತೆ’ ಎಂದು ಕರೆಯಲ್ಪಡುವ ಒಂದು ಬಿಂದುವಿನಲ್ಲಿ ತುರುಕಿದೆ!

Advertisement

ಅನೇಕ ಸೌರವ್ಯೂಹಗಳ ಗುರುತ್ವವನ್ನೆಲ್ಲ ಆ ಬಿಂದು ಅಡಗಿಸಿಟ್ಟುಕೊಂಡಿರುವಂತಿದೆ. ಆ ಕಾಯ ಯಾವುದು?- ಅದೇ ಇತ್ತೀಚೆಗೆ ಕೆಮರಾ ಕಣ್ಣಿ¡ಗೆ ಸಿಕ್ಕಿ ಸುದ್ದಿ ಮಾಡಿರುವ ಏಕೈಕ “ಕಪ್ಪು ಕುಳಿ’ ಅಥವಾ “ಕಪ್ಪು ರಂಧ್ರ’. “ಕೃಷ್ಣ ವಿವರ’ ಎನ್ನುವ ಆಕರ್ಷಕ ನಾಮವೂ ಇದೆ. ಅಂಥವು ಬ್ರಹ್ಮಾಂಡದಲ್ಲಿ ಸಾಕಷ್ಟಿವೆ. ಐನ್‌ಸ್ಟಿàನ್‌ರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದಂತೆ “ಕಪ್ಪು ಕುಳಿ’ ಅತ್ಯಧಿಕ ದ್ರವ್ಯರಾಶಿಯ ಫ‌ಲವಾಗಿ ಒಂದು ಆಕಾಶ ಕಾಯವು “ದೇಶ-ಕಾಲ’ವನ್ನು ವಕ್ರಗೊಳಿಸುವಂತೆ ತಳೆಯುವ ಉಗ್ರಾ ವತಾರ. ತನ್ನ ಭಾರ ತಾನೇ ಹೊರಲಾರದೆ ಒಳಕುಸಿತಕ್ಕೊಳಗಾಗುವ ದುರಂತ ಸ್ಥಿತಿ. ನಮ್ಮ “ಕ್ಷೀರಪಥ’ದ(ಸೂರ್ಯನನ್ನೊಳಗೊಂಡ ನಕ್ಷತ್ರ ರಾಶಿ) ಕೇಂದ್ರ ಭಾಗದಲ್ಲೇ ಅಂಥ ಕಾಯವಿದೆ. ಗಾಬರಿ ಬೇಡ. ನಮ್ಮಿಂದ 7,7000 ಜ್ಯೋತಿವರ್ಷಗಳ ಅಂತರವಿರುವ ಕಾರಣ ಭೂಮಿಗೆ ಬಾಧೆಯಿಲ್ಲ. ಅಂದಹಾಗೆ ಒಂದು ಜ್ಯೋತಿರ್ವರ್ಷ ಎಂದರೆ ಬೆಳಕು ಒಂದು ಸೆಕೆಂಡಿಗೆ ಸುಮಾರು ಮೂರು ಲಕ್ಷ ಕಿ.ಮೀ. ವೇಗದಲ್ಲಿ ಧಾವಿಸುವ ದೂರ. ಲೆಕ್ಕ ಹಾಕಿ!

ಖಗೋಳ ವಿಜ್ಞಾನಿಗಳು ಎರಡು ಬಗೆಯ ಕಪ್ಪು ಕುಳಿಗಳನ್ನು ಗುರುತಿಸಿದ್ದಾರೆ; ಸೂರ್ಯನ ಕೆಲವು ಪಟ್ಟು ದ್ರವ್ಯರಾಶಿಯವು ಮತ್ತು ಒಂದು ಚಿಕ್ಕ ನಕ್ಷತ್ರ ರಾಶಿಯ ದ್ರವ್ಯರಾಶಿಯವು. ಯಾವುದೇ ಬೆಳಕು ಕೃಷ್ಣ ವಿವರಗಳಿಂದ ಹೊರಬರದ ಕಾರಣ ಅವುಗಳ ಬಣ್ಣ ಕಡು ಕಪ್ಪು. ನಮ್ಮ ದೃಷ್ಟಿಗೆ ನಿಲುಕದ್ದರಿಂದ ಅವುಗಳ ನೇರ ಅಧ್ಯಯನ ಅಸಾಧ್ಯ. ಏನಿದ್ದರೂ ತನ್ನ ಸುತ್ತಲ ನಕ್ಷತ್ರಗಳ ಮೇಲೆ ಅವು ಬೀರುವ ಪ್ರಭಾವವ ನ್ನಾಧರಿಸಿಯೇ ಅಭ್ಯಸಿಸಬೇಕು, ಸಂಶೋಧನೆ ಕೈಗೊಳ್ಳಬೇಕು. ಕಪ್ಪು ರಂಧ್ರಕ್ಕೆ ಮೇಲ್ಮೆ„ ಎಂಬುದಿಲ್ಲ! ಕಾಕತಾಳೀಯ ಗಮನಿಸಿ. ಮಹಾಭಾರತದಲ್ಲಿ ಬರುವ ಶ್ರೀಕೃಷ್ಣ ನೀಲ ಮೇಘ ಶ್ಯಾಮ. ಬಣ್ಣ ಕಪ್ಪೇ. ಆದರೇನು ಆತನೇ ಮಹಾಕಾವ್ಯದ ಕೇಂದ್ರ ವ್ಯಕ್ತಿ. ಬ್ರಹ್ಮಾಂಡವೆಲ್ಲ ಬಹುತೇಕ ಕಡು ಕತ್ತಲೆಯೇ ಅಲ್ಲವೇ? ಕತ್ತಲಿದ್ದರೇನೆ ಬೆಳಕಿಗೆ ಕಿಮ್ಮತ್ತು. ಅಬ್ಬ! “ಕೃಷ್ಣಮ್‌ ವಂದೆ ಜಗದ್ಗುರು’ ನುಡಿ ಅದೆಷ್ಟು ಅನ್ವರ್ಥ. ಕೃಷ್ಣ ವಿವರ ಅಕ್ಷರಶಃ ಕರಾಳ ಕಾಯ. ಅದು ತನ್ನತ್ತ ಬರುವ ವಸ್ತುವೈವಿಧ್ಯವನ್ನೆಲ್ಲ ನುಂಗುತ್ತದೆ. ಭೌತಶಾಸ್ತ್ರದ ನಿಯಮಗಳೇ ಅಲ್ಲಿ ಅಯೋಮಯವಾಗುತ್ತವೆ. ವಾಸ್ತವವಾಗಿ ಕಪ್ಪು ರಂಧ್ರ ನಕ್ಷತ್ರವೊಂದರ ಅವಸಾನ ಸ್ಥಿತಿ. ಕಪ್ಪು ಕುಳಿ ರೂಪುಗೊಳ್ಳುವುದು ಹೇಗೆ?

ಇದನ್ನರಿಯಲು ಇಗೋ ಒಂದಷ್ಟು ವಿವರ. 1966ರಲ್ಲಿ ನ್ಯೂಟನ್‌ ಗುರುತ್ವಾ ಕರ್ಷಣ ಸಿದ್ಧಾಂತ ಆವಿಷ್ಕರಿಸಿದ. ಅದರಂತೆ ಪ್ರತಿಯೊಂದು ವಸ್ತು/ಕಾಯ ತನ್ನ ಗುರುತ್ವಾಕರ್ಷಣ ಬಲದಿಂದ ಉಳಿದವನ್ನು ಸೆಳೆಯುತ್ತದೆ. ಮೇಲಕ್ಕೆಸೆ‌ದ ಪದಾರ್ಥ ಕೆಳಕ್ಕೆ ಬೀಳುವುದು, ಗ್ರಹಗಳು ಸೂರ್ಯನ ಸುತ್ತ ಬಳಸುವುದು ಇದೇ ಬಲದಿಂದ. ಒಂದು ವಸ್ತುವನ್ನು ಕೆಳಗೇ ಬೀಳದಂತೆ ಹೆಚ್ಚಿನ ಬಲ ಪ್ರಯೋಗಿಸಿ ಮೇಲಕ್ಕೆ ಒಗೆಯಲಾಗದೆ ಅಂತ ವಿಜ್ಞಾನಿಗಳು ತಲೆ ಬಿಸಿಯಾಗಿಸಿಕೊಂಡರು. ಭೂಮಿಯಿಂದ ಸೆಕೆಂಡಿಗೆ ಕನಿಷ್ಠ 11.2 ಕಿ.ಮೀ. ವೇಗದಲ್ಲಿ (ವಿಮೋಚನಾ ವೇಗ) ಯಾವುದೇ ಪದಾರ್ಥ ಎಸೆದರೆ ಅದು ಮರಳಿ ಬೀಳದೆಂಬ ಅಂಶ ಲೆಕ್ಕಕ್ಕೆ ದೊರಕಿತು. ಭೂಮಿಯ ವಿಮೋಚನಾ ವೇಗ ಸೆಕೆಂಡಿಗೆ 11.2 ಕಿ.ಮೀ. ಹೋಲಿಕೆಯಾಗಿ ಬುಧ ಗ್ರಹದ್ದು 4.3 ಕಿ.ಮೀ. ಗುರುವಿನದ್ದು 59.5 ಕಿ.ಮೀ. ಚಂದ್ರನದು 2.38 ಕಿ.ಮೀ.

ದ್ರವ್ಯರಾಶಿ ಹೊರೆಯಾದಷ್ಟು ವಿಮೋಚನಾ ವೇಗವೂ ಅಧಿಕವೆಂದು ಸಾಬೀತಾಯಿತು. ಹಾಗಾದರೆ ಒಂದು ಆಕಾಶಕಾಯ ಬೆಳಕೂ ಸಹ ಅಲ್ಲಿಂದ ತಪ್ಪಿಸಿ ಕೊಳ್ಳದಷ್ಟು ದ್ರವ್ಯ ಪೇರಿಸಿಕೊಂಡುಬಿಟ್ಟರೆ ಗತಿಯೇನು?! ವಿಜ್ಞಾನ ವಲಯದಲ್ಲಿ ಗಂಭೀರ ಜಿಜ್ಞಾಸೆ ಸಾಗಿತು. 1784ರಲ್ಲಿ ಬ್ರಿಟನ್ನಿನ ಖಗೋಳ ವಿಜ್ಞಾನಿ ಜಾನ್‌ ಮೈಕೆಲ್‌ ಬರೆದರು: “ಅಂಥ ಕಾಯಗಳಿದ್ದರೆ ಅವುಗಳ ವ್ಯಾಸ ಸೂರ್ಯನದರ ಐನೂರು ಪಟ್ಟಾದರೂ ಇರಬೇಕು. ಅಲ್ಲಿಂದ ಹೊರಟ ಬೆಳಕು ಅದರ ಗುರುತ್ವದಿಂದ ಅಲ್ಲಿಗೇ ಮರಳುವುದು. ಕಪ್ಪು ತಾರೆಗಳೆನ್ನಬಹುದಾದ ಅವುಗಳಿಂದ ಯಾವುದೇ ಮಾಹಿತಿ ಲಭ್ಯವಾಗದು’. ಆ ಬಗೆಯ ಕಾಯಗಳಿಗೆ ಜಾನ್‌ ಎ ವೀಲರ್‌ ಮೊತ್ತ ಮೊದಲ ಬಾರಿಗೆ “ಕಪ್ಪು ರಂಧ್ರ’ ಎಂದು ಕರೆದರು. ಅತಿ ಹೆಚ್ಚು ದ್ರವ್ಯ ಅತಿ ಹೆಚ್ಚು ಕಡಿಮೆ ಗಾತ್ರದಲ್ಲಿ-ಇದು ಕಪ್ಪು ರಂಧ್ರದ ಒಂದೇ ವಾಖ್ಯದ ವ್ಯಾಖ್ಯೆ. ತಾರೆಗಳಿಗೂ ಹುಟ್ಟು, ಸಾವು ಉಂಟು. ವಿಶ್ವ ಅಥವಾ ಬ್ರಹ್ಮಾಂಡದಲ್ಲಿ ಶೂನ್ಯಾಗಸ ಅಂದರೆ ಖಾಲಿ ಸ್ಥಳವೇ ಹೆಚ್ಚು. ಖಾಲಿಯೆನ್ನುವ ಬದಲು ಅಂತರ್ನಾಕ್ಷತ್ರಿಕ ಧೂಳಿರುವ ವಲಯವೆನ್ನುವುದೇ ಹೆಚ್ಚು ಖರೆ. ನಕ್ಷತ್ರಗಳ ಜನನ, ಮರಣದ ಸಂಕ್ಷಿಪ್ತ ಚಿತ್ರಣ ಹೀಗೆ; ಅನಿಲ ಮೇಘ, ಧೂಳು-ನಕ್ಷತ್ರ ನಿರ್ಮಿತಿಯ ಕಚ್ಚಾ ಸಾಮಗ್ರಿಗಳು. ಮೇಘ ತನ್ನದೇ ಗುರುತ್ವಾ ಕರ್ಷಣ ಬಲದಿಂದ ಕುಸಿಯುತ್ತದೆ. ಘನೀಭವಿಸಿದ ದ್ರವ್ಯ ಒಗ್ಗೂಡಿ ತಿರುಳುಳ್ಳ ಕೇಂದ್ರವಾಗಿ ರೂಪುಗೊಳ್ಳುವುದು. ಅದರ ಕಾವೇರಿ ಆದಿಮತಾರೆಯಾಗುತ್ತದೆ. ಉಳಿದ ಮೇಘ ಮತ್ತು ದ್ರವ್ಯ ಈ ಆದಿಮತಾರೆಯ ಸುತ್ತ ಪರಿವರಿಸುವುದು. ಈಗ ಬೈಜಿಕ ಸಂಲಯನ ಆರಂಭ. ಅಗೋ ನವ ನಕ್ಷತ್ರುದಯ!

Advertisement

ತಾರೆ ಜನನ ಪ್ರಕ್ರಿಯೆಗೆ ಕನಿಷ್ಠ 10 ಮಿಲಿಯನ್‌ ವರ್ಷಗಳೇ ಬೇಕು. ಯಾವುದೇ ಆಕಾಶಕಾಯ ತನ್ನ ಗರ್ಭದಲ್ಲಿ ಜಲಜನಕವನ್ನು ಹೀಲಿಯಂ ಆಗಿ ರೂಪಾಂತರಿಸ ಲಾರಂಭಿಸುವುದೋ ಆಗಲೇ ಅದಕ್ಕೆ ತಾರಾಪಟ್ಟ ಪ್ರಾಪ್ತವೆನ್ನಿ. ಸೂರ್ಯನ ಉಗಮವೂ ಹೀಗೆಯೇ ಆಗಿದೆ. ಸೂರ್ಯ ಒಂದು ಬೃಹತ್‌ ಅನಿಲ ಗೋಳ. ಕೇಂದ್ರದಲ್ಲಿ ತಿರುಳು. ಅಲ್ಲಿ ಅನವರತ ಬೈಜಿಕ ಸಂಲಯನ. ಜಲಜನಕ ಹೀಲಿಯಂ ಆಗಿ ಪರಿವರ್ತನೆಗೊಳ್ಳುತ್ತಲೆ ಶಕ್ತಿಯ ಬಟವಾಡೆ. ಅಬ್ಬ ಸುಮಾರು ಐದು ಬಿಲಿಯನ್‌ ವರ್ಷಗಳಿಂದ ನಿರಂತರ ಕಾರ್ಯತತ್ಪರ ಕುಲುಮೆ. ಒಂದೆಡೆ ತಾರೆಗಳು ಜನ್ಮ ತಾಳುತ್ತಿದ್ದರೆ ಮತ್ತೂಂದೆಡೆ ಅಸುನೀಗುತ್ತಿರುತ್ತವೆ. ದೈತ್ಯ ನಕ್ಷತ್ರವೊಂದರ ತಿರುಳನ್ನು ಬೈಜಿಕ ಸಂಲಯನ ಅದರದೇ ಗುರುತ್ವದಿಂದ ಪಾರಾಗಿಸಲು ಆಗದಿರ ಬಹುದು. ಅಂಥ ಸನ್ನಿವೇಶದಲ್ಲಿ ತಿರುಳು ಸ್ಫೋಟಗೊಂಡು ಸೂಪರ್‌ ನೋವಾ ಆದೀತು. ಆ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿ ಎಷ್ಟು ಗೊತ್ತೇ? ಸೂರ್ಯ ನಂಥ ತಾರೆ ತನ್ನ ಜೀವಮಾನದಲ್ಲಿ ಬಿತ್ತರಿಸುವ ಒಟ್ಟು ಶಕ್ತಿಯ ಹಲವು ಪಟ್ಟು! ಸೂರ್ಯನ ಆಯುಷ್ಯ ಹತ್ತು ಬಿಲಿಯನ್‌ ವರ್ಷಗಳು. ಈಗ ಅವನಿಗೆ ನಡು ವಯಸ್ಸು. ಚಿಂತೆ ಬೇಡ! ಮತ್ತೂ 5 ಬಿಲಿಯನ್‌ ವರ್ಷಗಳಿವೆ. ಆಯುಷ್ಯದ ಉತ್ತ ರಾರ್ಧದಲ್ಲಿ ಕಾಲಕ್ರಮೇಣ ಕೆಂಪೇರಿಯಾನು. ತನ್ನ ಪ್ರಖರತೆಯನ್ನು 2000 ಪಟ್ಟು ಹೆಚ್ಚಿಸಿಕೊಳ್ಳುವನು. ಸೀಮೆಣ್ಣೆ ಒಲೆ ಸೀಮೆಣ್ಣೆ ಖಾಲಿಯಾದಂತೆ ಕೆಂಪಗೆ ಉರಿದಂತೆ. ಕಡೆಗೊಂದು ದಿನ ಅಂತ್ಯವಾಗಲೇಬೇಕಲ್ಲ-“ಜಾತಸ್ಯ ಮರಣಮ್‌ ಧ್ರುವಮ್‌’.

ಇದೀಗ ಚಿತ್ರವಾಗಿ ದಕ್ಕಿರುವ “ಕೃಷ್ಣ ವಿವರ’ ಮೆಸಿಯರ್‌ ನಕ್ಷತ್ರ ರಾಶಿಯ ಕೇಂದ್ರದಲ್ಲಿದೆ. ಸುತ್ತಲ ಪ್ರಕಾಶಯುತ ಬಳೆಯನ್ನು ಹೋಲುವ ವಲಯದಿಂದಷ್ಟೆ ಅದನ್ನು ಗುರುತಿಸಬಹುದು. ಈ ವಲಯವನ್ನು “ಘಟನಾ ಕ್ಷಿತಿಜ’ (ಇವೆಂಟ್‌ ಹೊರೈಸನ್‌) ಎನ್ನುತ್ತಾರೆ. ಈ ಮಿತಿಯೊಳಗೆ ಬೆಳಕು ಹೊರಗೆ ಹಾಯದು. ಆ ಗಡಿಯಲ್ಲೋ ಹೆಚ್ಚಿನ ಪ್ರಮಾಣದಲ್ಲಿ ಅನಿಲಗಳು, ಮೇಘಗಳು, ಪ್ಲಾಸ್ಮ ಅಥವಾ ಅಯಾನೀಕೃತ ಅನಿಲಗಳದ್ದೇ ಕಾರುಬಾರು. ಘಟನಾ ಕ್ಷಿತಿಜ ಗೋಚರ ಬೆಳಕನ್ನೊಳಗೊಂಡಂತೆ ಎಲ್ಲ ಬಗೆಯ ವಿಕಿರಣಗಳನ್ನೂ ಹೊರಸೂಸುತ್ತದೆ. ದೂರ ಭೂಮಿಯಿಂದ 55 ಮಿಲಿಯನ್‌ ಜ್ಯೋತಿರ್ವರ್ಷಗಳು. ದ್ರವ್ಯರಾಶಿಯೋ ಸೂರ್ಯನದರ ಆರೂವರೆ ಬಿಲಿಯನ್‌ಗಳಷ್ಟು. ಅದು ಸರಿ, ಫೋಟೋ ತೆಗೆಯಲು ಅದು ದಕ್ಕಿದ್ದು ಹೇಗೇ? ಬಳಸಿದ್ದು ಒಂದಲ್ಲ….ಜಗತ್ತಿನ ನಿರ್ದಿಷ್ಟ ಕಡೆಗಳಲ್ಲಿ ನೆಲೆಗೊಳಿಸುವುದೇನು ಸಾಮಾನ್ಯದ ಮಾತೆ? ಅದೂ ಪರಮಾಣು ಗಡಿಯಾರ ಸಜ್ಜಿತ ರೇಡಿಯೋ ದೂರದರ್ಶಕಗಳು. ನಿಜಕ್ಕೂ ದೂರದರ್ಶಕದ ಮೂಲಕ ಕಪ್ಪು ರಂಧ್ರ ಕಾಣುವುದು ಕನಸೇ ಆಗಿತ್ತು. ಅಳವಡಿಸಿದ ತಂತ್ರಜ್ಞಾನ ವಿ.ಎಲ್‌.ಬಿ.ಐ.

( ವೆರಿ ಲಾಂಗ್‌ ಬೇಸ್‌ಲೈನ್‌ ಇಂಟೆರ್‌ ಫೆರೊಮೆಟ್ರಿ). ಏಕ ಕಾಲದಲ್ಲಿ ಚಿತ್ರಗಳನ್ನು ತೆಗೆದರು. ಎಲ್ಲ ಬಿಂಬಗಳನ್ನೂ ಸಂಕಲಿಸಿ ಒಂದೇ ಚಿತ್ರವಾಗಿಸಿದರು. ದೊರಕಿದ ಫ‌ಲದಲ್ಲಿ ಅಸ್ಪಷ್ಟತೆಯಿದೆ. ಕಪ್ಪು ಕುಳಿ ಎಷ್ಟಾದರೂ 55 ಮಿಲಿಯನ್‌ ಜೋತಿರ್ವರ್ಷಗಳ ದೂರದ್ದು! ಛಾಯಾ ಚಿತ್ರದಲ್ಲಿ ಕಾಣುತ್ತಿದೆಯಲ್ಲ ಕಪ್ಪು ಭಾಗ, ಅದರ ವ್ಯಾಸ 25 ಮಿಲಿಯನ್‌ ಮೈಲಿಗಳು! ಇಂಥದ್ದೊಂದು ಛಾಯಾಚಿತ್ರಕ್ಕಾಗಿ ತಾನೆ ಎಲ್ಲರೂ ನೋಡಬೇಕು, ನೋಡಿಯೇ ಬಿಡಬೇಕು ಅಂತ ಶತಮಾನಗಳಿಂದಲೂ ಕಾದಿದ್ದು. ಮನುಷ್ಯನಿಗೆ ದಕ್ಕದ್ದಿಲ್ಲ. “ನಾವು ಕಾಣಲಾಗದ್ದನ್ನು ಕಂಡೆವು’ ಎಂದು ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಶೆಪರ್ಡ್‌ ದೊಲೈಮನ್‌ಎಪ್ರಿಲ್‌ 10 ರಂದೇ ಪತ್ರಿಕಾಗೋಷ್ಠಿಯಲ್ಲಿ ಉದ್ಗರಿಸಿದರು. ಬ್ರಹ್ಮಾಂಡದ ಅನ್ವೇಷಣೆ, ಆವಿಷ್ಕಾರ ಮತ್ತು ಅರ್ಥೈಸಿಕೊಳ್ಳುವಿಕೆಗೆ ಇದೊಂದು ಐತಿಹಾಸಿಕ ತಿರುವು.

ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next