Advertisement

ಹೊಸ ಸಮುದ್ರದ ಸೃಷ್ಟಿಗೆ ಕಾರಣವಾಗಲಿದೆಯೇ ಆಫ್ರಿಕಾದ ಬಿರುಕು?

08:23 AM Aug 14, 2020 | mahesh |

ಅದಿಸ್‌ ಅಬಾಬಾ: ಹಿಂದಿನಿಂದಲೂ ಹಲವು ಭೌಗೋಳಿಕ ವಿಸ್ಮಯಗಳಿಗೆ ಸಾಕ್ಷಿಯಾಗಿರುವ ಆಫ್ರಿಕಾವು ಈಗ ಮತ್ತೂಂದು ಅಚ್ಚರಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಆಫ್ರಿಕಾದ ಇಥಿಯೋಪಿಯಾದ ಅಫ‌ರ್‌ ಪ್ರದೇಶದಿಂದ ಮೊಜಾಂಬಿಕ್‌ವರೆಗಿನ ಪ್ರದೇಶದುದ್ದಕ್ಕೂ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಿರುಕು, ಮುಂದೊಂದು ದಿನ ಖಂಡವನ್ನೇ ಎರಡು ಸೀಳಾ ಗಿಸಿ, ಅಲ್ಲಿ ಹೊಸ ಸಾಗರವೊಂದರ ಸೃಷ್ಟಿಗೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯೊಂದನ್ನು ಮೂಡಿಸಿದೆ.

Advertisement

ಜ್ವಾಲಾಮುಖಿಯ ನರ್ತನ: ಲಕ್ಷಾಂತರ ವರ್ಷಗಳಿಂದಲೂ ಈ ನೆಲದಲ್ಲಿ ವರ್ಷಕ್ಕೆ 7ಮಿ.ಮೀ.ನಷ್ಟು ಬಿರುಕು ಕಾಣಿಸಿಕೊಳ್ಳುತ್ತಲೇ ಇದೆ. ಈ ಬಿರುಕಿನುದ್ದಕ್ಕೂ ನಿಯಮಿತವಾಗಿ ಜ್ವಾಲಾಮುಖೀಯೂ ಸ್ಫೋಟಗೊಳ್ಳುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ‌, ಆಫ್ರಿಕಾ ಖಂಡವು ಎರಡು ಹೋಳುಗಳಾಗಿ ಒಡೆಯಬಹುದು ಮತ್ತು ಸೀಳಾದ ಪ್ರದೇಶದಲ್ಲಿ ಸಮುದ್ರವೊಂದು ಜನ್ಮತಾಳಬಹುದು ಎಂದು ಹೇಳಲಾಗುತ್ತಿದೆ.

ಲಕ್ಷಾಂತರ ವರ್ಷ
ಇಲ್ಲಿರುವ ಎರ್ಟಾ ಏಲ್‌ ಜ್ವಾಲಾಮುಖಿಯು ಕಳೆದ 50 ವರ್ಷಗಳಿಂದಲೂ ನಿರಂತರವಾಗಿ ಅಗ್ನಿಯನ್ನು ಉಗುಳುತ್ತಲೇ ಇದೆ. ಇದು ಹೀಗೇ ಮುಂದುವರಿದರೆ, ಹೊಸ ಕಿರಿದಾದ ಸಮುದ್ರವು ಸೃಷ್ಟಿಯಾಗಲಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಪೂರ್ವ ಆಫ್ರಿಕಾದಲ್ಲಿನ ಬಿರುಕಿನ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಸದ್ಯದ ಮಟ್ಟಿಗೆ ಬಿರುಕು ಸೃಷ್ಟಿಯಾಗುತ್ತಿರುವ ಗತಿ ನೋಡಿದರೆ, ಕಾಲಕ್ರಮೇಣ ಆಫ್ರಿಕಾವು ಎರಡು ಹೋಳಾಗಿ ಅಲ್ಲಿ ಸಾಗರವು ಸೃಷ್ಟಿಯಾ ಗಲು ಇನ್ನೂ ಲಕ್ಷಾಂತರ ವರ್ಷಗಳೇ ಬೇಕಾಗಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಸ್ಮಯಗಳ ತವರು
ಹಲವಾರು ವಿಸ್ಮಯಗಳನ್ನು ಕಂಡಿರುವ ಪೂರ್ವ ಆಫ್ರಿಕಾವು ತನ್ನಲ್ಲಿರುವ ಭೌಗೋಳಿಕ ಅಚ್ಚರಿಗಳಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜಗತ್ತಿನ 4ನೇ ಅತಿದೊಡ್ಡ ಶುಭ್ರನೀರಿನ ಮಲಾವಿ ಸರೋವರ, ಜಗತ್ತಿನ ಎರಡನೇ ಅತಿ ಆಳವಾದ ತಂಗನ್ಯಿಕಾ ಸರೋವರವು ಪ್ರವಾಸಿಗರನ್ನು ಸೆಳೆಯುವ ತಾಣಗಳಾಗಿವೆ. ಜತೆಗೆ, ತಾಂಜಾನಿಯಾದ ಒಲ್‌ ಡೋಯಿನ್ಯೋ ಲೆಂಗಾಯಿ, ಇಂಥಿಯೋಪಿಯಾದ ದಲ್ಲಾಫಿಲ್ಲಾ ಮತ್ತು ಎರ್ಟಾ ಏಲ್‌ ಎಂಬ ಸಕ್ರಿಯ ಜ್ವಾಲಾಮುಖಿಗಳೂ ಆಗಾಗ ಸುದ್ದಿ ಮಾಡುತ್ತಲೇ ಇರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next