Advertisement

ಮಂಜು ಕರಗಿಸಲು ವಿಜ್ಞಾನಿಗಳ ಮೊರೆ

06:23 AM Feb 05, 2019 | Team Udayavani |

ಬೆಂಗಳೂರು: ವಿಮಾನಗಳ ಹಾರಾಟಕ್ಕೆ ತಲೆನೋವಾಗಿ ಪರಿಣಮಿಸಿರುವ ಮಂಜಿನ (ಇಬ್ಬನಿ) ಸಮಸ್ಯೆಯಿಂದ ಪಾರಾಗಲು ಮುಂದಾಗಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌), ಇದಕ್ಕಾಗಿ ವಿಜ್ಞಾನಿಗಳ ಮೊರೆಹೋಗಿದೆ.  

Advertisement

ಈ ಸಂಬಂಧ ಸೋಮವಾರ ಬಿಐಎಎಲ್‌ ಮತ್ತು ಪ್ರತಿಷ್ಠಿತ ಜವಾಹರಲಾಲ್‌ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ಜೆಎನ್‌ಸಿಎಎಸ್‌ಆರ್‌) ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿತು. ಸುಮಾರು 40 ತಿಂಗಳು ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿ, ಮಂಜಿನ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಳವಡಿಸಲು ಉದ್ದೇಶಿಸಲಾಗಿದೆ.

ಈ ಮೂಲಕ ಪ್ರಯಾಣಿಕರಿಗೆ ಸಮಸ್ಯೆ ಆಗುವುದನ್ನು ಸಾಧ್ಯವಾದಷ್ಟು ತಪ್ಪಿಸಬಹುದು. ಮಂಜಿನ ಸಮಸ್ಯೆ ಕುರಿತು ಇಂತಹದ್ದೊಂದು ಒಡಂಬಡಿಕೆ ಆಗುತ್ತಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ. ಒಡಂಬಡಿಕೆಗೆ ಸಹಿ ಹಾಕಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಎನ್‌ಸಿಎಎಸ್‌ಆರ್‌ನ ಪ್ರೊಫೆಸರ್‌ ಹಾಗೂ ಅಧ್ಯಯನ ತಂಡದ ಮುಖ್ಯಸ್ಥ ಪ್ರೊ. ಶ್ರೀನಿವಾಸ್‌, “ಎಷ್ಟು ಹೊತ್ತು ಮಂಜು ಕವಿಯಲಿದೆ?

ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ಸಮಯದಲ್ಲಿ ಆವರಿಸಬಹುದು ಎನ್ನುವುದರ ಬಗ್ಗೆ ನಿಖರ ಮಾಹಿತಿಯನ್ನು ಕನಿಷ್ಠ 4ರಿಂದ 5 ತಾಸು ಮುಂಚಿತವಾಗಿ ಪಡೆಯುವುದು ಈ ಸಂಶೋಧನೆಯ ಉದ್ದೇಶವಾಗಿದೆ. ಈ ಮುನ್ಸೂಚನೆಗೆ ಅನುಗುಣವಾಗಿ ವಿಮಾನಗಳ ಕಾರ್ಯಾಚರಣೆ ನಡೆಸಬಹುದು. ಇದರಿಂದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ’ ಎಂದು  ತಿಳಿಸಿದರು.

ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್‌ ಮಾತನಾಡಿ, ಪ್ರತಿ ವರ್ಷ ಚಳಿಗಾಲದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆವರಿಸುವ ದಟ್ಟ ಮಂಜು, ನೂರಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯಯಕ್ಕೆ ಕಾರಣವಾಗುತ್ತಿದೆ.

Advertisement

ಇದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನ ಸೇವೆಯಲ್ಲಿನ ವ್ಯತ್ಯಯಕ್ಕೂ ಎಡೆಮಾಡಿಕೊಡುತ್ತಿದ್ದು, ಒಟ್ಟಾರೆಯಾಗಿ ವಿಮಾನಯಾನ ಸೇವೆಯ ಕಾರ್ಯದಕ್ಷತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ, ಪರಿಹಾರ ಕಂಡುಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಇತರೆ ನಿಲ್ದಾಣಗಳಿಗೂ ಅನುಕೂಲ: ಜೆಎನ್‌ಸಿಎಎಸ್‌ಆರ್‌ ಅಧ್ಯಕ್ಷ ಪ್ರೊ.ನಾಗರಾಜ ಮಾತನಾಡಿ, “ಈಗಾಗಲೇ ಮಂಜಿನ ಬಗ್ಗೆ ಸಂಸ್ಥೆ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ. ಈ ಒಪ್ಪಂದ ಮತ್ತಷ್ಟು ಪರಿಣಾಮಕಾರಿ ಸಂಶೋಧನೆಗೆ ಪೂರಕವಾಗಲಿದೆ. ಬಿಐಎಎಲ್‌ಗೆ ಮಾತ್ರವಲ್ಲ; ಭವಿಷ್ಯದಲ್ಲಿ ದೇಶದ ಇತರೆ ವಿಮಾನ ನಿಲ್ದಾಣಗಳೂ ಇದರ ಉಪಯೋಗ ಪಡೆಯಬಹುದು ಎಂದು ತಿಳಿಸಿದರು.

ಸ್ಟ್ರಾಟಜಿ ಆಂಡ್‌ ಡೆವಲಪ್‌ಮೆಂಟ್‌ ವಿಭಾಗದ ಸೆಂಟರ್‌ ಆಫ್ ಎಕ್ಸಲನ್ಸ್‌ನ ಸಹಾಯಕ ಉಪಾಧ್ಯಕ್ಷ ಅರುಣಾಚಲಂ ಮಾತನಾಡಿ, “ಮಂಜಿನಲ್ಲೂ ವಿಮಾನಗಳು ಕಾರ್ಯಾಚರಣೆ ಮಾಡುವ ತಂತ್ರಜ್ಞಾನ ಕೆಟಗರಿ-3 ವ್ಯವಸ್ಥೆ ಇದೆ. ಆದರೆ ನಿಲ್ದಾಣಗಳ ನಿಲುಗಡೆ ಸೂಚನೆ, ನಿರ್ದೇಶನ ನೀಡುವುದು ಮತ್ತಿತರ ಕಾರ್ಯಗಳಿಗೆ ವಿಮಾನದ ಚಲನ-ವಲನದ ಸ್ಪಷ್ಟತೆ ಗೊತ್ತಾಗುವುದಿಲ್ಲ.

ಅಷ್ಟಕ್ಕೂ ಕೆಲವೇ ವಿಮಾನಗಳು ಈ ತಂತ್ರಜ್ಞಾನ ಹೊಂದಿವೆ. ಹೀಗಾಗಿ, ನಿರೀಕ್ಷಿತ ಮಟ್ಟದಲ್ಲಿ ಇದು ಫ‌ಲ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ವಿಜ್ಞಾನಿಗಳಾದ ಡಾ.ಸಿ.ಎನ್‌.ಆರ್‌. ರಾವ್‌, ಪ್ರೊ.ರೊದ್ದಂ ನರಸಿಂಹ, ಬಿಐಎಎಲ್‌ನ ಸ್ಟ್ರಾಟಜಿ ಆಂಡ್‌ ಡೆವಲಪ್‌ಮೆಂಟ್‌ ವಿಭಾಗದ ಮುಖ್ಯಸ್ಥ ಸತ್ಯಕಿ ರಘುನಾಥ್‌ ಮತ್ತಿತರರು ಉಪಸ್ಥಿತರಿದ್ದರು.  

200-300 ವಿಮಾನಗಳ ಸೇವೆ ವ್ಯತ್ಯಯ: ಚಳಿಗಾಲದಲ್ಲಿ (ನವೆಂಬರ್‌-ಫೆಬ್ರವರಿ) ಸುಮಾರು 20ರಿಂದ 25 ದಿನಗಳು ಮಂಜು ಕವಿದಿರುತ್ತದೆ. ಇದರಿಂದ ಸರಾಸರಿ 1ರಿಂದ 2 ತಾಸು ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಸಾಮಾನ್ಯವಾಗಿ ದಿನಗಟ್ಟಲೆ ಮಂಜು ಕವಿದಿರುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೆರಡು ತಾಸು ಈ ಸಮಸ್ಯೆ ಇರುತ್ತದೆ. ಆದರೆ, ಕೇವಲ ಒಂದೆರಡು ಗಂಟೆ ಕಾರ್ಯಾಚರಣೆ ಸ್ಥಗಿತಗೊಂಡರೂ ಸುಮಾರು 200-300 ವಿಮಾನಗಳ ಸೇವೆ ಮೇಲೆ ಪರಿಣಾಮ ಬೀರುತ್ತದೆ ಎಂದು ಬಿಐಎಎಲ್‌ ಅಧಿಕಾರಿಯೊಬ್ಬರು ತಿಳಿಸಿದರು. 

ವಿಸ್ತರಿಸುತ್ತಿದೆ ಮಂಜು: ವರ್ಷದಿಂದ ವರ್ಷಕ್ಕೆ ವಿಮಾನ ನಿಲ್ದಾಣದಲ್ಲಿ ಆವರಿಸುವ ಮಂಜಿನ ಪ್ರಮಾಣ ವಿಸ್ತರಣೆ ಆಗುತ್ತಿದೆ. ಈ ಮೊದಲು ರನ್‌ವೇ ಅಥವಾ ಏಪ್ರಾನ್‌ (apron)ಗೆ ಸೀಮಿತವಾಗಿರುತ್ತಿತ್ತು. ಆದರೆ, ಈಗ ಇಡೀ ನಿಲ್ದಾಣಕ್ಕೆ ಹಬ್ಬುತ್ತಿದೆ. ಇದರಿಂದ ಸಮಸ್ಯೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next