Advertisement

ವನ್ಯ ಜೀವಿಗಳ ಹಾವಳಿ ತಡೆಗೆ ವೈಜ್ಞಾನಿಕ ಕ್ರಮ ಅನಿವಾರ್ಯ

09:39 PM Jul 01, 2019 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿ ನಿಯಂತ್ರಣ ಕ್ರಮಗಳ ಕುರಿತು ಅಧ್ಯಯನ ನಡೆಸಲು ಶೀಘ್ರದಲ್ಲೇ ತಜ್ಞರ ತಂಡವನ್ನು ಶ್ರೀಲಂಕಾ ದೇಶಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಎಚ್‌.ಡಿ.ರೇವಣ್ಣ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆನೆ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಶ್ರೀಲಂಕಾಕ್ಕೆ ಅಧ್ಯಯನ ತಂಡ: ವನ್ಯ ಜೀವಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮವ‌ನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಎಲ್ಲಾ ರೀತಿಯ ಅಧ್ಯಯನ, ಅಭಿಪ್ರಾಯ ಸಂಗ್ರಹ ಅಗತ್ಯವಿರುವುದರಿಂದ ತಜ್ಞರ ತಂಡವನ್ನು ಶ್ರೀಲಂಕಾ ದೇಶಕ್ಕೆ ಕಳುಹಿಸಲಾಗುವುದು ಎಂದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಲವು ವರ್ಷಗಳಿಂದ ಆನೆ ಹಾವಳಿ ನಿಯಂತ್ರಣ ಮಾಡಲು ಯಾವುದೇ ಯೋಜನೆ ರೂಪಿಸಲಾಗಿಲ್ಲ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಜಿಲ್ಲಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು, ಪರಿಸರವಾದಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಕ್ರೂಡೀಕೃತ ವ್ಯವಸ್ಥಿತ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾ ಮಂತ್ರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ಸಚಿವರು ಆನೆ ಹಾವಳಿ ತಡೆಗೆ ಹಾಗೂ ವೈಜ್ಞಾನಿಕ ರೀತಿಯ ಪರಿಹಾರ ಕ್ರಮಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಮುನ್ನಾ ಅಥವಾ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇನ್ನೊಂದು ಸುತ್ತಿನ ಪ್ರಮುಖ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆ ಗಮನಕ್ಕೆ ತಂದರು.

ಅರಣ್ಯ ಸಿಬ್ಬಂದಿಯಿಂದ ಮಾಹಿತಿ: ಅರಣ್ಯ ಇಲಾಖೆಯಿಂದ ಈಗಾಗಲೇ ನೇಮಿಸಿರುವ ಸಿಬ್ಬಂದಿ 120 ಮಂದಿಯ ವಿವಿಧ ತಂಡದ ಮೂಲಕ ಆನೆಗಳು ಗ್ರಾಮಕ್ಕೆ ಪ್ರವೇಶ ಮಾಡದಂತೆ ಹಾಗೂ ಕೃಷಿ ಭೂಮಿಗೆ ಬಾರದಂತೆ ಅವುಗಳನ್ನು ಕಾಡಿಗೆ ಓಡಿಸುವ ಕೆಲಸವಾಗುತ್ತಿದೆ, ಆನೆಗಳ ಓಡಾಟದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು, ಕ್ರಮ ಸ್ವಾಗಾತಾರ್ಹ ಆದರೆ ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.

Advertisement

ಪ್ರತ್ಯೇಕ ವನ್ಯಜೀವಿ ವಿಭಾಗ ಅಗತ್ಯ: ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ ಜಿಲ್ಲೆಯ ಮಲೆನಾಡು ಭಾಗಕ್ಕೆ ಪ್ರತ್ಯೇಕ ವನ್ಯಜೀವಿ ಉಪವಿಭಾಗ ಅಗತ್ಯವಿದೆ. ಅರಣ್ಯ ಕಾಲೇಜು ಸ್ಥಾಪನೆ ಮಾಡಬೇಕಿದೆ.

ಆನೆ ಹಾಗೂ ವನ್ಯ ಜೀವಿಗಳ ಹಾವಳಿಯಿಂದ ಆಗುವ ನಷ್ಟಕ್ಕೆ ಸರಿಯಾದ ಪರಿಹಾರ, ಸಕಲಾದಲ್ಲಿ ವಿತರಣೆಯಾಗಬೇಕು. ಶೇ.50:50 ಅನುಪಾತದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಭರಿಸಬೇಕು. ಆನೆ ಕಾರಿಡಾರ್‌ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿಯೋಗ ಕರೆದೊಯ್ಯುವಂತೆ ಸಚಿವರನ್ನು ಒತ್ತಾಯಿಸಿದರು.

ಆರ್‌.ಪಿ.ವೆಂಕಟೇಶ್‌ ಮೂರ್ತಿ, ಅತ್ತಿಹಳ್ಳಿ ದೇವರಾಜ್‌, ಕಿಶೋರ್‌ ಕುಮಾರ್‌, ಜಿ.ಆರ್‌.ಕೆಂಚೇಗೌಡ, ಬೆಳೆಗಾರರ ಒಕ್ಕೂಟದ ತೀರ್ಥ ಮಲ್ಲೇಶ್‌, ತೋಚ ಅನಂತ ಸುಬ್ಬರಾವ್‌ ಮತ್ತಿತರರು ಆನೆ ಹಾವಳಿ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಸಕಲೇಶಪುರ ಮತ್ತು ಆಲೂರು ತಾಲೂಕು ವ್ಯಾಪ್ತಿಯಲ್ಲಿ ವ್ಯವಸ್ಥಿತ ಆನೆ ಕಾರಿಡಾರ್‌ ಸ್ಥಾಪನೆ, ನಾಗಾವರದಲ್ಲಿ ಆನೆಧಾಮ ಸ್ಥಾಪನೆ, ಕರಡಿಬೆಟ್ಟ ಸೇರಿದಂತೆ ಅರಣ್ಯ ಭಾಗದಲ್ಲಿ ಆನೆಗಳಿಗೆ ಆಹಾರ ಪ್ರಮಾಣ ಹೆಚ್ಚಾಗಿ ಲಭ್ಯವಾಗುವಂತೆ ಮಾಡುವುದು.

ಶ್ರೀಲಂಕಾ ಮಾದರಿಯಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ತಡೆಗೋಡೆ ನಿರ್ಮಾಣ, ಅರಣ್ಯ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ತಡೆ ನೀಡುವುದು. ಪರಿಹಾರ ಮೊತ್ತವನ್ನು ಹೆಚ್ಚಿಸುವುದು. ಆನೆ ಮತ್ತು ಕಾಡು ಪ್ರಾಣಿಗಳ ದಾಳಿಗಳ ನಿಯಂತ್ರಣಕ್ಕೆ ವ್ಯವಸ್ಥಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಿಂಡಿ ಅಣೆಕಟ್ಟು ನಿರ್ಮಾಣ: ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳ ನಿರ್ಮಾಣ, ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಕಾರ್ಯವನ್ನು ಮಾಡಲು ಮುಂದಾದರೆ ಅರಣ್ಯ ಇಲಾಖೆ ಅದಕ್ಕೆ ಅನುಮತಿ ನೀಡುತ್ತಿಲ್ಲ ಮುಂದಿನ ದಿನಗಳಲ್ಲಿ ಈ ಗೊಂದಲಗಳು ಪರಿಹಾರವಾಗಬೇಕು ಅರಣ್ಯ ಪ್ರದೇಶಗಳಲ್ಲಿ ನೀರಿನ ಸಂಗ್ರಹಕ್ಕೆ ಕ್ರಮಗಳಾಗಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇಲಾಖೆಗಳ ನಡುವಿನ ಗೊಂದಲವನ್ನು ತಕ್ಷಣ ಬಗೆಹರಿಸಿಕೊಂಡು ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಕಡೆಗಳ ಕಿಂಡಿ ಅಣೆಕಟ್ಟೆಯನ್ನು ನಿರ್ಮಿಸಿ ವನ್ಯ ಜೀಗಳಿಗೆ ಕುಡಿಯಲು ನೀರು ಪೂರೈಸಿ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಅವರು ಈವರೆಗೆ ತೆಗೆದು ಕೊಂಡಿರುವ ತಾತ್ಕಾಲಿಕ ಹಾಗೂ ಶಾಶ್ವತ ಕ್ರಮವ‌ನ್ನು ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ ಮೂಲಕ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸಾಮಿ, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ಕವಿತಾ ರಾಜಾರಾಂ, ತಹಸೀಲ್ದಾರ್‌ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಅರಣ್ಯ ಕಾಲೇಜು ಆರಂಭಿಸಲು ಕ್ರಮ: ಸಕಲೇಶಪುರ ತಾಲೂಕಿನ ಆನೆ ಹಾವಳಿ ಪ್ರದೇಶಗಳಲ್ಲಿ ಅರಣ್ಯ ಕಾಲೇಜು ಪ್ರಾರಂಭಿಸುವ ಅಗತ್ಯವಿದೆ. ಸ್ಥಳೀಯವಾಗಿ ಎರಡು ಮೊರಾರ್ಜಿ ವಸತಿ ಶಾಲೆ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಆನೆ ಹಾವಳಿ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಅರಣ್ಯ ಇಲಾಖೆ ಮಾಡಿರುವ ಕ್ರಮ ಹಾಗೂ ಆನೆಗಳಿಗೆ ರೆಡಿಯೋ ಕಾಲರ್‌ ಅಳವಡಿಕೆ ಮೂಲಕ ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಂಚಿಕೆ ಪರಿಣಾಮಕಾರಿಯಾಗಬೇಕು ಎಂದು ಸಚಿವ ರೇವಣ್ಣ ಹೇಳಿದರು.

ಬಿದಿರು, ಹಸಲು ಬಿತ್ತನೆಗೆ ಕ್ರಮ: ಹೆಲಿಕಾಪ್ಟರ್‌ ಮೂಲಕ ಬಿದಿರು, ಹಲಸು, ಬೈನೆ ಸೇರಿದಂತೆ ಮತ್ತಿತರ ಗಜಪ್ರಿಯ ಆಹಾರ ಮರ ಗಿಡ ಬೀಜ ಬಿತ್ತನೆಗೂ ಪ್ರಯತ್ನ ನಡೆಸೋಣ, ಬುರಡಾಳು ಬೋರೆ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಪರಿಸರಕ್ಕೆ ಮಾರಕವಾದ ಸಸಿಗಳನ್ನು ತೆಗೆದು ವನಸ್ನೇಹಿ ಗಿಡಗಳನ್ನು ಮಾತ್ರ ನೆಡಬೇಕು, ಅರಣ್ಯ ಅಭಿವೃದ್ಧಿ ಯೋಜನೆಯನ್ನು ವ್ಯವಸ್ಥಿತವಾಗಿ ರೂಪಿಸಿ ಜಾರಿಗೊಳಿಸಬೇಕು. ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳ ಅಭಿವೃದ್ಧಿ ಪಡಿಸಬೇಕು. ಇದಕ್ಕೆ 10 ಕೋಟಿ ರೂ. ಅನುದಾನವನ್ನು ಅರಣ್ಯ ಇಲಾಖೆಗೆ ನಬಾರ್ಡ್‌ ಯೋಜನೆಯಲ್ಲಿ ಒದಗಿಸುವುದಾಗಿ ರೇವಣ್ಣ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next