Advertisement
ಇಷ್ಟೆಲ್ಲ ಇದ್ದರೂ ನಾವೇಕೆ ನಮ್ಮ ಶಕ್ತಿಯನ್ನು ಸದುಪಯೋಗ ಪಡಿಸಿಕೊಂಡಿಲ್ಲ? 2020-21ರ ಅಂಕಿಅಂಶಗಳ ಪ್ರಕಾರ ನಾವು ಆಮದು ಮಾಡಿಕೊಂಡಿರುವ ವಿದ್ಯುನ್ಮಾನ ಉಪಕರಣಗಳ ಸಂಖ್ಯೆ, ರಫ್ತು ಮಾಡಿದ್ದಕ್ಕಿಂತ ಐದು ಪಟ್ಟು ಹೆಚ್ಚು! ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮದೇ ಆದ ಘನವಾದ ಸ್ಥಾನ ಹೊಂದಿರಬೇಕಾಗಿದ್ದ ನಾವು ಇನ್ನೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮೇಲೇ ಅವಲಂಬಿತವಾಗಿರುವುದು ಏಕೆ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನಮ್ಮ ಸರಕಾರಗಳು ಪರಿಪೂರ್ಣ ಪರಾಮರ್ಶೆ ಮಾಡಿ ಕಂಡುಕೊಳ್ಳಬೇಕಿದೆ.
Related Articles
Advertisement
ನಮ್ಮ ಸರಕಾರಗಳು ಇನ್ನು ಮುಂದೆಯಾದರೂ ಅಮೆರಿಕ ಮಾದರಿಯನ್ನನುಕರಿಸಿ ಸಾರ್ವಜನಿಕ ವಲಯ ಕ್ಷೇತ್ರದ ಸಂಶೋಧನೆ ಹಾಗೂ ಕಲಿಕಾ ಸಂಸ್ಥೆಗಳನ್ನು ಸಶಕ್ತಗೊಳಿಸಲಿ, ಅತ್ಯುತ್ತಮ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆಗಳ ಸಲುವಾಗಿ ಧನಸಹಾಯ ನೀಡಲಿ, ತನ್ಮೂಲಕ ದೇಶವನ್ನು ಸಶಕ್ತಗೊಳಿಸಲಿ ಎಂಬುದು ನನ್ನ ಅಭಿಲಾಷೆ. ಇತ್ತೀಚಿನ ಭಾರತದಲ್ಲಿಯೇ ಉತ್ಪಾದಿಸಿ ಅಂದರೆ ಮೇಕ್ ಇನ್ ಇಂಡಿಯಾ ಅಭಿಯಾನ ಕೊಂಚ ಆಸೆ ಮೂಡಿಸಿದೆ. ಇದು ಯಶಸ್ವಿಯಾ ಗಬೇಕಾದರೆ ಉದ್ಯಮಗಳ ತಾಂತ್ರಿಕ ಗುಣಮಟ್ಟಕ್ಕೆ ಅಗತ್ಯವಿರುವ ಸಂಶೋಧನೆಗಳನ್ನು ಸರಕಾರದ ಧನಸಹಾಯದಿಂದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳೂ ನಿರಂತರ ಮಾಡುತ್ತಲೇ ಹೋಗ ಬೇಕು. ಕೆಲವು ಘನತೆವೆತ್ತ ಖಾಸಗಿ ಮಹಾವಿದ್ಯಾಲಯಗಳು ಔನ್ನತ್ಯ ಕೇಂದ್ರಗಳನ್ನು ಸ್ಥಾಪಿಸಿವೆ. ಈ ಔನ್ನತ್ಯ ಕೇಂದ್ರಗಳಿಗೆ, ಸೂಕ್ತ ಪರಿವೀಕ್ಷಣೆಯ ತರುವಾಯದಲ್ಲಿ, ಸರಕಾರ ಆರ್ಥಿಕ ನೆರವನ್ನು ನೀಡಬೇಕು. ಮಾರುಕಟ್ಟೆಯ ಹಾಗೂ ಔದ್ಯಮಿಕ ಅಗತ್ಯತೆಗಳಿಗೆ ಸ್ಪಂದಿಸಿಯೇ ಕೆಲವು ಔನ್ನತ್ಯ ಕೇಂದ್ರಗಳನ್ನು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿವೆ. ಉದಾಹರಣೆಗೆ: ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಉದ್ಯಮಗಳಿಗೆ ನವನವೀನ ತಂತ್ರಜ್ಞಾನದ ನೆರವು ಒದಗಿಸಲೆಂದೇ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಕಲಿಕೆ ಹಾಗೂ ಸಂಶೋಧನೆಗಳಿಗೆ ಮೀಸಲಾದ ಔನ್ನತ್ಯ ಕೇಂದ್ರವೊಂದನ್ನು ಸ್ಥಾಪಿಸಿದೆ. ಇಂದು ಬೆಂಗಳೂರಿನಲ್ಲಿ ಹತ್ತು ಸಾವಿರಕ್ಕೂ ಅಧಿಕ ವೈಮಾನಿಕ ಕ್ಷೇತ್ರದ ಮಧ್ಯಮ ಪ್ರಮಾಣದ ಉದ್ಯಮಗಳು ತಲೆಯತ್ತಿವೆ. ಈ ಉದ್ಯಮಗಳ ವಾರಸುದಾರರಿಗೆ ಹೊಸ ಹೊಸ ಸಂಶೋಧನೆಗಳ ಫಲಿತಗಳು ಆಗಾಗ್ಗೆ ಲಭಿಸುವುದು ಅತ್ಯಂತ ಅವಶ್ಯ; ಅವುಗಳಿಂದ ಅವರು ಮತ್ತಷ್ಟು ಬೆಳೆಯುತ್ತಾರೆ. ತತ್ಪರಿಣಾಮವಾಗಿ ಉದ್ಯೊಗಾವಕಾಶಗಳು ದುಪ್ಪಟ್ಟುಗೊಳ್ಳುತ್ತವೆ, ಕಾಲಕ್ರಮೇಣ ಬೆಂಗಳೂರು ಏರೋಸ್ಪೇಸ್ ನಗರ ಎಂದು ವಿಶ್ವದಲ್ಲಿಯೇ ಖ್ಯಾತಿ ಪಡೆಯಲು ಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಸರಕಾರ, ದೇಣಿಗೆ/ಆರ್ಥಿಕ ನೆರವು ಒದಗಿಸಿದರಷ್ಟೇ ಸಾಲದು. ಉನ್ನತ ಶಿಕ್ಷಣ ಸಂಸ್ಥೆಗಳೂ ಕೂಡ ಜಗತ್ತಿನ ಶ್ರೇಷ್ಠ ಮಾದರಿಯನ್ನನುಸರಿಸಿ ತಮ್ಮ ಕಾರ್ಯವೈಖರಿ ಯನ್ನೇ ಸಮರ್ಥ ರೀತಿಯಲ್ಲಿ ಪುನರ್ ರೂಪಿಸಿಕೊಳ್ಳಬೇಕು. ನಮ್ಮ ಪಠ್ಯಕ್ರಮವನ್ನು ವಿಶ್ವದ ಔದ್ಯಮಿಕ ಅಗತ್ಯಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತಲೇ ಇರಬೇಕು. ಇದಕ್ಕೆ ನಾವು ಕೈಗಾರಿಕೆಗಳು ಹಾಗೂ ಉದ್ಯಮ ಸಂಸ್ಥೆಗಳ ತಾಂತ್ರಿಕ ತಂಡಗಳೊಡನೆ ನಿರಂತರ ಸಂಪರ್ಕ ಹೊಂದಿರಬೇಕಾಗಿರುತ್ತದೆ. ನಮ್ಮ ಶಿಕ್ಷಕರನ್ನೂ ಕೂಡ ಕೈಗಾರಿಕೆಗಳಲ್ಲಿ ತರಬೇತಿ ಪಡೆಯಲು ಆಗಾಗ್ಗೆ ನಿಯೋಜಿಸ ಬೇಕಾಗುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು, ನಿರ್ವಾಹಕರು, ಆಡಳಿತಗಾರರು, ಕೈಗಾರಿಕೋದ್ಯಮಿಗಳು ಹಾಗೂ ಫಲಾನುಭವಿಗಳ ನಡುವೆ ಅರ್ಥಪೂರ್ಣ ವಿಚಾರ ವಿನಿಮಯಗಳಿಗೆ ಸಮರ್ಥ ವೇದಿಕೆ ಕಲ್ಪಿಸಬೇಕು. ಏಕೆಂದರೆ ಯಾವುದೇ ದೇಶದ ಆರ್ಥಿಕ ಅಭಿವೃದ್ಧಿ, ತಂತ್ರಜ್ಞಾನದಲ್ಲಿನ ಸುಧಾರಣೆ ಹಾಗೂ ಅತ್ಯುತ್ತಮ ತಂತ್ರಜ್ಞರನ್ನಾಧರಿಸಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಇಂತಹ ವಿನಿಮಯಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದರೆ ಅತ್ಯುತ್ತಮ.
ಶಿಕ್ಷಣ ಕ್ಷೇತ್ರದಲ್ಲಿ ಆರು ದಶಕಗಳ ಸುದೀರ್ಘ ಅನುಭವ ಇರುವ ನನ್ನನ್ನು ಇನ್ನೂ ಬಾಧಿಸುತ್ತಿರುವ ಸಂಗತಿ – ನಮ್ಮ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ ಶಿಕ್ಷಣದ ದುಃಸ್ಥಿತಿ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡಲೇ ಬೇಕೆಂಬ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸರಕಾರ ಎಲ್ಲ ಪ್ರಾಥಮಿಕ ಶಾಲೆಗಳನ್ನು ಸದೃಢಗೊಳಿಸಬೇಕಿದೆ. ನಮ್ಮ ದೇಶ ಗ್ರಾಮಗಳಿಂದ ಆವೃತವಾಗಿದೆ. ನನ್ನ ತಲೆಮಾರಿನ ಬಹು ತೇಕರು ಗ್ರಾಮೀಣ ಮೂಲದವರು. ಒಬ್ಬ ವ್ಯಕ್ತಿ ಪರಿಪೂರ್ಣ ಅನ್ನಿಸಬೇಕಾದರೆ ಆ ವ್ಯಕ್ತಿಗೆ ಗ್ರಾಮಗಳು ನೀಡುವ ಜೀವನಾನು ಭವ, ಕಲಿಸುವ ಮಾನವೀಯತೆ ಹಾಗೂ ಮೂಡಿ ಸುವ ಧಾರ್ಮಿಕ ಶ್ರದ್ಧೆ ನಿಜಕ್ಕೂ ಅನುಪಮ. ಕೃಷಿ ಬದುಕಿನ ತಳಪಾಯ ಗಟ್ಟಿಯಾಗಿದ್ದರೆ ಮಾತ್ರ ನಾವು ಎಂತಹ ಸವಾಲು ಗಳನ್ನೂ ಎದುರಿಸಬಲ್ಲೆವು. ಹೀಗಾಗಿ ನಮ್ಮ ದೇಶ ನಿಜಕ್ಕೂ ಶೈಕ್ಷಣಿಕ ಕ್ಷೇತ್ರದಲ್ಲಿ, ಔದ್ಯಮಿಕ ಕ್ಷೇತ್ರದಲ್ಲಿ ಹೊಸ ಹೊಸ ಮಜಲುಗಳನ್ನು ಕಾಣಬೇಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಾಥಮಿಕ, ಮಾಧ್ಯ ಮಿಕ ಹಾಗೂ ಪ್ರೌಢ ಶಿಕ್ಷಣ ವ್ಯವಸ್ಥೆ ಸುವ್ಯವಸ್ಥಿತವಾಗಿ ರಲೇಬೇಕು, ಇದು ಯಾವುದೇ ಸರಕಾರವಿರಲಿ, ಅದರ ಜವಾಬ್ದಾರಿ ಕೂಡ.
ಪ್ರೊ| ಎನ್.ಆರ್. ಶೆಟ್ಟಿ
ಲೇಖಕರು: ಕುಲಾಧಿಪತಿಗಳು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರಗಿ ಹಾಗೂ ಸಲಹೆಗಾರರು,ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳು, ಬೆಂಗಳೂರು