Advertisement

ವಿಜ್ಞಾನ ಸ್ಪರ್ಧೆಗಳಿಗೆ ಅನುದಾನಕ್ಕೆ ಬಡತನ

09:25 AM Jul 29, 2018 | Team Udayavani |

ಮಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಮನೋಭಾವ ಬೆಳೆಸುವುದಕ್ಕಾಗಿ ಶಿಕ್ಷಣ ಇಲಾಖೆ ಹಲವು ವಿಜ್ಞಾನ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಆದರೆ ವಿಜೇತ ವಿದ್ಯಾರ್ಥಿಗಳು ಬಹುಮಾನ ಮೊತ್ತದಿಂದ ಉತ್ತೇಜಿತರಾಗುವ ಬದಲು ನಿರಾಶರಾಗುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಈ ಮೊತ್ತ ಜುಜುಬಿ ಎಂಬಷ್ಟು ಅಲ್ಪ! ವಿಜ್ಞಾನ ಸ್ಪರ್ಧೆಗಳ ಆಯೋಜನೆ ಮತ್ತು ವಿಜೇತ ವಿದ್ಯಾರ್ಥಿಗಳಿಗೆ ನೀಡುವ ಪ್ರಶಸ್ತಿ ಮೊತ್ತದಲ್ಲಿ ಶಿಕ್ಷಣ ಇಲಾಖೆ ತೋರಿಸುತ್ತಿರುವ ಜಿಪುಣತನದಿಂದಾಗಿ ನೈಜ ಉದ್ದೇಶ ಈಡೇರುತ್ತಿಲ್ಲ. ಮೊತ್ತದಲ್ಲಿ ಏರಿಕೆ ಮಾಡಬೇಕು ಎಂದು ಶಿಕ್ಷಕ ಸಮುದಾಯ ಬೇಡಿಕೆ ಸಲ್ಲಿಸುತ್ತ ಬಂದಿದ್ದರೂ ಇಲಾಖೆಯಿಂದ ಈವರೆಗೆ ಸ್ಪಂದನೆ ದೊರಕಿಲ್ಲ.

Advertisement

ಹಲವು ಸ್ಪರ್ಧೆಗಳು ರಾಜ್ಯದ ಪ್ರೌಢ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಸ್ಪರ್ಧೆ, ವಸ್ತು ಪ್ರದರ್ಶನಗಳನ್ನು ಬ್ಲಾಕ್‌, ಜಿಲ್ಲಾ ಮತ್ತು ವಿಭಾಗಗಳ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಬ್ಲಾಕ್‌ ಹಾಗೂ ಜಿಲ್ಲಾ ಮಟ್ಟದಲ್ಲಿ ಎಲ್ಲ ಡಯಟ್‌ಗಳ ಪ್ರಾಂಶುಪಾಲರ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲಿ ಇವು ಆಯೋಜನೆಗೊಳ್ಳುತ್ತವೆ. ಪ್ರಸಕ್ತ ಸಾಲಿನಲ್ಲಿ ಈ ಸ್ಪರ್ಧೆಗಳಿಗೆ ಶಿಕ್ಷಣ ಇಲಾಖೆಯು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ
ವಸ್ತು ಸಂಗ್ರಹಾಲಯದ ಸಹಯೋಗ ಪಡೆದುಕೊಂಡಿದೆ. ಅಲ್ಪ ಮೊತ್ತದ ಅನುದಾನ ಸ್ಪರ್ಧೆಗಳ ಆಯೋಜನೆಗೆ ವೆಚ್ಚ ಹಾಗೂ ಪ್ರಶಸ್ತಿ ಮೊತ್ತ ನಿಗದಿಪಡಿಸಿ ಪ್ರೌಢ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಗೆ 2,500 ರೂ. ಅನುದಾನ ನಿಗದಿಪಡಿಸಲಾಗಿದೆ. ಬಹುಮಾನ ಮೊತ್ತ, ತೀರ್ಪುಗಾರರ ಸಂಭಾವನೆ, ಲಘು ಉಪಾಹಾರ ಇವೆಲ್ಲವೂ ಇದರೊಳಗೇ ಬರಬೇಕು. ಬಹುಮಾನದ ಒಟ್ಟು ಮೊತ್ತ ಕೇವಲ 600 ರೂ. ಪ್ರಥಮ ಪ್ರಶಸ್ತಿಗೆ 300 ರೂ. ಲಭಿಸಿದರೆ ದ್ವಿತೀಯ ಪ್ರಶಸ್ತಿಯಾಗಿ 200 ರೂ. ಹಾಗೂ ತೃತೀಯ ಸ್ಥಾನಿಗೆ 100 ರೂ. ಸಿಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆ ಆಯೋಜನೆಗೆ 6000 ರೂ. ಅನುದಾನವಿದೆ. ಪ್ರಥಮ 650 ರೂ., ದ್ವಿತೀಯ 600 ರೂ. ಹಾಗೂ ತೃತೀಯ 500 ರೂ. ಹಾಗೂ 3 ಮಂದಿಗೆ ಸಮಾಧಾನಕರ ಬಹುಮಾನವಾಗಿ ತಲಾ 300 ರೂ. ಇದೆ. ವಿಜ್ಞಾನ ನಾಟಕ ಸ್ಪರ್ಧೆಗೆ ತಾಲೂಕು ಮಟ್ಟಕ್ಕೆ 2,500 ರೂ., ಜಿಲ್ಲಾ ಮಟ್ಟಕ್ಕೆ 8,000 ರೂ. ನೀಡಲಾಗುತ್ತದೆ. ಬ್ಲಾಕ್‌ ಮಟ್ಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿಯಾಗಿ ನಿಗದಿಯಾಗಿರುವುದು ಕೇವಲ 600 ರೂ.
ಇಷ್ಟನ್ನೇ ಹಂಚಿ ನೀಡಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಾಗಿ ನಿಗದಿಯಾಗಿರುವುದು 3,800 ರೂ. ಮಾತ್ರ. ಪ್ರಥಮ 1,200 ರೂ., ದ್ವಿತೀಯ 1,000 ರೂ. ಹಾಗೂ ತೃತೀಯ 800 ರೂ. ನೀಡಬೇಕು ಎಂದು ಇಲಾಖೆ ಸೂಚಿಸಿದೆ.  ಸ್ಪರ್ಧೆಗಳನ್ನು ಕಡ್ಡಾಯವಾಗಿ ಆಯೋಜಿಸಲು ಜಿಲ್ಲಾ ಡಯಟ್‌ಗಳಿಗೆ ನಿರ್ದೇಶನವಿದೆ. ಆದುದರಿಂದ ಸಿಕ್ಕಿದಷ್ಟು ಅನುದಾನದಲ್ಲೇ ನಡೆಸಬೇಕಿದೆ. 

ಅನುದಾನ ಹೆಚ್ಚಳಕ್ಕೆ ಬೇಡಿಕೆ
ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಿ ಗುಣಮಟ್ಟ ಹೆಚ್ಚಿಸುವ ಮೂಲಕ ಉದ್ದೇಶಗಳು ಸಾಕಾರಗೊಳ್ಳುವತ್ತ ಗಮನ ಹರಿಸುವುದು ಅವಶ್ಯ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳುತ್ತಿವೆ. ಇವುಗಳಿಗೆ ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು ಸಿದ್ಧಗೊಳಿಸುವುದಕ್ಕೆ ಈ ವಿಜ್ಞಾನ ಸ್ಪರ್ಧೆಗಳು ಮಹತ್ವದ ವೇದಿಕೆ. ಆದರೆ ಪ್ರಸ್ತುತ ನಿಗದಿಯಾಗಿರುವ ಜುಜುಬಿ ಅನುದಾನದಿಂದ ಇದು ಕಷ್ಟಸಾಧ್ಯ ಎನ್ನುವುದು ಶಿಕ್ಷಕರ ಅಳಲು. ಆದ್ದರಿಂದ ಅನುದಾನ ಹೆಚ್ಚಿಸಿ ಎಂದು ಶಿಕ್ಷಕ ಸಮುದಾಯ ಬೇಡಿಕೆ ಸಲ್ಲಿಸುತ್ತಲೇ ಬಂದಿದೆ.

ಪ್ರೌಢ ಶಿಕ್ಷಣ ನಿರ್ದೇಶನಾಲಯ ಈಗಾಗಲೇ ವಿವಿಧ ವಿಜ್ಞಾನ ಸ್ಪರ್ಧೆಗಳಿಗೆ ಅನುದಾನ ನಿಗದಿ ಪಡಿಸಿ ಸುತ್ತೋಲೆ ಹೊರಡಿಸಿದೆ. ಶಾಲಾ ಹಂತದಲ್ಲಿ ಸ್ಪರ್ಧೆಗಳು ಪ್ರಾರಂಭಗೊಂಡಿದ್ದು ಇದು ಪೂರ್ಣಗೊಂಡ ಬಳಿಕ ಬ್ಲಾಕ್‌ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸುತ್ತೋಲೆಯಲ್ಲಿ ಸೂಚಿಸಿದಂತೆ ಅನುದಾನವನ್ನು ವಿನಿಯೋಗಿಸಿ ಅದರ ಪರಿಮಿತಿಯೊಳಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. 
 -ಸಿಪ್ರಿಯನ್‌ ಮೊಂತೇರೋ, ಡಿಡಿಪಿಐ, ಡಯಟ್‌

ವಿಜ್ಞಾನ ಸ್ಪರ್ಧೆಗಳು, ಪ್ರತಿಭಾ ಕಾರಂಜಿ ಸೇರಿದಂತೆ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿರುವ ವಿವಿಧ ಸ್ಪರ್ಧೆಗಳಿಗೆ ಶಿಕ್ಷಣ ಇಲಾಖೆ ಪ್ರಸ್ತುತ ನೀಡುತ್ತಿರುವ ಅನುದಾನ ಬಹಳಷ್ಟು  ಕಡಿಮೆ ಇದೆ. ಹೆಚ್ಚಿಸಬೇಕು ಎಂದು ಶಿಕ್ಷಕರ ಸಂಘದಿಂದ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ.
-ರಾಮಕೃಷ್ಣ ಶಿರೂರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ 
 

Advertisement

*ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next