Advertisement

ತಾರಾಲಯದಲ್ಲಿ ವಿಜ್ಞಾನ ವಿಸ್ಮಯ

04:37 PM Sep 01, 2018 | Team Udayavani |

ಬೆಂಗಳೂರು: ನಗರದಲ್ಲೊಂದು ಪುಟಾಣಿ ವಿಜ್ಞಾನಿಗಳ ಲೋಕ ತೆರೆದುಕೊಂಡಿದೆ. ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಇರುವ ವಿಜ್ಞಾನ ಪ್ರಪಂಚವಿದು. ನಗರದ ಜವಾಹರ್‌ಲಾಲ್‌ ನೆಹರು ತಾರಾಲಯದ ವತಿಯಿಂದ ತಾರಾಲಯದ ಆವರಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ “ಸೈನ್ಸ್‌ ಇನ್‌ ಆ್ಯಕ್ಷನ್‌’ ಹೆಸರಿನ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಪುಟಾಣಿಗಳ ವೈಜ್ಞಾನಿಕ ಪ್ರಪಂಚ ಕಂಡು ಬಂದಿತ್ತು.

Advertisement

ಮೊಸರಿನಿಂದ ಬೆಣ್ಣೆ ತೆಗೆಯುವ ಹಾಗೂ ವಾಶಿಂಗ್‌ ಮಷೀನ್‌ನಲ್ಲಿರುವ ಬಟ್ಟೆ ಒಣಗಿಸುವ ಸಾಧನ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸುವ, ಘರ್ಷಣೆಯಿಂದ ತೂಕವನ್ನು ಮೇಲೆತ್ತುವ ಪ್ರಯೋಗ ಮಕ್ಕಳಲ್ಲಿ ಅಚ್ಚರಿ ಮೂಡಿಸಿತು. ಕೊಳವೆಯೊಳಗೆ ದಾರ ತೂರಿಸಿ ದಾರದ ಮೇಲುದಿಗೆ ಕೊಳವೆಯೊಳಗೆ ತೂರಲಾರದಂತಹ ಹಗುರವಾದ ವಸ್ತುವನ್ನು ಕಟ್ಟಲಾಗಿತ್ತು. ಇನ್ನೊಂದು ತುದಿಗೆ ಭಾರವಾದ ವಸ್ತುವನ್ನು ಕಟ್ಟಲಾಗಿತ್ತು. ನಂತರ ಕೊಳವೆ ನೇರವಾಗಿ ಹಿಡಿದು ಹಗುರವಾದ ವಸ್ತುವನ್ನು ಸ್ವಲ್ಪಮಟ್ಟಿಗೆ ಹೊರಗೆಳೆದು ತಿರುಗಿಸುತ್ತಿರುವಾಗ ಕೆಳಗಿರುವ ಭಾರದ ವಸ್ತು ಮೇಲಕ್ಕೆ ಬರುತ್ತಿರುವುದನ್ನು ವಿದ್ಯಾರ್ಥಿಗಳು ವಿಸ್ಮಯದಿಂದ ವೀಕ್ಷಿಸಿದರು.

ಎಲ್‌ಇಡಿ ಪರದೆಗಳ ಮೇಲಿರುವ ರಹಸ್ಯ ಪರದೆಯನ್ನು ಚಿಣ್ಣರು ಕುತೂಹಲದಿಂದ ಕಂಡರು. ಈ ವಿಜ್ಞಾನದ ಮಾದರಿಯನ್ನು ಶ್ರೀವಿದ್ಯಾಕೇಂದ್ರ ಸ್ಮಾರ್ಟ್‌ ಶಾಲೆಯ ವಿದ್ಯಾರ್ಥಿಗಳು ಕಥೆಯ ಮೂಲಕ ವಿವರಿಸಿ, ಅರ್ಥ ಮಾಡಿಸಿದ ರೀತಿ ಅಚ್ಚರಿ ಮೂಡಿಸುವಂತಿತ್ತು. ಪೋಲರೈಸರ್‌ ಪರದೆ ತೆಗೆದು ಹಾಗೇ ಇಡಲಾಗಿರುವ ಕಂಪ್ಯೂಟರ್‌ ಹಾಗೂ
ಪೋಲರೈಸರ್‌ ಪರದೆಯಿಂದ ಕಂಪ್ಯೂಟರ್‌ ಪರದೆ ಮೇಲೆ ಮೂಡುತ್ತಿದ್ದ ಚಿತ್ರಗಳನ್ನು ಮಕ್ಕಳು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. 

ಪೆಟ್ಟಿಗೆಯಲ್ಲಿ ಸಣ್ಣದೊಂದು ರಂಧ್ರ ಮಾಡಿ ಸ್ಲಿಂಕಿಯನ್ನು ಸಿಕ್ಕಿಸಲಾಗಿತ್ತು. ಸ್ಲಿಂಕಿಯನ್ನು ಎಳೆದು ಹಿಡಿದು ಅಲೆಯೊಂದನ್ನು ಹೊರಡಿಸಿದಾಗ ಕೇಳುವ ಬೇರೆ ಬೇರೆ ಕಂಪನಾಂಕಗಳ ಶಬ್ದಗಳು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗಮನ ಸೆಳೆದವು. ಗಾಡಿಯಲ್ಲಿನ ಸ್ಪೀಡೋಮೀಟರ್‌ ಬಗ್ಗೆ ವಿವರಿಸುವ ಮಾದ ರಿ ನೋಡುಗರಲ್ಲಿ ಆಶ್ಚರ್ಯ ಉಂಟು ಮಾಡಿತ್ತು. ಸ್ಪಿನ್ನರ್‌ನಲ್ಲಿರುವ ರಂಧ್ರಗಳೊಳಗೆ ಅಯಸ್ಕಾಂತಗಳನ್ನು ಇರಿಸಲಾಗಿತ್ತು. ಒಂದೇ ರೀತಿಯ ಧ್ರುವಗಳನ್ನು ಮೇಲ್ಮುಖವಾಗಿ ಇಡಲಾಗಿತ್ತು. ಹೀಗಿದ್ದ ಸ್ಪಿನ್ನರ್‌ ಅನ್ನು ತಿರುಗಿಸಿದರೆ, ಅದರ ಮೇಲೆ ತೂಗುಬಿಟ್ಟಿರುವ ಅಲ್ಯುಮೀನಿಯಂ ತಟ್ಟೆ ಸಹ ಅದೇ ದಿಕ್ಕಿನಲ್ಲಿ ತಿರುಗುವುದನ್ನು ಕಂಡು ಶಾಲಾ ಮಕ್ಕಳು ವಿಸ್ಮಿತರಾದರು. ಪುಟ್ಟ ವಿಜ್ಞಾನಿಗಳು
ಮಾದರಿಗಳನ್ನು ವಿಶ್ಲೇಷಿಸುವ ರೀತಿ ಎಂತಹವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿತ್ತು.

ದಾರದ ಮೇಲೆ ಸ್ಥಾಯಿ ತರಂಗಗಳು, ಶಬ್ದದ ಪ್ರಸರಣ, ಸೆಂಟ್ರಿಫ್ಯೂಜ್‌ನ ತತ್ವದ ನಿರೂಪಣೆ, ಭ್ರಮೆ ನಿರೂಪಣೆ ಸೇರಿದಂತೆ ವಿವಿಧ ವಿಜ್ಞಾನ ಮಾದರಿಗಳು ಮಕ್ಕಳ ಗಮನ ಸೆಳೆದವು. ನೆಹರು ತಾರಾಲಯದ ಸಿಬ್ಬಂದಿ ಮಾಡಿರುವ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯುಸಿ
ವಿದ್ಯಾರ್ಥಿಗಳಿಗೆ ವಿವರಿಸಿದರು.

Advertisement

ಇಂಜಿನಿಯರಿಂಗ್‌, ಅನ್ವೇಷಕ ಅಥವಾ ವಿಜ್ಞಾನಿ ಈ ಮೂವರೂ ಒಂದೇ ಪಥದಲ್ಲಿ ಸಾಗುತ್ತಿರುತ್ತಾರೆ. ಮೂರು
ವಿಭಾಗಗಳಿಗೂ ವಿಜ್ಞಾನ ಲೋಕ ಪ್ರಾಮುಖ್ಯತೆ ನೀಡಬೇಕು. ಮಕ್ಕಳು ತಮ್ಮ ಆಸಕ್ತ ಕ್ಷೇತ್ರದಲ್ಲಿ  ತೋಡಗಿಸಿಕೊಳ್ಳುವುದರಿಂದ  ಸಾಧನೆ ಮಾಡಬಹುದು.
  ಪ್ರೊ.ಜಿ.ಕೆ.ಅನಂತ ಸುರೇಶ್‌, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ

ಇನ್ನೂ ಎರಡುದಿನ ಪ್ರದರ್ಶನ ವಿಜ್ಞಾನ ಮಾದರಿಗಳ ಪ್ರದರ್ಶನ ಇನ್ನೂ ಎರಡು ದಿನಗಳ ಕಾಲ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತೆರೆದಿರಲಿದೆ. ವಿಜ್ಞಾನ ಮಾದರಿಗಳ ಪ್ರದರ್ಶನ ವಿಕ್ಷಿಸಲು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೊದಲ ದಿನ 18 ಶಾಲೆಗಳವಿದ್ಯಾರ್ಥಿಗಳು ಪ್ರದರ್ಶನವನ್ನು ವೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next