Advertisement
ಸರ್ಕಾರಿ ವ್ಯವಸ್ಥೆಯಡಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೂ ಒಂದೇ ಸೂರಿನಡಿ ಉತ್ಕೃಷ್ಟವಾದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯ ಪರಿಕಲ್ಪನೆ ಆರಂಭಿಸಿ, ಅನುಷ್ಠಾನಗೊಳಿಸಿದೆ. ರಾಜ್ಯದಲ್ಲಿ 238 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಅವುಗಳ ಕಾರ್ಯವೈಖರಿ ಮತ್ತು ಶೈಕ್ಷಣಿಕ ಪ್ರಗತಿ ಹೇಗಿರಬೇಕು ಎಂಬುದರ ಸ್ಪಷ್ಟ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದೆಯೇ ಹೊರಡಿಸಿತ್ತು. ಪಬ್ಲಿಕ್ ಶಾಲೆಗೆ ಬೇಕಾದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ಅದರಂತೆ ಆಯಾ ಶಾಲೆಗಳಿಂದ ಮಾಸ್ಟರ್ ಪ್ಲಾನ್ ಸಿದ್ಧಮಾಡಿಕೊಡುವಂತೆಯೂ ನಿರ್ದೇಶನ ನೀಡಲಾಗಿತ್ತು. ಆದರೆ, ಬಹುತೇಕ ಶಾಲೆಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸದಿರುವುದು ಇಲಾಖೆ ಗಮನಕ್ಕೆ ಬಂದಿದೆ. ರಾಜ್ಯದ 238 ಕರ್ನಾಟಕ ಪಬ್ಲಿಕ್ ಶಾಲೆಗಳು ತಮ್ಮ ಮಾಸ್ಟರ್ ಪ್ಲಾನ್‌ಗಳನ್ನು ಇಲಾಖೆಗೆ ಪ್ರಸ್ತುತಪಡಿಸಲು ನೋಂದಾಯಿಸಿಕೊಳ್ಳಲು ಇಲಾಖೆಯಿಂದ ಸೂಚನೆನೀಡಲಾಗಿತ್ತು. ಅದರಂತೆ, 94 ಶಾಲೆಗಳು ಮಾಸ್ಟರ್ ಪ್ಲಾನ್ ಪ್ರಸ್ತುತಿಗೆ ನೋಂದಣಿ ಮಾಡಿಕೊಂಡಿದ್ದವು. ನೋಂದಣಿ ಮಾಡಿದ ಶಾಲೆಗಳಲ್ಲಿ 40 ಶಾಲೆಗೆ ಮಾಸ್ಟರ್ ಪ್ಲಾನ್ ಪ್ರಾತ್ಯಕ್ಷಿಕೆಗೆ ಅವಕಾಶ ನೀಡಲಾಗಿತ್ತು. ಉಳಿದ 54 ಶಾಲೆಗಳ ಮಾಸ್ಟರ್ ಪ್ಲಾನ್ ಪ್ರಗತಿಯನ್ನು ಕರ್ನಾಟಕ ಪಬ್ಲಿಕ್ ಶಾಲೆ ವೆಬ್‌ಪೋರ್ಟಲ್‌ನಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಕೆಲವು ಶಾಲೆಗಳು ಶೂನ್ಯ ಪ್ರಗತಿ ಹಾಗೂ 14 ಶಾಲೆಗಳು ಶೇ.30ಕ್ಕಿಂತ ಕಡಿಮೆ ಪ್ರಗತಿಯನ್ನು ಹೊಂದಿರುವುದು ಇಲಾಖೆಗೆ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪರಿಸರ ಸ್ನೇಹಿಯಾಗಿ ಉಳಿಸಿಕೊಳ್ಳುವ ಬಗ್ಗೆ ರೂಪಿಸಿರುವ ಕಾರ್ಯ ಕ್ರಮಗಳನ್ನು ಒಳಗೊಂಡ ಮಾಸ್ಟರ್ ಪ್ಲಾನ್ ಶಾಲೆಯಿಂದ ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಬಹುತೇಕ ಶಾಲೆಗಳು ಇದನ್ನು ಮಾಡಿಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವ ಬಹುತೇಕ ಶಾಲೆಗಳಲ್ಲಿ ಶೈಕ್ಷಣಿಕ ವಿಷಯವೊಂದನ್ನೇ ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ನೀಡಲಾಗಿದೆ. ಶೈಕ್ಷಣಿಕೇತರವಾಗಿರುವ ವಿದ್ಯಾರ್ಥಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಿರುವ ಅನೇಕ ಅಂಶಗಳ ಬಗ್ಗೆ ಶಾಲೆಗಳು ಹೆಚ್ಚಿನ ಗಮನ ಹರಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವ ಶಾಲೆಗಳ ಸಂಖ್ಯೆ ಅತಿ ಕಡಿಮೆಯಿದೆ. ಮಾಸ್ಟರ್ ಪ್ಲಾನ್ ಹೇಗಿರಬೇಕು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗೆ ಯಾವ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ತರಬೇತಿಯನ್ನು ಶಿಕ್ಷಕರಿಗೆ ನೀಡಲಾಗಿದೆ. ಆದರೂ, ಸರ್ಕಾರದ ನಿರೀಕ್ಷೆಯಂತೆ ಕರ್ನಾಟಕ ಪಬ್ಲಿಕ್ ಶಾಲೆಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
Related Articles
ಕರ್ನಾಟಕ ಪಬ್ಲಿಕ್ ಶಾಲಾ ವ್ಯವಸ್ಥೆಯನ್ನು ನಿಯಂತ್ರಿಸಲು ವೆಬ್‌ಪೋರ್ಟಲ್ ಸಿದ್ಧಪಡಿಸಲಾಗಿದೆ. ಶಾಲೆಗಳು ತಮ್ಮ ಮಾಸ್ಟರ್ ಪ್ಲಾನ್ ಅನ್ನು ವೆಬ್‌ಪೋರ್ಟಲ್ ಮೂಲಕ ಅಪ್ ಲೋಡ್ ಮಾಡಬೇಕು. ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಕರ ಕೊರತೆ, ತರಬೇತಿ ಪಡೆದಿರುವ ಶಿಕ್ಷಕರು ಇಲ್ಲದಿರುವುದು, ತಾಂತ್ರಿಕವಾಗಿ ಬೇಕಿರುವ ಸೌಲಭ್ಯ ದೊರೆಯದೇ ಇರುವುದು ಸೇರಿದಂತೆ ಅನೇಕ ಕಾರಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Advertisement
ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳು ಮಾಸ್ಟರ್ ಪ್ಲಾನ್ ನೀಡಬೇಕು. ಆದರೆ, ಅನೇಕ ಶಾಲೆಗಳು ನೀಡಿಲ್ಲ. ಈಗಾಗಲೇ ನೀಡಿರುವ ಶಾಲೆಗಳು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿವೆ. ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಬಗ್ಗೆ ತರಬೇತಿಯನ್ನು ನೀಡಿದ್ದೇವೆ.– ಡಾ.ಟಿ.ಎಂ.ರೇಜು, ರಾಜ್ಯ ಯೋಜನಾ ಸಮಗ್ರ ನಿರ್ದೇಶಕ, ಸಮಗ್ರ ಶಿಕ್ಷಣ – ರಾಜು ಖಾರ್ವಿ ಕೊಡೇರಿ