ಪಟ್ನಾ : ಬಿಹಾರದ ಸಹಾರ್ಸಾ ದ ಗ್ರಾಮವೊಂದರ ರಸ್ತೆಯಲ್ಲಿ ಸಾಗುತ್ತಿದ್ದ ಶಾಲಾ ಬಾಲಕಿಯೋರ್ವಳನ್ನು ಮೂವರು ಅಪರಿಚಿತ ಕಾಮಾಂಧರು ತಡೆದು, ವಿವಸ್ತ್ರಗೊಳಿಸಿ, ಆಕೆಯ ದೇಹ ತುಂಬಾ ಕೈಯಾಡಿಸಿ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕಾಮಾಂಧ ಗುಂಪಿನಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಬಾಲಕಿಯು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋ ವಾಟ್ಸಾಪ್‌ನಲ್ಲಿ ವೈರಲ್ ಅಗುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ಸಹಾರ್ಸಾ ಪೊಲೀಸರು ಆರೋಪಿಗಳನ್ನು ಹಿಡಿಯುವ ಸಲುವಾಗಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳನ್ನು ಜಾಗೃತಗೊಳಿಸಿದರು. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಘಟನೆಯ ವಿವರಗಳನ್ನು ನೀಡಿರುವ ಸಹಾರ್ಸಾ ಡಿವೈಎಸ್ಪಿ ಪ್ರಭಾಕರ ರಿವಾರಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ಕಂಡು ಬಂದಿರುವ ಕಾಮಾಂಧ ಗುಂಪಿನಲ್ಲಿದ್ದವರನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು ಅವರನ್ನು ಬೇಗನೆ ಸೆರೆ ಹಿಡಿಯುವ ವಿಶ್ವಾಸವನ್ನು ಡಿವೈಎಸ್ಪಿ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪೊಲೀಸರು ಲೈಂಗಿಕ ದೌರ್ಜನ್ಯ ಸಂತ್ರಸ್ತ ಶಾಲಾ ಬಾಲಕಿಯನ್ನು ಕೂಡ ಗುರುತಿಸಿದ್ದು ಆಕೆಗೆ ಸಕಲ ರೀತಿಯಲ್ಲಿ ನೆರವಾಗುತ್ತಿದ್ದಾರೆ.