Advertisement

ಜುಲೈ ಒಂದಕ್ಕೆ ಶೈಕ್ಷಣಿಕ ತರಗತಿ ಆರಂಭವಾಗಲ್ಲ: ಸಚಿವ ಸುರೇಶ್ ಕುಮಾರ್

05:41 PM Jun 03, 2020 | keerthan |

ಬೆಂಗಳೂರು: ಶಾಲೆಗಳನ್ನು ಜುಲೈ 1ರಂದು ತೆರೆಯುವುದಿಲ್ಲ.‌ ಅದು ಕೇವಲ ಉದ್ದೇಶಿತ ದಿನಾಂಕವಷ್ಟೆ. ಶಾಲೆಗಳಲ್ಲಿ ನಡೆಯುವ ಪಾಲಕರ ಸಭೆಯ ನಿರ್ಣಯ ಕ್ರೋಡೀಕರಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

Advertisement

ಶಾಲೆ ಆರಂಭದ ಗೊಂದಲದ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಂಬಂಧ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಶಾಲಾರಂಭದ ಸಿದ್ಧತೆಗಾಗಿ ಉದ್ದೇಶಿತ ದಿನಾಂಕವನ್ನು ಪ್ರಕಟಿಸಿದ್ದೇವೆ. ಈ ಮಧ್ಯೆ ಎಲ್ಲ ಶಾಲೆಗಳಲ್ಲಿ ಮುಖ್ಯಶಿಕ್ಷಕರಿಗೆ ಪಾಲಕರ, ಪಾಲುದಾರರ ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸಭೆ ನಡೆಸಲು ಸೂಚನೆ ನೀಡಿದ್ದೇವೆ. ಆ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಎಸ್ಎಟಿಎಸ್ ಮೂಲಕ ಇಲಾಖೆಗೆ ಸಲ್ಲಿಸಲಿದ್ದಾರೆ. ಇದೆಲ್ಲವನ್ನು ಕ್ರೋಡೀಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಹಾಗೆಯೇ ರಾಜ್ಯದಲ್ಲೂ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಅಲ್ಲಿಯವರೆಗೂ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುವುದಿಲ್ಲ ಎಂದರು.

ತಕ್ಷಣವೇ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಸಿದ್ಧರಿಲ್ಲ ಎಂಬ ಅರಿವು ಸರ್ಕಾರಕ್ಕೆ ಇದೆ. ಹಾಗೆಯೇ ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳ ಹಿತಕಾಪಾಡುತ್ತೇವೆ ಮತ್ತು ಖಾಸಗಿ ಲಾಬಿಗೂ ಮಣಿಯುವುದಿಲ್ಲ ಎಂದು ಹೇಳಿದರು.

ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕರು ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕೊರೊನಾ ಪರಿಸ್ಥಿತಿ ಅವಲೋಕಿಸಿದ ನಂತರವೇ ತರಗತಿ ಆರಂಭಿಸಲಿದ್ದೇವೆ. ಯಾವುದೇ ರೀತಿಯಲ್ಲೂ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next