Advertisement

ನಾಳೆಯಿಂದ ಶಾಲಾ ಲಸಿಕಾ ಅಭಿಯಾನ: ವಿನೋತ್‌ ಪ್ರಿಯಾ

02:29 PM Dec 10, 2019 | Suhan S |

ಚಿತ್ರದುರ್ಗ: ಡಿಪಿಟಿ ಬೂಸ್ಟರ್‌ ಹಾಗೂ ಟಿ.ಡಿ. ಲಸಿಕೆ ಹಾಕುವ ಶಾಲಾ ಲಸಿಕಾ ಅಭಿಯಾನವನ್ನು ಡಿ. 11 ರಿಂದ 31 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. 2.67 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದರು.

Advertisement

ಶಾಲಾ ಲಸಿಕಾ ಅಭಿಯಾನದ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಗಂಟಲುಮಾರಿ ಹಾಗೂ ಧನುರ್ವಾಯು ರೋಗಗಳನ್ನು ತಡೆಗಟ್ಟಬಹುದಾದ ಲಸಿಕೆಯನ್ನು ಮಕ್ಕಳಿಗೆ ಹಾಕುವ ಸಲುವಾಗಿ ಜಿಲ್ಲೆಯಲ್ಲಿ ಡಿ. 11 ರಿಂದ 31 ರವರೆಗೆ ವಿಶೇಷ ಲಸಿಕಾ ಅಭಿಯಾನ ಆರೋಗ್ಯ ಇಲಾಖೆಯಿಂದ ನಡೆಯಲಿದೆ. ಒಟ್ಟು 2,67,989 ಮಕ್ಕಳಿಗೆ ಲಸಿಕೆ ಹಾಕಲಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳು, ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ ದೊರೆಯಲಿದೆ.

ಅಂಗನವಾಡಿಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗಿದ್ದು, ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ತರಬೇತಿ ಹೊಂದಿದ ವ್ಯಾಕ್ಸಿನೇಟರ್ ಲಸಿಕೆ ನೀಡುತ್ತಾರೆ. ಖಾಸಗಿ ಶಾಲೆಗಳು ಸೇರಿದಂತೆ ಲಸಿಕಾ ಕಾರ್ಯಕ್ರಮದ ಅನುಷ್ಠಾನದಲ್ಲಿ ಯಾರೂ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಜಿಲ್ಲಾಧಿ ಕಾರಿಗಳು ತಾಕೀತು ಮಾಡಿದರು. ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ಮಕ್ಕಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳನ್ನು ಹಾಕಿಸಿದವರು ಲಸಿಕೆ ಹಾಕಿಸಿದ ಬಗ್ಗೆ ದಾಖಲೆ ತೋರಿಸಿದರೆ ಆ ಮಕ್ಕಳಿಗೆ ಪುನಃ ಲಸಿಕೆ ನೀಡುವುದಿಲ್ಲ. ಖಾಸಗಿ ವೈದ್ಯರು ಮಕ್ಕಳಿಗೆ ಲಸಿಕೆ ಹಾಕುವ ಮೊದಲು ಮಕ್ಕಳಿಗೆ ಈಗಾಗಲೇ ಲಸಿಕೆ ಹಾಕಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ತಾಯಿ ಕಾರ್ಡ್‌ನಲ್ಲಿ ಲಸಿಕೆ ಹಾಕಿಸಿದ ಬಗ್ಗೆ ವಿವರ ನಮೂದಿಸಿರಬೇಕು ಎಂದರು.

ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿ ಡಾ| ಕುಮಾರಸ್ವಾಮಿ ಮಾತನಾಡಿ, 5 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಇದಕ್ಕಾಗಿ 38,785 ಮಕ್ಕಳನ್ನು ಗುರುತಿಸಲಾಗಿದೆ. 7 ರಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಟಿ.ಡಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಜಿಲ್ಲೆಯಲ್ಲಿ 2,29,204 ಮಕ್ಕಳಿಗೆ ಈ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿದೆ. ಲಸಿಕಾ ಕಾರ್ಯಕ್ರಮಕ್ಕೆ ಡಿ. 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next