ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬದಲಾಗಿ, ಗುಣಮಟ್ಟದ ಶಿಕ್ಷಣ ಕೊಡಿಸೋಣ ಅಂತ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದೇವೆ. ಸರ್ಕಾರಿ ಶಾಲೆಗಳಾದರೆ ಮನೆಯ ಹತ್ತಿರದಲ್ಲೆಲ್ಲೋ ಇರುತ್ತಿದ್ದವು. ಇದೀಗ ನಮಗೆ ಬೇಕಾದ ಖಾಸಗಿ ಶಾಲೆಗಳಿಗೆ ಸೇರಿಸುವ ಧಾವಂತದಲ್ಲಿ ಅವು ಎಷ್ಟು ದೂರವಿದ್ದರೂ ಸರಿಯೇ ಅನ್ನುವ ಮನಸ್ಥಿತಿ ಎಲ್ಲಾ ಪೋಷಕರದ್ದೂ ಆಗಿದೆ. ಹಾಗಾಗಿ ಎಂಟೂವರೆಗೆ ಶುರುವಾಗುವ ಶಾಲೆಗೆ, ಮಕ್ಕಳು ಕಡಿಮೆಯೆಂದರೂ ಏಳು ಗಂಟೆಯಿಂದ ಏಳೂವರೆಯ ಒಳಗೆ ಸ್ಕೂಲ್‌ಬಸ್ ಏರಬೇಕು.
ಏಳು ಗಂಟೆಗೆ ಹೊರಡಬೇಕೆಂದರೆ ಏನಿಲ್ಲವೆಂದರೂ ಆರು ಗಂಟೆಗಾದರೂ ಏಳಬೇಕು. ಆದರೆ ಆ ವಯಸ್ಸಿಗೆ ಆ ಸಮಯದಲ್ಲಿ ಮಕ್ಕಳು ಸುಖವಾದ ನಿದ್ರೆ ಮಾಡುತ್ತಿರುತ್ತವೆ. ಬಲವಂತವಾಗಿ ಎಬ್ಬಿಸಿ ಅವುಗಳು ಅಳುತ್ತಿದ್ದರೂ ಸ್ನಾನ ಮಾಡಿಸಿ ರೆಡಿ ಮಾಡುವುದು ದೊಡ್ಡ ಸಾಹಸವೇ ಸರಿ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇದಕ್ಕೆ ಮೊದಲು ಅವುಗಳಿಗೆ ಲಂಚ್ ಬಾಕ್ಸು, ಶಾರ್ಟ್ ಬ್ರೇಕು, ಫ್ರೂಟ್ ಬ್ರೇಕು ಅಂತ ಒಂದೊಂದಕ್ಕೆ ಒಂದೊಂದು ತಿನಿಸನ್ನು ರೆಡಿ ಮಾಡಬೇಕು. ಅವುಗಳಿಗೆ ಯಾವುದೇ ಜಂಕ್ ಫುಡ್ ಹಾಕುವಂತಿಲ್ಲ ಅನ್ನುವುದು ಶಾಲೆಯ ತಾಕೀತು. ಹಾಗಾಗಿ ಇವುಗಳಿಗೆಲ್ಲ ಮೂರು ಬಗೆಯ ತಿನಿಸನ್ನು ಸಿದ್ಧಪಡಿಸಬೇಕೆಂದರೆ ಅದಕ್ಕಾಗಿ ಹಿಂದಿನ ದಿನವೇ ಸಿದ್ಧತೆ ಮಾಡಿಕೊಂಡಿರಬೇಕು. ಹಾಗೆ ಮಾಡಿಕೊಂಡರೂ ಪ್ರತೀ ದಿನ ಬೆಳಿಗ್ಗೆ ಸೂರ್ಯ ಹುಟ್ಟುವುದರೊಳಗೆ ಏಳಬೇಕು.
ಯೂನಿಫಾರ್ಮ್ ಇಸ್ತ್ರಿ ಮಾಡುವುದು, ಶೂ ಪಾಲಿಶ್, ಐಡಿ ಕಾರ್ಡ್ ಸಿಗುವಂತೆ ಎತ್ತಿಡುವುದನ್ನು ಮರೆಯುವಂತಿಲ್ಲ. ಇದರ ಮಧ್ಯೆ ನಿನ್ನೆಯ ದಿನದ ಹೋಂವರ್ಕ್ ಮಾಡಿದ್ದೀರ, ಬುಕ್ ಅನ್ನು ಬ್ಯಾಗಿಗೆ ಹಾಕಿಕೊಂಡಿದ್ದೀರ ಅಂತ ವಿಚಾರಿಸಿಕೊಳ್ಳುವುದು ಮಿಸ್ ಮಾಡಬಾರದ ಚೆಕ್‌ಲಿಸ್ಟ್.
ಅಷ್ಟು ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳಿಗೆ ಅಲ್ಲಿ ತಿಂಡಿ ತಿನ್ನಲು ಸಮಯವಿರುವುದಿಲ್ಲ. ಹಾಗಾಗಿ ಶಾಲೆಗೆ ಹೋಗುವ ಧಾವಂತದಲ್ಲಿರುವ ಮಕ್ಕಳಿಗೆ ತಿಂಡಿಯನ್ನೂ ತಿನ್ನಿಸಬೇಕು. ಅಷ್ಟು ಬೆಳಿಗ್ಗೆ ಇನ್ನೂ ನಿದ್ರೆಯ ಗುಂಗಿನಲ್ಲಿರುವ ಮಕ್ಕಳು ಒಂದು ತುತ್ತು ತಿನ್ನುವುದೇ ಹೆಚ್ಚು. ಪ್ರತೀ ತುತ್ತು ತಿನ್ನಲು ಕಷ್ಟಪಡುತ್ತವೆ. ಹಸಿವಿಲ್ಲದೆ ಅವುಗಳಿಗೆ ಅಷ್ಟು ಬೆಳಿಗ್ಗೆಯೇ ತಿನ್ನುವ ಮನಸ್ಸಾದರೂ ಹೇಗೆ ಬಂದೀತು ಹೇಳಿ? ನೀವೇನಾದರೂ ಮಗುವಿನ ಬದಲು ಆ ಅಮ್ಮನಿಗೇ ಅಷ್ಟು ಬೆಳಿಗ್ಗೆ ತಿಂಡಿ ಕೊಟ್ಟು ತಿನ್ನಿ ಅಂದರೆ- “ಈಗಲೇ ಬೇಡ. ಯಾರು ತಿಂತಾರೆ ಇಷ್ಟು ಬೆಳಿಗ್ಗೆ?’ ಅಂತಾರೆ! ಆದರೆ ಅವರ ಮಕ್ಕಳು ಹಾಗೆಲ್ಲ ಮಾಡುವ ಹಾಗಿಲ್ಲ. ತಿಂಡಿ ತಿಂದು ಹೋಗಲೇಬೇಕು. ಅವು ಕಡಿಮೆ ತಿಂದು ಶಾಲೆಗೆ ಹೋದರಂತೂ ಅಮ್ಮನಿಗೆ ಸಂಜೆಯವರೆಗೂ ಮನಸ್ಸಿಗೆ ನೆಮ್ಮದಿಯಿಲ್ಲ.
“ಶಾಲೆಗೆ ಹೋಗುತ್ತಿರುವ ತನ್ನ ಮಕ್ಕಳು ಯಾಕೋ ಸರಿಯಾಗಿ ತಿನ್ನುತ್ತಿಲ್ಲ…’ ಅನ್ನುವುದು ಪ್ರಪಂಚದ ಎಲ್ಲ ತಾಯಂದಿರ ಒಂದೇ ದೂರು! ಏನಾದರೂ ಸಮಸ್ಯೆಯಿದೆಯಾ ಅಂತ ಡಾಕ್ಟ್ರ ಹತ್ತಿರ ಹೋಗಿ- “ಡಾಕ್ಟ್ರೇ…. ನನ್ ಮಗ/ ಮಗಳು ಯಾಕೋ ಸರಿಯಾಗಿ ಊಟನೇ ಮಾಡ್ತಿಲ್ಲ. ಏನಾದರೂ ಪ್ರಾಬ್ಲಿಮ್ ಇದೆಯಾ ನೋಡ್ತೀರಾ?’ ಅಂತ ಕೇಳಿದರೆ, ಆಗ ಆ ಡಾಕ್ಟರ್ ಹೇಳ್ತಾರೆ: “ಅದಕ್ಕೆ ಏನಾದ್ರೂ ಪರಿಹಾರ ಸಿಕ್ಕರೆ ನಮಗೂ ಹೇಳ್ರಮ್ಮ. ನಮ್ ಮನೆಲೂ ಎರಡು ಮಕ್ಕಳಿದಾವೆ. ಅವೂ ಸ್ಕೂಲಿಗೆ ಹೋಗುವ ಮುನ್ನ ದಿನಾ ಸರಿಯಾಗಿ ತಿಂತಿಲ್ಲ ಅಂತ ನಮ್ ಮನೆಯವಳೂ ಬೇಜಾರ್ ಮಾಡ್ಕೊತಿರ್ತಾಳೆ’ ಅಂತ!
–ಸಂತೋಷ್ ಕುಮಾರ್ ಎಲ್. ಎಂ