ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ 2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಮೇ 29ರಿಂದ ಆರಂಭವಾಗಲಿದ್ದು, ಅದಕ್ಕೂ ಪೂರ್ವದಲ್ಲೇ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಶಾಲಾರಂಭದ ಮುನ್ನಾ ದಿನವೇ ಶಾಲೆ, ಶಾಲಾವರಣ, ಕೊಠಡಿ, ಶೌಚಾಲ ಯ ಸ್ವಚ್ಛ ಮಾಡಬೇಕು. ಶಾಲೆಯಿಂದ ಹೊರಗುಳಿದ 70,116 ಮಕ್ಕಳು ಸೇರಿ ಎಲ್ಲ ಮಕ್ಕಳನ್ನು ಶಾಲೆಗೆ ಕರೆತರಲು ಬೇಕಾದ ದಾಖಲಾತಿ ಆಂದೋಲನ ನಡೆಸಬೇಕು. ಶಾಲೆಗಳಲ್ಲಿ ತಳಿರು- ತೋರಣ ಕಟ್ಟಿ ಮಕ್ಕಳನ್ನು ಸ್ವಾಗತಿಸಬೇಕು. ಶಾಲಾರಂಭದ ದಿನದಿಂದಲೇ ಬಿಸಿ ಯೂಟದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಪ ನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ಇಲಾಖೆ ನಿರ್ದೇಶಿಸಿದೆ.
Advertisement
ಮಿಂಚಿನ ಸಂಚಾರ ನಡೆಸಿ, ಅಧಿಕಾರಿಗಳು ವಿವಿಧ ಅವಧಿಯಲ್ಲಿ ಶಾಲೆಗಳಿಗೆ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆ ಹಾಗೂ ದಾಖಲಾತಿ ಪ್ರಕ್ರಿಯೆ ನಡೆಸಬೇಕು. ಶಾಲಾವರಣ, ಶೌಚಾಲಯ, ಕುಡಿಯುವ ನೀರು, ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಹಾಜರಾತಿ ಮೊದಲಾದ ಎಲ್ಲ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸೂಚನೆ ನೀಡಿದೆ.