Advertisement

ಕೋವಿಡ್ ಅಶಿಸ್ತಿನ ಸುಸ್ತು ದಾಟಿದ ವಿದ್ಯಾರ್ಥಿ ವೃಂದ

01:14 PM Aug 24, 2021 | Team Udayavani |

ವರದಿ: ಬಸವರಾಜ ಹೊಂಗಲ್

Advertisement

ಧಾರವಾಡ: ಬೆಂಚುಗಳು ಪಿಸು ಮಾತನಾಡದೇ ವರ್ಷವೇ ಕಳೆದಿತ್ತು. ಶಾಲೆಯ ಕಂಬಗಳು ವಿದ್ಯಾರ್ಥಿಗಳ ಕೈ ಸ್ಪರ್ಶಕ್ಕೆ ಕಾಯುತ್ತಿದ್ದವು, ಶಾಲೆಯ ಗಂಟೆ ಏಟು ತಿನ್ನದೇ ಉಬ್ಬಿ ಕುಳಿತಿತ್ತು. ಶಾಲೆಯ ಬಯಲು ಮಕ್ಕಳ ಪಾದಸ್ಪರ್ಶ ಮಾಡಲು ಚಾತಕನಂತೆ ಕಾದಿತ್ತು. ಧ್ವಜಸ್ತಂಭದ ತುತ್ತ ತುದಿಯಲ್ಲಿ ಕುಳಿತ ಪಕ್ಷಗಳು ಮಕ್ಕಳ ಪಕ್ಷ ನೋಟ ನೋಡದೇ ಎಷ್ಟು ತಿಂಗಳುಗಳಾಗಿತ್ತು. ಆದರೆ ಸೋಮವಾರ ಈ ಎಲ್ಲಾ ಶಾಪಗಳು ಮುಕ್ತ ಮುಕ್ತ..ಮುಕ್ತವಾಗಿದ್ದು ಶಾಲೆಗಳು ಪುನರಾರಂಭಗೊಂಡಿದ್ದರಿಂದ.

ಹೌದು. ಮಹಾಮಾರಿ ಕೊರೊನಾದಿಂದ ನರಳಿ ಹೋಗಿದ್ದ ಶಿಕ್ಷಣ ವ್ಯವಸ್ಥೆಗೆ ಸೋಮವಾರ ಮರಳಿ ಜೀವ ಬಂದಂತಾಗಿದ್ದು, ಶಾಲೆ ಆವರಣದಲ್ಲಿ ಮಕ್ಕಳ ಕಲರವ ಮತ್ತೆ ಕೇಳಿ ಬಂದಿತು. ಬೆನ್ನುಹುರಿಗೆ ಪುಸ್ತಕ ಚೀಲದ ಹಿತವಾದ ಭಾರ, ಅಮ್ಮ ಕಟ್ಟಿಕೊಟ್ಟ ಕೊಂಚ ಅಲ್ಪಾಹಾರದ ಘಮ ಜತೆಯಲ್ಲೇ ಇತ್ತು. ಹರೆಯದ ಹೊಸ್ತಿಲಿನಲ್ಲಿ ಹೈಸ್ಕೂಲಿನ ಶಿಸ್ತಿನಿಂದ ಸುಸ್ತಾಗಿ ಕಾಲೇಜಿನ ಕಟ್ಟೆ ಹತ್ತುವ ವಾಂಛೆಯಿಂದ ಕಾಯುತ್ತಲೇ ಇದ್ದವರು, ಕೊರೊನಾ ಹೆಮ್ಮಾರಿಗೆ ಕೊಂಚವೂ ಅಳುಕದೇ ಸೋಮವಾರ ಕಾಲೇಜು ಮಟ್ಟಿಲು ಹತ್ತಿ ಬೀಗಿದರು. ಅಷ್ಟೇಯಲ್ಲ ಪರಸ್ಪರ ಪರಿಚಯ, ಮುಗುಳ್ನಗೆ, ಕಿರುನಗೆ ಎಲ್ಲವೂ ಅಭಿವ್ಯಕ್ತಿಯ ವ್ಯಾಖ್ಯಾನವಾದವು.

ಕೊರೊನಾ 2ನೇ ಅಲೆಯ ಭಯಾನಕತೆಯನ್ನು ವಿದ್ಯಾರ್ಥಿ ಸಮೂಹವೇ ಸ್ವತಃ ಕಣ್ಣಾರೆ ಕಂಡಿದೆ. ಅಷ್ಟೇಯಲ್ಲ ಎಷ್ಟೋ ಜನರು ಕೊರೊನಾ ಆಘಾತವನ್ನು ಸ್ವಂತ ಅನುಭವಿಸಿದ್ದಾರಲ್ಲದೇ ತಮ್ಮ ಕುಟುಂಬ ಸದಸ್ಯರನ್ನು ಕೊರೊನಾದಿಂದ ಕಳೆದುಕೊಂಡ ದುಃ ಖದಲ್ಲೂ ಇದ್ದಾರೆ. ಸದ್ಯಕ್ಕೆ ಕೊರೊನಾ ಸಂಪೂರ್ಣ ಕಡಿಮೆಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಕಡಿಮೆ ಕೊರೊನಾ ಪಾಜಿಟಿವಿಟಿ ದರ ಶ್ಯೂನ್ಯಕ್ಕಿಳಿದಿದೆ. ಆದರೆ ವಿದ್ಯಾರ್ಥಿಗಳು ಕೊರೊನಾ 3ನೇ ಅಲೆಯ ಸಂಕಷ್ಟಗಳ ಬಗ್ಗೆ ಹೆಚ್ಚು ಆತಂಕಗೊಂಡಿಲ್ಲ. ಅವರ ಮನಸ್ಸಿನಲ್ಲಿ ಶಾಲೆ-ಕಾಲೇಜುಗಳು ಆರಂಭಗೊಂಡಿರುವ ಸಂತಸ ಎದ್ದು ಕಾಣುತ್ತಿದ್ದು, ಯಾವುದಕ್ಕೂ ಕ್ಯಾರೇ ಎನ್ನದೇ ಹುರುಪು-ಹುಮ್ಮಸ್ಸಿನಿಂದ ವಿದ್ಯಾ ದೇಗುಲಗಳನ್ನು ಪ್ರವೇಶ ಮಾಡಿದ್ದಾರೆ.

ಪೋಷಕರೇ ಕರೆ ತಂದರು: ಅಪ್ಪನ ಜತೆ ಶಾಲೆಗೆ ಹೋಗಿ ವರ್ಷಗಳೇ ಗತಿಸಿದ್ದ ವಿದ್ಯಾರ್ಥಿನಿಯರಿಗೆ ತಮ್ಮ ತಂದೆ-ತಾಯಿ ಜತೆಗೆ ಶಾಲೆವರೆಗೂ ಬರುವ ಸುವರ್ಣ ಅವಕಾಶ ಕೂಡ ದೊರೆಯಿತು. ಕೊರೊನಾ ಹಿನ್ನೆಲೆಯಲ್ಲಿ ಮೊದಲ ದಿನ ಕೆಲವು ಪ್ರೌಢಶಾಲೆಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಅಪ್ಪಂದಿರೇ ಬೈಕ್‌ಗಳಲ್ಲಿ ಕೂಡಿಸಿಕೊಂಡು ಬಂದು ಶಾಲೆಗೆ ಕಳುಹಿಸಿ ಹೋದರು. ತಾಯಂದಿರು ತಮ್ಮ ಮಕ್ಕಳಿಗೆ ಅಕ್ಕರೆಯಿಂದ ಧೈರ್ಯ ತುಂಬಿ ಶಾಲೆಗೆ ಬಿಟ್ಟು ಹೋಗುವ ದೃಶ್ಯಗಳು ನಗರದ ಬಾಸೆಲ್‌ ಮಿಷನ್‌ ಶಾಲೆಯಲ್ಲಿ ಕಂಡು ಬಂದವು. ಇನ್ನು ಐದಾರು ವಿದ್ಯಾರ್ಥಿನಿಯರು ಸೇರಿಕೊಂಡು ಮುಖಕ್ಕೆ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಲೇ ಶಾಲೆಯತ್ತ ಹೆಜ್ಜೆ ಹಾಕಿದ ದೃಶ್ಯಗಳು ಕಂಡು ಬಂದವು. ಕೋವಿಡ್‌ ಬಗ್ಗೆ ಸಾರ್ವಜನಿಕರಿಗೆ ಎಷ್ಟು ಭಯವಿದೆಯೋ ಗೊತ್ತಿಲ್ಲ. ಆದರೆ ಶಾಲಾ ವಿದ್ಯಾರ್ಥಿಗಳೂ ಮಾತ್ರ ತಪ್ಪದೇ ಮಾಸ್ಕ್ ಧರಿಸಿದ್ದು ಶಾಲಾರಂಭದ ಮೊದಲ ದಿನವೇ ಗೋಚರಿಸಿತು.

Advertisement

ಆಡಿ ನಲಿದು ಖುಷಿಪಟ್ಟ ಮಕ್ಕಳು; ಕೊರೊನಾ ಮಹಾಮಾರಿಯಿಂದ ಕಂಗಾಲಾಗಿ ಗೂಡು ಸೇರಿದ್ದ ವಿದ್ಯಾರ್ಥಿಗಳಿಗೆ ಇನ್ನೇನು ಜೀವನದಲ್ಲಿ ಖುಷಿಯಿಂದ ನಮ್ಮ ಶಾಲಾದಿನಗಳನ್ನು ಕಳೆಯುತ್ತೇವೆಯೋ ಇಲ್ಲವೋ ಎನ್ನುವ ಆತಂಕ ಸೃಷ್ಟಿಯಾಗಿತ್ತು. ಆದರೆ ಸುದೈವದಿಂದ ಶಾಲೆಗಳು ಮತ್ತೆ ಪುನರಾಂಭಗೊಂಡಿದ್ದರಿಂದ ಶಾಲೆಯ ಆವರಣದಲ್ಲಿ ಕೋ ಕೋ, ಕಬ್ಬಡ್ಡಿ, ಫುಟ್‌ಬಾಲ್‌, ವಾಲಿಬಾಲ್‌, ರಿಂಗ್‌ ಆಟಗಳನ್ನಾಡಿ ಖುಷಿ ಪಟ್ಟರು. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊದಲ ದಿನ ಕ್ಲಾಸ್‌ಗಿಂತಲೂ ಆಟಗಳಲ್ಲಿಯೇ ಹೆಚ್ಚು ತೊಡಗಿದ್ದರು. ಗ್ರಾಮೀಣ ಪ್ರದೇಶದಲ್ಲಂತೂ ಶಾಲೆ ಆವರಣ ಸ್ವತ್ಛಗೊಳಿಸುವುದು, ಶಾಲಾ ಕೊಠಡಿಗಳನ್ನು ವ್ಯವಸ್ಥಿತಗೊಳಿಸುವುದು ಸೇರಿದಂತೆ ಮೊದಲ ದಿನ ಗೆಳೆಯರೊಂದಿಗೆ ಸೇರಿ ಆಟವಾಡಿ ಖುಷಿ ಪಟ್ಟರು. ಜೆಎಸ್‌ ಎಸ್‌ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಗಳು ವರ್ಷದ ನಂತರ ವಾಲಿಬಾಲ್‌ಗೆ ಕೈ ರುಚಿ ತೋರಿಸಿ ನಲಿದಾಡುತ್ತಲೇ ಆಟವಾಡಿದರು. ಶಾಲೆಯ ಗುರುವೃಂದ ವಿದ್ಯಾರ್ಥಿಗಳನ್ನು ಮೊದಲ ದಿನ ಅಭ್ಯಾಸದ ಜತೆ ಜತೆಗೆ ಆಟಕ್ಕೂ ಪ್ರಾಧಾನ್ಯತೆ ಕೊಟ್ಟಿದ್ದು ಕಂಡು ಬಂತು.

ಭರ್ಜರಿ ಹಾಜರಿ: ಜಿಲ್ಲೆಯಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳ ಹಾಜರಿ ಭರ್ಜರಿಯಾಗಿದೆ. ಪಿಯುಸಿ ಪ್ರಥಮ, ದ್ವಿತೀಯ ಎರಡು ಸೇರಿ 7069 ವಿದ್ಯಾರ್ಥಿಗಳು ನೇರವಾಗಿ ಕಾಲೇಜಿಗೆ ಬಂದರೆ, 4108 ವಿದ್ಯಾರ್ಥಿಗಳು ಆನ್‌ಲೈನ್‌ ನಲ್ಲಿಯೇ ಪಾಠ ಕೇಳಿದರೆಂದು ಡಿಡಿಪಿಯು ಕಚೇರಿ ಮಾಹಿತಿ ನೀಡಿದೆ. 9ನೇ ತರಗತಿ ಓದುತ್ತಿರುವ 27239 ವಿದ್ಯಾರ್ಥಿಗಳ ಪೈಕಿ 18353 ವಿದ್ಯಾರ್ಥಿಗಳು ಮೊದಲ ದಿನ ಹಾಜರಾಗಿದ್ದರು. 10ನೇ ತರಗತಿ ಓದುತ್ತಿರುವ ಒಟ್ಟು 30926 ವಿದ್ಯಾರ್ಥಿಗಳ ಪೈಕಿ ಮೊದಲ ದಿನ 20991 ಹಾಜರಾದರು.

Advertisement

Udayavani is now on Telegram. Click here to join our channel and stay updated with the latest news.

Next