ಅಫಜಲಪುರ: ತಾಲೂಕಿನ ಸುಕ್ಷೇತ್ರ ಘತ್ತರಗಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಸದ್ಯ ದೇವಸ್ಥಾನ ಜಾಗದಲ್ಲೇ ನಡೆಯುತ್ತಿದ್ದು, ಮಕ್ಕಳು ಪಾಠ ಕೇಳಲಾಗದೇ ಸಮಸ್ಯೆ ಎದುರಿಸುವಂತಾಗಿದೆ. ಘತ್ತರಗಿಯಲ್ಲಿ 1991ರಲ್ಲಿ ಸರ್ಕಾರಿ ಪ್ರೌಢಶಾಲೆ ಶುರುವಾಗಿದೆ.
ಸದ್ಯ 9 ಮತ್ತು 10ನೇ ತರಗತಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ 167 ವಿದ್ಯಾರ್ಥಿಗಳಿದ್ದು, ನಿತ್ಯ ಪಾಠ ಕೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಜಾಗ: ಘತ್ತರಗಿ ಭಾಗ್ಯವಂತಿ ದೇವಸ್ಥಾನ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅಧೀ ನಕ್ಕೆ ಒಳಪಟ್ಟಿದೆ.
ಸದ್ಯ ಶಾಲೆ ದೇವಸ್ಥಾನ ಜಾಗದಲ್ಲಿ ಇರುವುದರಿಂದ ಶಾಲಾ ಕಟ್ಟಡ ಇರುವ ಜಾಗದಲ್ಲಿ ನಿತ್ಯ ಭಕ್ತರು ಬಂದು ಕುಳಿತುಕೊಳ್ಳುತ್ತಾರೆ. ಅದರಲ್ಲೂ ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆ ದಿನವಂತೂ ಶಾಲೆ ಮೈದಾನ, ಶಾಲೆ ಹಿಂಭಾಗದಲ್ಲಿ ಬೀಡು ಬಿಡುತ್ತಾರೆ. ಅಲ್ಲೇ ಅಡುಗೆ, ಧಾರ್ಮಿಕ ವಿ ಧಿ ವಿಧಾನ ನೆರವೇರಿಸುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಸಮಾಧಾನದಿಂದ ಪಾಠ ಕೇಳಲೂ ಆಗುತ್ತಿಲ್ಲ. ಹೊಸ ಕಟ್ಟಡಕ್ಕೆ ನಿವೇಶನವಿಲ್ಲ: ಈಗಿರುವ ಶಾಲೆಯ ಕಟ್ಟಡ ಕಿರಿದಾದ ಜಾಗದಲ್ಲಿದೆ. ದೇವಸ್ಥಾನ ಜಾಗದಲ್ಲಿ ಏಳು ಕೋಣೆ ಕಟ್ಟಿಸಲಾಗಿದೆ. ಇದರಲ್ಲಿ ನಾಲ್ಕು ಕೋಣೆಗಳು ಶಿಥಿಲಾವಸ್ಥೆಯಲ್ಲಿವೆ.
ಉಳಿದ ಮೂರು ಕೋಣೆಗಳಲ್ಲಿ ಒಂದು ಕಚೇರಿಗೆ, ಎರಡು ತರಗತಿಗೆ ಬಳಸಲಾಗುತ್ತಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕೆನ್ನುವುದು ಬಹುದಿನಗಳ ಬೇಡಿಕೆ. ಆದರೆ ಹೊಸ ಕಟ್ಟಡ ಕಟ್ಟಿಸಲು ಸರ್ಕಾರದ ನಿವೇಶನವೇ ಇಲ್ಲದಂತಾಗಿದೆ. ಇದರಿಂದ ಪ್ರೌಢಶಾಲೆ ವಿದ್ಯಾರ್ಥಿಗಳು ದಿನನಿತ್ಯ ಸಮಸ್ಯೆ ಎದುರಿಸುವಂತೆ ಆಗಿದೆ. ನೀರು-ಶೌಚಾಲಯ ಸಮಸ್ಯೆ: ಈಗಿರುವ ಶಾಲಾ ಕಟ್ಟಡದಲ್ಲಿ ಮಹಿಳಾ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದೇವಸ್ಥಾನಕ್ಕೆ ಬರುವ ಭಕ್ತರು ಶಾಲಾ ಮೈದಾನ ಸುತ್ತಮುತ್ತಲಿನಲ್ಲೇ ಮೂತ್ರ ವಿಸರ್ಜಿಸುತ್ತಾರೆ. ಇದರಿಂದ ದುರ್ನಾತ ಬೀರುತ್ತಿದ್ದು, ಮಕ್ಕಳಿಗೆ ಪಾಠ ಆಲಿಸಲು ಸಮಸ್ಯೆಯಾಗುತ್ತಿದೆ. ಅಲ್ಲದೇ ಪ್ರೌಢಶಾಲೆಯಾಗಿದ್ದರಿಂದ ವಿದ್ಯಾರ್ಥಿನಿಯರಿಗೆ, ಮಹಿಳಾ ಶಿಕ್ಷಕಿಯರಿಗೆ ಸಮಸ್ಯೆಯಾಗುತ್ತಿದೆ. ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಶೌಚಾಲಯವಿಲ್ಲ.
ಹೀಗಾಗಿ ವಿದ್ಯಾರ್ಥಿನಿಯರು ಶಾಲೆಯ ಮೈದಾನದ ಕಡೆ ಸಾಲುಗಟ್ಟಿ ನಿಂತು, ಶೌಚಕ್ಕೆ ಹೋಗುವ ಕೆಟ್ಟ ಪರಿಸ್ಥಿತಿ ಇದೆ. ಕೋವಿಡ್ ಭೀತಿ: ಕೋವಿಡ್ ಮಹಾಮಾರಿ ಮತ್ತೆ ಆತಂಕ ಹೆಚ್ಚಿಸಿದೆ. ಹೀಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕೋಣೆಗಳ ಕೊರತೆಯಿಂದ ಒಟ್ಟಾಗಿ ಕುಳಿತುಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಕೋವಿಡ್ ಭೀತಿ ಹೆಚ್ಚಾಗಿದೆ. ಪ್ರೌಢಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಲಕ್ಷಾಂತರ ರೂ. ಅನುದಾನ ಬಂದರೂ ಘತ್ತರಗಿ ಶಾಲೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಇಲ್ಲಿ ಅಭಿವೃದ್ದಿ ಕೆಲಸ ಕೈಗೊಳ್ಳಬೇಕಾದರೆ ದತ್ತಿ ಇಲಾಖೆ ಆಡಳಿತ ಮಂಡಳಿಯವರು ಅಡೆತಡೆ ಮಾಡುತ್ತಾರೆ. ದತ್ತಿ ಇಲಾಖೆ, ಶಿಕ್ಷಣ ಇಲಾಖೆ ಎರಡು ಸರ್ಕಾರದ ಅಂಗಗಳೇ ಆಗಿವೆ. ಆದರೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರುವ ಶಾಲೆಗೆ ತಾರತಮ್ಯ ಧೋರಣೆ ಏಕೆ? ವಿಚಿತ್ರ ಎಂದರೆ ಆಡಳಿತ ಮಂಡಳಿಯವರ ಮಕ್ಕಳು ಸಹ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಘತ್ತರಗಿಯ ಪ್ರೌಢಶಾಲೆಗೆ ಕಾಯಕಲ್ಪ ಬೇಕಾಗಿದೆ. ಹೊಸ ಕಟ್ಟಡ ನಿರ್ಮಾಣವಾಗಿ ಮಕ್ಕಳ ಭವಿಷ್ಯ ಉಜ್ವಲವಾಗಬೇಕಿದೆ.
ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಬೇರೆಡೆ ಹೊಸ ಕಟ್ಟಡ ನಿರ್ಮಾಣವಾಗಲೇಬೇಕಿದೆ. ಪಾಲಕರ ಅಳಲು: ಅನೇಕ ವರ್ಷಗಳ ಹಿಂದೆಯೇ ದೇವಸ್ಥಾನ ಜಾಗದಲ್ಲಿ ಸರ್ಕಾರಿ ಶಾಲೆ ನಿರ್ಮಿಸಲಾಗಿದೆ. ಆದರೆ ಶಾಲೆಗೆ ಶಾಶ್ವತವಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಈ ಕುರಿತು ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮಕ್ಕಳ ಪಾಲಕರು ಅಳಲು ತೋಡಿಕೊಂಡಿದ್ದಾರೆ.