ಕಲಘಟಗಿ: ನೆರೆ ಪರಿಹಾರಕ್ಕಾಗಿ ಪರಿತಪಿಸುತ್ತಿರುವ ಜನರೇ ಹೆಚ್ಚಿರುವ ಸಂದರ್ಭದಲ್ಲಿ ತಾಲೂಕಿನ ದ್ಯಾಮಾಪುರ ಗ್ರಾಮಸ್ಥರು ಶಿಕ್ಷಕ ವೃಂದದ ಕೋರಿಕೆಗೆ ಕಟ್ಟುಬಿದ್ದು ಸ್ವಂತ ವಂತಿಗೆಯಿಂದ ಸೋರುತ್ತಿರುವ ಸರ್ಕಾರಿ ಶಾಲಾ ಕೊಠಡಿ ರಿಪೇರಿಗೆ ಮುಂದಾಗಿ ಮಾದರಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಸುರಿದ ನಿರಂತರ ಅಬ್ಬರದ ಮಳೆಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳಲ್ಲಿ ಒಂದು ಕೊಠಡಿ ಮೇಲ್ಛಾವಣಿಯ ತಗಡುಗಳು ಸಂಪೂರ್ಣ ಹಾಳಾಗಿ ಒಳಗಡೆ ನೀರಿನಿಂದಾವೃತವಾಗಿತ್ತು. ನೆರೆಯ ರಜೆ ಮುಗಿದು ಶಾಲೆ ಪುನಾರಂಭ ಗೊಂಡಾಗ ಮಕ್ಕಳನ್ನು ಅಲ್ಲಿ ಕೂಡ್ರಿಸಲಾಗದ ದುಸ್ಥಿತಿ ಇತ್ತು.
ಅದಾಗಲೇ ಬಂದ ಸ್ವಾತಂತ್ರ್ಯೋತ್ಸವಕ್ಕೆ ಪಾಲಕರನ್ನು ಹಾಗೂ ಗ್ರಾಮಸ್ಥರನ್ನೆಲ್ಲ ಆಮಂತ್ರಿಸಿದ ಮುಖ್ಯಾಧ್ಯಾಪಕಿ ಎಸ್.ಬಿ. ಗುಂಡೂರ ಹಾಗೂ ಹಿರಿಯ ಶಿಕ್ಷಕ ಎಸ್.ಬಿ. ಬಾರಕೇರ ಶಾಲಾ ಕಟ್ಟಡದ ದುಸ್ಥಿತಿಯ ಚಿತ್ರಣ ತೆರೆದಿಟ್ಟಿದ್ದಾರೆ. ಪರಿಹಾರಕ್ಕೆ ಮಾರ್ಗೋಪಾಯವನ್ನೂ ಹೇಳಿದ್ದಾರೆ. ಅದರ ಫಲಶೃತಿಯೇ ಇಂದು ಗ್ರಾಮಸ್ಥರೆಲ್ಲರೂ ಸರ್ಕಾರದ ನೆರವನ್ನು ನಿರೀಕ್ಷಿಸದೇ ತಮ್ಮ ಸ್ವಂತ ವಂತಿಗೆಯಿಂದ 50 ಸಾವಿರ ರೂ. ಸಂಗ್ರಹಿಸಿ ಕೊ ಠಡಿ ಮೇಲ್ಛಾವಣಿಗೆ ಹೊಸ ತಗಡು ಹಾಕಿ ದುರಸ್ತಿಗೊಳಿಸುತ್ತಿದ್ದಾರೆ.
ಅಧಿಕಾರಿಗಳ ಸ್ಪಂದನೆ ಅಷ್ಟಕ್ಕಷ್ಟೆ: 1ರಿಂದ 5ನೇ ತರಗತಿಯ ಶಾಲೆಯಲ್ಲಿ ಇರುವುದು ಇಬ್ಬರೇ ಶಿಕ್ಷಕರು. 36 ವಿದ್ಯಾರ್ಥಿಗಳಿದ್ದು, ಮೂರು ತರಗತಿ ಕೋಣೆಗಳಿವೆ. ಅದರಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಬಲಿಗಾಗಿ ಕಾಯುತ್ತಿರುವಂತಿದೆ. ಅಲ್ಲಿ ವರ್ಗವನ್ನು ನಡೆಸದಂತೆ ಗ್ರಾಮಸ್ಥರು ವರ್ಷಗಳ ಹಿಂದೆಯೇ ತಾಕೀತು ಮಾಡಿದ್ದಾರೆ. ಹಲವು ವರ್ಷಗಳಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವ ಯಾವುದೇ ಫಲಪ್ರದ ಕಾರ್ಯ ಜರುಗಿಲ್ಲ.
ಕೆಲ ದಿನಗಳ ಹಿಂದ ಸುರಿದ ಭಾರೀ ಮಳೆಯಿಂದಾಗಿ ಇದ್ದ ಇನ್ನೊಂದು ವರ್ಗದ ಕೋಣೆಯೂ ಸೋರುತ್ತಿರುವುದರಿಂದ ಜಲಾವೃತ್ತ ಗೊಂಡಿತ್ತು. ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿಯೇ ಪ್ರಸ್ತಾಪ ಮಾಡಿದ ಇಬ್ಬರೂ ಶಿಕ್ಷಕರು ಪ್ರಥಮದಲ್ಲಿ ತಮ್ಮ 2000 ರೂ. ದೇಣಿಗೆ ನೀಡಿದರು. ನಂತರ ಎಸ್‌ಡಿಎಂಸಿಯವರು ಹಾಗೂ ಗ್ರಾಮಸ್ಥರೆಲ್ಲರೂ ದೇಣಿಗೆ ಸಂಗ್ರಹಿಸಿ ಶಾಲಾ ಕೊಠಡಿ ದುರಸ್ತಿಗೆ ಮುಂದಾಗಿದ್ದಾರೆ.
ಮಾದರಿ ಶಿಕ್ಷಕರು: ಶಾಲೆಯ ಮುಖ್ಯಾಧ್ಯಾಪಕಿ ಎಸ್.ಬಿ. ಗುಂಡೂರ ಆದರ್ಶ ಶಿಕ್ಷಕಿಯಾಗಿದ್ದಾರೆ. ಪಾಲಕರ ಮನವೊಲಿಸಿ ಎರಡು ಸೆಟ್ ಬಣ್ಣದ ಟ್ರ್ಯಾಕ್‌ಶೂಟ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳು ಕಂಗೊಳಿಸುವಂತೆ ಮಾಡಿದ್ದಾರೆ. ಶಾಲೆ ಆವರಣವನ್ನು ಕೈತೋಟದಿಂದ ಪರಿಸರ ಪ್ರೇಮ ಹುಟ್ಟುವಂತೆ ಮಾಡಿದ್ದಾರೆ. ತಮ್ಮ ಸ್ವಂತ ಹಣ ವಿನಿಯೋಗಿಸಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಚಿಕ್ಕಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ಪ್ರೋತ್ಸಾಹ ನೀಡುತಿದ್ದಾರೆ.
ಶಾಲಾ ಮೇಲ್ಛಾವಣಿ ಸೋರುವಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲವಾಗಿತ್ತು. ತತ್‌ಕ್ಷಣ ಸರ್ಕಾರದಿಂದ ರಿಪೇರಿ ಅಸಾಧ್ಯದ ಮಾತು. ಆದ್ದರಿಂದ ಗ್ರಾಮದಲ್ಲಿ ಪಟ್ಟಿ ಹಾಕಿ ಸುಧಾರಣೆ ಮಾಡಬೇಕೆಂಬ ಶಿಕ್ಷಕಿ ಎಸ್.ಬಿ. ಗುಂಡೂರ ಅವರ ಅಭಿಲಾಷೆಗೆ, ನೆರವಾದ ಗ್ರಾಮಸ್ಥರಿಗೆ ಕೃತಜ್ಞರಾಗಿದ್ದೇವೆ. ಸರ್ಕಾರದ ಹಣ ಬಂದಾಗ ಮತ್ತೆ ಅಭಿವೃದ್ಧಿ ಕಾರ್ಯ ಮಾಡುತ್ತೇವೆ
.•ವಸಂತ ಮಾಳಗಿ, ಎಸ್‌ಡಿಎಂಸಿ ಅಧ್ಯಕ್ಷ
•ಪ್ರಭಾಕರ ನಾಯಕ