Advertisement

ಶಾಲಾರಂಭ: ಚಿಣ್ಣರ ಸ್ವಾಗತಕ್ಕೆ ಶಾಲೆಗಳು ಸಿದ್ಧ

11:52 PM May 30, 2023 | Team Udayavani |

ಉಡುಪಿ/ಮಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳು ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿವೆ. ಮೇ 31ರ ಬೆಳಗ್ಗೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶ ದ್ವಾರದಲ್ಲೇ ತಳಿರು ತೋರಣ, ರಂಗೋಲಿ ಹಾಗೂ ಪುಷ್ಪಗುತ್ಛದ ಸ್ವಾಗತ ಸಿಗಲಿದೆ.

Advertisement

ಮೇ 29ರಂದೇ ಶಾಲೆಗೆ ಮುಖ್ಯಶಿಕ್ಷಕರು ಸಹಿತವಾಗಿ ಶಿಕ್ಷಕರು, ಸಿಬಂದಿ ವರ್ಗ ಹೋಗಿ ಸ್ವತ್ಛತೆ ಸಹಿತ ಎಲ್ಲ ರೀತಿಯ ವ್ಯವಸ್ಥೆ ಸರಿಯಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಮುಖ್ಯಶಿಕ್ಷಕರು ಈಗಾಗಲೇ ಶಿಕ್ಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಶಾಲೆಯಲ್ಲಿ ಆಗಬೇಕಿರುವ ಎಲ್ಲ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಶಾಲೆಗೆ ಮಕ್ಕಳನ್ನು ಆಹ್ವಾನಿಸುವ ಸಂದರ್ಭ ಊರಿಯ ಹಿರಿಯರು, ಜನ ಪ್ರತಿನಿಧಿಗಳು ಹಾಗೂ ಪಾಲಕ, ಪೋಷಕರು ಇರುವಂತೆ ಕೆಲವು ಶಾಲೆಗಳು ಸೂಚನೆಯನ್ನು ರವಾನಿಸಿವೆ. ಬಹುತೇಕ ಶಾಲೆಗಳಲ್ಲಿ ತಳಿರು ತೋರಣ, ರಂಗೋಲಿ ಹಾಕಿ, ಪ್ರತೀ ವಿದ್ಯಾರ್ಥಿಗಳಿಗೂ ಹೂ ನೀಡುವ ಮೂಲಕ ಸ್ವಾಗತಕ್ಕೆ ಸಿದ್ಧತೆ ಮಾಡಲಾಗಿದೆ.

ಪಾಯಸದೂಟ
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ಯೂಟದ ಜತೆಗೆ ಪಾಯಸ ಅಥವಾ ಒಂದು ಬಗೆಯ ಸಿಹಿ ತಿನಿಸುವ ನೀಡಲಾಗುತ್ತದೆ. ಹಾಗೆಯೇ ಸರಕಾರದಿಂದ ನೀಡುವ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಮೊದಲ ದಿನವೇ ವಿತರಿಸಲಾಗುತ್ತದೆ. ರಾಜ್ಯ ಪಠ್ಯಕ್ರಮದ ಖಾಸಗಿ ಹಾಗೂ ಅನುದಾನಿತ ಶಾಲಾಡಳಿತ ಮಂಡಳಿಗಳು ಕೂಡ ತರಗತಿ ಆರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿವೆ.

ಸರಕಾರಿ ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಚುರುಕುಗೊಂಡಿದ್ದು, ಮಕ್ಕಳ ಮನೆ ಮನೆಗೂ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಭೇಟಿ ನೀಡಿ ದಾಖಲಾತಿಗೆ ಉತ್ತೇಜನ ನೀಡುತ್ತಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಗಳು ಇರುವ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಚೆನ್ನಾಗಿದೆ ಎಂದೂ ಹೇಳಲಾಗುತ್ತದೆ.

Advertisement

ಎತ್ತಿನಗಾಡಿಯಲ್ಲಿ ಶಾಲೆಗೆ!
ಮಡಿಕೇರಿ: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಗೆ ಮಕ್ಕಳು ಎತ್ತಿನ ಗಾಡಿಯಲ್ಲಿ ಆಗಮಿಸುವ ಮೂಲಕ ಗಮನ ಸೆಳೆದರು. ಶಿಕ್ಷಕರು ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಿ, ಸಿಹಿ ವಿತರಿಸಿದರು.

ಶಾಲೆಗೆ ತಳಿರು ತೋರಣ
ಸಿದ್ದಾಪುರ: ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಪ್ರಾರಂಭೋತ್ಸವ ಮೇ 31ರಂದು ಜರಗಲಿದ್ದು, ಪೂರ್ವ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಶಿಕ್ಷಕರು ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸುತ್ತಿದ್ದಾರೆ.

ಪ್ರವೇಶಾತಿಗೆ ದಾಖಲೆಗಳು
ಸರಕಾರಿ ಶಾಲೆಗೆ ದಾಖಲೆ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಪಾಲಕ, ಪೋಷಕರ (ತಂದೆ ಮತ್ತು ತಾಯಿಯ ಅಥವಾ ತಂದೆ ತಾಯಿ ಇಲ್ಲದ ಸಂರ್ಭದಲ್ಲಿ ರಕ್ಷಕರು) ಆಧಾರ್‌ ಕಾರ್ಡ್‌ ಜತೆಗೆ ಮಗುವಿನ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಹೆಣ್ಣು ಮಗುವಾಗಿದ್ದರೆ ಭಾಗ್ಯ ಲಕ್ಷ್ಮೀ ಬಾಂಡ್‌ (ಇದ್ದಲ್ಲಿ ಮಾತ್ರ), ಮಗುವಿನ ಜನನ ಪ್ರಮಾಣ ಪತ್ರ, ಮಗುವಿನ ಭಾವಚಿತ್ರ ಇವಿಷ್ಟು ದಾಖಲೆಗಳನ್ನು ದಾಖಲಾತಿ ಸಂದರ್ಭದಲ್ಲಿ ನೀಡಬೇಕು. ಎಲ್ಲ ದಾಖಲೆಗಳ ಜೆರಾಕ್ಸ್‌ ಪ್ರತಿಯನ್ನು ಮಾತ್ರ ಶಾಲೆಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next