ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಸೋಮವಾರದಿಂದ ಶಾಲಾರಂಭವಾಗಿದ್ದು, ರಜಾ ಮುಗಿಸಿರುವ ವಿದ್ಯಾರ್ಥಿಗಳು ಮೇ 31ರಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಜೂ.1ರಿಂದ ಪದವಿ ಪೂರ್ವ ಕಾಲೇಜುಗಳ ತರಗತಿಗಳು ಕೂಡ ಆರಂಭವಾಗಲಿವೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆ ಸೇರಿ ಒಟ್ಟು 3,127 ಶಾಲೆಗಳಿವೆ. ಶಾಲಾರಂಭದ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ಶಾಲೆಗಳು ತೆರೆದುಕೊಂಡಿದ್ದವು. ಶಿಕ್ಷಕರು ಹಾಗೂ ಶಾಲಾ ಸಿಬಂದಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಪೂರ್ವ ತಯಾರಿ ಆರಂಭಿಸಿದ್ದಾರೆ. ಮಂಗಳವಾರವೂ ತಯಾರಿ ಪ್ರಕ್ರಿಯೆ ನಡೆಯಲಿದೆ.
ಶಾಲಾ ಕೊಠಡಿಗಳನ್ನು ಸ್ವತ್ಛಗೊಳಿಸುವ ಕಾರ್ಯ ಸೋಮವಾರ ನಡೆಯಿತು. ಶಾಲಾ ಕೊಠಡಿಗಳು, ಬಿಸಿಯೂಟ ಕೊಠಡಿಗಳು, ಶಾಲಾ ಆವರಣ ಸ್ವತ್ಛತೆಯನ್ನು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬಂದಿ ನಡೆಸಿದ್ದಾರೆ. ಶೈಕ್ಷಣಿಕ ವರ್ಷದ ಆರಂಭಕ್ಕೆ ಅಗತ್ಯ ಸಿದ್ಧತೆ, ಶಾಲಾವರಣದ ಸ್ವತ್ಛತೆ, ಮೂಲಸೌಕರ್ಯಗಳು ಸರಿಯಾಗಿದೆಯೇ? ಎಂಬುದನ್ನು ಪರಿಶೀಲನೆ ಮಾಡಲಾಯಿತು. ವಿದ್ಯಾರ್ಥಿಗಳ ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಸೇರಿದಂತೆ ಹಲವು ಕೆಲಸಗಳನ್ನು ನಡೆಸಲಾಗುತ್ತಿದೆ.
ಅನೇಕ ಶಾಲೆಗಳಲ್ಲಿ ಶಾಲಾರಂಭ ಕ್ಕಾಗಿ ತಳಿರು ತೋರಣಗಳು, ವಿವಿಧ ಅಲಂಕಾರಗಳಿಂದ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ಹಾಕಿಕೊಂಡಿರುವುದರಿಂದ ಅದಕ್ಕಾಗಿ ವಿಶೇಷ ತಯಾರಿಗಳೂ ನಡೆಯಿತು.
Related Articles
ಉಡುಪಿ ಡಿಡಿಪಿಐ ಗಣಪತಿ ಅವರು ಮಾತನಾಡಿ, ಜಿಲ್ಲಾದ್ಯಂತ ಎಲ್ಲ ಶಾಲೆಗಳಲ್ಲೂ ಮೂಲಸೌಕರ್ಯ ಪರಿಶೀಲನೆ ಮಾಡಲಾಗುತ್ತಿದೆ. ಶಿಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೇ 31ರಿಂದ ವಿದ್ಯಾರ್ಥಿಗಳು ಬರಲಿದ್ದಾರೆ. ಶಾಲಾರಂಭಕ್ಕೆ ಸಂಬಂಧಿಸಿದಂತೆ ಬಿಇಒಗಳ ಸಭೆಯನ್ನು ನಡೆಸಲಾಗಿದೆ ಎಂದರು.
ಸಮವಸ್ತ್ರ-ಪಠ್ಯ ಪುಸ್ತಕ ಸಿದ್ಧ
ಸೋಮವಾರ ಉಭಯ ಜಿಲ್ಲಾದ್ಯಂತ ಎಲ್ಲ ಶಾಲೆಗಳು ಆರಂಭವಾಗಿದ್ದು, ಮೇ 31ರಂದು ಮಕ್ಕಳನ್ನು ಬರಮಾಡಿಕೊಳ್ಳಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ಈ ಬಾರಿ ಶಾಲಾರಂಭಕ್ಕೆ ಮೊದಲೇ ಮಕ್ಕಳ ಸಮವಸ್ತ್ರ ಪೂರೈಕೆಯಾಗಿದೆ. ಜಿಲ್ಲೆಯ ಎಲ್ಲ ಶಾಲೆಗಳಿಗೆ ಈಗಾಗಲೇ ಸಮವಸ್ತ್ರ ಹಾಗೂ ಪಠ್ಯಪುಸ್ತಕ ರವಾನೆಯೂ ಆಗಿದೆ. ಮೇ 31ರಂದು ವಿತರಣೆ ನಡೆಯಲಿದೆ.
ನೀರಿನ ವ್ಯವಸ್ಥೆಗೆ ನಿರ್ದೇಶನ
ದ.ಕ. ಡಿಡಿಪಿಐ ದಯಾನಂದ ನಾಯಕ್ ಅವರು “ಉದಯವಾಣಿ’ ಜತೆಗೆ ಮಾತನಾಡಿ, ಜಿಲ್ಲೆಯ ಯಾವ ಶಾಲೆಗೂ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮೂಡುಬಿದಿರೆ ವ್ಯಾಪ್ತಿಯಲ್ಲಿ 15 ಹಾಗೂ ಬೆಳ್ತಂಗಡಿಯಲ್ಲಿ 24 ಶಾಲೆಗಳಿಗೆ ನೀರಿನ ಸಮಸ್ಯೆ ಬಗ್ಗೆ ಅಲ್ಲಿನ ಬಿಇಒಗಳು ತಿಳಿಸಿದ್ದಾರೆ. ಅಲ್ಲಿಗೆ ಸ್ಥಳೀಯ ಗ್ರಾ.ಪಂ. ನೆರವಿನಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.