ಕೊರೊನಾ ವಿಷಮ ಪರಿಸ್ಥಿತಿಯಲ್ಲಿ ಪರೀಕ್ಷೆ ಹಾಗೂ ಭೌತಿಕ ತರಗತಿ ನಡೆಸುವುದೇ ಕಷ್ಟ. ಆದರೂ ರಾಜ್ಯ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲವಾಗುವಂತೆ ಸರಳೀಕೃತ ರೂಪದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿ, ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದೆ.
ಎರಡು ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಅತ್ಯಂತ ಸುರಕ್ಷಿತ ವಲಯದಲ್ಲಿ ನಡೆಸಲು ಬೇಕಾದ ಸಿದ್ಧತೆಯನ್ನು ಜಿಲ್ಲಾ ಹಂತದಲ್ಲಿ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರಕ್ಕೆ ಅನುಗುಣವಾಗಿ ಪರೀಕ್ಷಾ ಕೇಂದ್ರದ ಸಂಖ್ಯೆಯನ್ನು ದ್ವಿಗುಣ ಮಾಡಲಾಗಿದೆ (ಮೂರು ಸಾವಿರದಿಂದ ಆರು ಸಾವಿರಕ್ಕೆ ಏರಿಸಲಾಗಿದೆ). ಪರೀಕ್ಷಾ ಮೇಲ್ವಿಚಾರಕವಾಗಿ ಸೇವೆ ಸಲ್ಲಿಸುವ ಎಲ್ಲರೂ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿ, ಸಮರೋಪಾದಿಯಲ್ಲಿ ಲಸಿಕೆ ಕೂಡ ನೀಡಲಾಗುತ್ತಿದೆ.
ಇದೆಲ್ಲದರ ಜತೆಗೆ ವಿದ್ಯಾರ್ಥಿಗಳು ತಾವಿರುವ ಪ್ರದೇಶದ ಸಮೀಪದ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ. ಎರಡು ಅಥವಾ ಮೂರು ದಿನಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯ ಅಂತಿಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳ ಬಹುದು. ಇದೆಲ್ಲದಕ್ಕೂ ಮಿಗಿಲಾಗಿ, ಪರೀಕ್ಷೆಯನ್ನು ಸಂಪೂರ್ಣವಾಗಿ ಆರೋಗ್ಯ ಇಲಾಖೆಯ ಸೂಚನೆ, ಮಾರ್ಗದರ್ಶನದಂತೆಯೇ ನಡೆಸ ಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ಸಿದ್ಧತೆ, ಪೂರ್ವತಯಾರಿ, ಪರೀಕ್ಷಾ ದಿನಾಂಕದ ಘೋಷಣೆಯ ಅನಂತರ ಸರಕಾರದಲ್ಲಿ ಪರೀಕ್ಷೆಯ ಬಗ್ಗೆ ಗೊಂದಲ ಸರಿಯಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ.
ಪರೀಕ್ಷೆಯ ಬಗ್ಗೆ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಭಿನ್ನ ಹೇಳಿಕೆ ನೀಡುವುದು ಸರಿಯಲ್ಲ. ಸುಮಾರು 8.70 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಸಚಿವರ ಗೊಂದಲದ ಹೇಳಿಕೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ನೇರ ಪರಿಣಾಮ ಬೀರಲಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಗೊಂದಲ ಅಥವಾ ಆತಂಕ ಸೃಷ್ಟಿ ಮಾಡದೇ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಉತ್ತೇಜಿಸುವ ಜಾಣ್ಮೆ ಸರಕಾರದ್ದಾಗಬೇಕು.
ಗ್ರಾಮೀಣ, ನಗರ, ಮಹಾನಗರ, ಪಟ್ಟಣ ಪಂಚಾಯತ್ ಸೇರಿದಂತೆ ರಾಜ್ಯದ ಪ್ರತೀ ವಿದ್ಯಾರ್ಥಿಯೂ ಅತ್ಯಂತ ಧೈರ್ಯ ಹಾಗೂ ಆತ್ಮವಿಶ್ವಾಸ ದಿಂದ ಪರೀಕ್ಷೆ ಬರೆಯಬೇಕಿದ್ದು, ಇದಕ್ಕೆ ಪೂರಕವಾಗಿ ಸರಕಾರ, ಇಲಾಖೆಗಳು, ಅಧಿಕಾರಿಗಳು, ಸಚಿವರು, ಶಾಸಕರು ಸಹಿತವಾಗಿ ಎಲ್ಲ ಜನಪ್ರತಿನಿಧಿಗಳು ಕೆಲಸ ಮಾಡಬೇಕಾಗಿದೆ. ಗೊಂದಲ ಹೇಳಿಕೆ ನೀಡುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ. ಎಲ್ಲ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಎಲ್ಲರ ಉತ್ತೇಜನ, ಪ್ರೋತ್ಸಾಹದ ಅಗತ್ಯವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಗೊಂದಲದ ಹೇಳಿಕೆ ನೀಡುವುದು ಸರಿಯಲ್ಲ.
ವಿದ್ಯಾರ್ಥಿಗಳು ಸುಗಮವಾಗಿ ಎಸೆಸೆಲ್ಸಿ ಪರೀಕ್ಷೆ ಬರೆದು, ಉತ್ತಮ ಫಲಿತಾಂಶವನ್ನು ಪಡೆದು, ಪಿಯುಸಿ ಸೇರಿದಂತೆ ತಮ್ಮ ಆಯ್ಕೆಯಂತೆ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಲು ಎಲ್ಲರೂ ಪ್ರೋತ್ಸಾಹಕರಾಗಿ ನಿಲ್ಲ ಬೇಕಿರುವುದು ಇಂದಿನ ಪರಿಸ್ಥಿತಿಯ ಅಗತ್ಯವಾಗಿದೆ.