ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ಜನ ಪ್ರತಿನಿಧಿಗಳಿಂದ ಅಭಿಪ್ರಾಯ ಕೋರಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರೇ ಖುದ್ದು ಪತ್ರ ಬರೆದಿದ್ದರೂ, ಬಹುತೇಕ ಜನ ಪ್ರತಿನಿಧಿಗಳು ಪ್ರತಿಕ್ರಿಯೆಯನ್ನೇ ನೀಡಿಲ್ಲ!
ಪ್ರತಿಕ್ರಿಯೆ ನೀಡಿರುವವರಲ್ಲಿ ಕೆಲವರು ಸದ್ಯ ಶಾಲಾರಂಭ ಬೇಡ ಎಂದಿದ್ದು, ಬೆರಳೆಣಿಕೆಯ ಜನ ಪ್ರತಿನಿಧಿಗಳು ಶಾಲಾರಂಭಿಸಲು ಸಲಹೆ ನೀಡಿದ್ದಾರೆ. ಶಾಲಾರಂಭ ಮಾಡುವುದು ಬೇಡ ಎಂದವರಲ್ಲಿ ಮಾಜಿ ಮುಖ್ಯಮಂತ್ರಿಗಳು ಕೂಡ ಸೇರಿದ್ದಾರೆ ಎನ್ನಲಾಗಿದೆ.
ಲಿಖೀತ ರೂಪದಲ್ಲಿ ಉತ್ತರ ನೀಡಿರುವ ಕೆಲವು ಶಾಸಕರು ಶಾಲಾರಂಭ ಮಾಡಬಹುದು. ಆದರೆ, ಮಕ್ಕಳ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಿಯುಸಿ ಹಾಗೂ ಪ್ರೌಢಶಾಲಾ ತರಗತಿಗಳನ್ನು ಆರಂಭಿಸಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉಪನ್ಯಾಸಕರಿಂದ ಬರುವ ಅಭಿಪ್ರಾಯದ ಆಧಾರದಲ್ಲಿ 6ರಿಂದ 8ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಬೇಕು. ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಇನ್ನಷ್ಟು ದಿನ ಕಾಯುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಈಗ ರಾಜ್ಯದಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವ ಜತೆಗೆ ಚೇತರಿಕೆ ಪ್ರಮಾಣ ಹೆಚ್ಚಿದೆ. ಅಲ್ಲದೆ, ಕಾಲೇಜು ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಲಾರಂಭ ಸಂಬಂಧಿಸಿ ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆ ಕರೆದು ಮಾಹಿತಿ ಪಡೆಯಲಾಗಿದೆ. ಬಹುತೇಕ ಪಾಲಕರು ಸದ್ಯಕ್ಕೆ ಶಾಲಾರಂಭಿಸುವುದು ಬೇಡ ಎಂದೇ ಸಲಹೆ ನೀಡಿದ್ದರು. ಬಳಿಕ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು. ಈ ಪೈಕಿ ಕೆಲವರು ಶಾಲೆ ಅರಂಭಿಸಲು ಮತ್ತು ಕೆಲವು ಆರಂಭಿಸದಿರವು ಸಲಹೆ ನೀಡಿದ್ದರು. ಏನಿದರೂ ಮಕ್ಕಳ ಸುರಕ್ಷೆಗೆ ಅಗತ್ಯ ಕ್ರಮ ಕೈಗೊಂಡ ಬಳಿಕವೇ ಶಾಲಾರಂಭ ಮಾಡಬೇಕು ಎಂದು ಸಲಹೆ ನೀಡಿದ್ದರು.