Advertisement

ಸೋಮವಾರ ಶಾಲಾರಂಭ; ಪುಸ್ತಕ, ಸಮವಸ್ತ್ರ ಸಿದ್ಧ… ವಿದ್ಯಾರ್ಥಿಗಳಿಗೆ ಸಿಗಲಿದೆ ಯುನಿಫಾರಂ

12:58 AM May 26, 2023 | Team Udayavani |

ಬೆಂಗಳೂರು: ಸೋಮವಾರ ಒಂದ ರಿಂದ ಹತ್ತನೇ ತರಗತಿಗಳು ಆರಂಭವಾಗಲಿದ್ದು, ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಒಂದು ಜತೆ ಸಮವಸ್ತ್ರ ಸಿಗಲಿದೆ!
ಈಚೆಗೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿ ಕೊಂಡಿದ್ದ ಶಿಕ್ಷಣ ಇಲಾಖೆ ಈ ಬಾರಿ ಮೊದಲ ದಿನವೇ ಅಗತ್ಯ ಸಾಮಗ್ರಿ ಪೂರೈಸಲು ನಿರ್ಧರಿಸಿದೆ. ಆದರೆ ಸರಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕೆಲವು ತೀರ್ಮಾನ ವಿಳಂಬವಾಗುತ್ತಿರುವುದರಿಂದ ಗೊಂದಲ ಮುಂದುವರಿದಿವೆ.

Advertisement

ಪಠ್ಯಪುಸ್ತಕ
ಈಗಾಗಲೇ ಸುಮಾರು 6.30 ಕೋಟಿ ಪಠ್ಯ ಪುಸ್ತಕ ಗಳನ್ನು ವಿತರಿಸಲಾಗಿದೆ. ಪಠ್ಯಕ್ರಮ ಪರಿಷ್ಕರಿಸುವುದಾಗಿ ಕಾಂಗ್ರೆಸ್‌ ಸರಕಾರ ತಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಆದರೆ ಈ ವರ್ಷದ ಪಠ್ಯಪುಸ್ತಕಗಳು ಈಗಾಗಲೇ ವಿತರಣೆ ಆಗಿದ್ದು, ಪರಿಷ್ಕರಣೆಯ ಪರಿಣಾಮ ಏನು ಎಂಬ ಗೊಂದಲವಿದೆ. ಇಡೀ ಪಠ್ಯಪುಸ್ತಕವನ್ನೇ ವಾಪಸ್‌ ಪಡೆಯಲಾಗುವುದೇ ಅಥವಾ ಕೆಲವು ಅಂಶ ಕೈಬಿಡಲಾಗುವುದೇ ಎಂಬ ಬಗ್ಗೆ ಅಸ್ಪಷ್ಟತೆ ಇದೆ.

ಸಮವಸ್ತ್ರ
ಶಾಲೆಯ ಮೊದಲ ದಿನವೇ ಒಂದು ಜತೆ ಸಮವಸ್ತ್ರವನ್ನು ಮಕ್ಕಳಿಗೆ ನೀಡುವ ಸಂಕಲ್ಪ ಮಾಡಲಾಗಿದೆ. ಮತ್ತೂಂದು ಜತೆ ಸಮವಸ್ತ್ರ ವನ್ನು ಆಗಸ್ಟ್‌ ವೇಳೆಗೆ ನೀಡುವ ಚಿಂತನೆ ಇದೆ. 1ರಿಂದ 7ನೇ ತರಗತಿಯ ಬಾಲಕರಿಗೆ ಚಡ್ಡಿ/ಹಾಫ್ಪ್ಯಾಂಟ್‌ – ಶರ್ಟ್‌, ಬಾಲಕಿಯರಿಗೆ ಸ್ಕರ್ಟ್‌- ಶರ್ಟ್‌, 8ರಿಂದ 10ನೇ ತರಗತಿ ಬಾಲಕರಿಗೆ ಪ್ಯಾಂಟ್‌ -ಶರ್ಟ್‌, ಬಾಲಕಿಯರಿಗೆ ಚೂಡಿದಾರ್‌ ಬಟ್ಟೆ ಸಿಗಲಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರದ ಬಟ್ಟೆ ಒದಗಿಸುವ ಜವಾಬ್ದಾರಿಯನ್ನು ಕಲಬುರಗಿ ವಿಭಾಗದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಬೆಳಗಾವಿ ವಿಭಾಗದಲ್ಲಿ ಕರ್ನಾಟಕ ಜವುಳಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಂಚನ್‌ ಇಂಡಿಯಾ, ಬೆಂಗಳೂರು ವಿಭಾಗದಲ್ಲಿ ಕಂಚನ್‌ ಇಂಡಿಯಾ ವಹಿಸಿಕೊಂಡಿದೆ.

ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮೋದನೆ
2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕ ವಾಗಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಷರತ್ತಿನ ಅನುಮತಿ ನೀಡಿದೆ. ಈ ಅತಿಥಿ ಶಿಕ್ಷಕರ ಮಾಸಿಕ ಗೌರವ ಸಂಭಾವನೆ 10 ಸಾವಿರ ರೂ. ಇರಲಿದೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನುಮತಿ ಕೊಡಲಾಗಿದೆ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪಠ್ಯ ಪುಸ್ತಕ, ಒಂದು ಜತೆ ಸಮವಸ್ತ್ರ ನೀಡಿದ್ದೇವೆ. ಮತ್ತೂಂದು ಜತೆ ಶೈಕ್ಷಣಿಕ ವರ್ಷ ಆರಂಭಗೊಂಡ ಬಳಿಕ ನೀಡುತ್ತೇವೆ. ಪೀಠೊಪಕರಣಗಳ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ಗುಣಾತ್ಮಕ ಶೈಕ್ಷಣಿಕ ವರ್ಷ ಅನುಷ್ಠಾನಕ್ಕೆ ಬದ್ಧರಾಗಿದ್ದೇವೆ.
– ಆರ್‌. ವಿಶಾಲ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ

Advertisement

ಹೈಸ್ಕೂಲ್‌ ಮಕ್ಕಳಿಗೆ ಮಫ‌ತ್ಲಾಲ್‌ ಇಂಡಸ್ಟ್ರೀಸ್‌ ಸಮವಸ್ತ್ರದ ಬಟ್ಟೆ ಒದಗಿಸಲಿದೆ. ಆದರೆ ಪೀಠೊಪಕರಣಗಳ ಪೂರೈಕೆ ಇನ್ನೂ ಆಗಿಲ್ಲ. ಶಾಲೆಗಳ ಬೇಡಿಕೆಯ ಆಧಾರ ದಲ್ಲಿ ಟೆಂಡರ್‌ ನೀಡುವ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಆಯುಕ್ತ ವಿಶಾಲ್‌ ತಿಳಿಸಿದ್ದಾರೆ.

ಶಿಕ್ಷಕರ ನೇಮಕಾತಿ
ಬಿಜೆಪಿ ಸರಕಾರ ಈ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ 15 ಸಾವಿರ ಶಿಕ್ಷಕರನ್ನು ಹೊಸದಾಗಿ ನೇಮಿಸುವ ಉತ್ಸಾಹ ತೋರಿತ್ತು. ಆದರೆ ನೇಮಕಾತಿ ಪ್ರಕ್ರಿಯೆ ಕೋರ್ಟ್‌ನಲ್ಲಿ ಇರುವುದರಿಂದ ಹೊಸ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಅಂತಿಮ ಪಟ್ಟಿಯಲ್ಲಿ ಆಯ್ಕೆ ಆಗಿರುವ 13,352 ಶಿಕ್ಷಕರ ನೇಮಕಾತಿ ಯಾವಾಗ ನಡೆಯಲಿದೆ ಎಂಬುದು ಅನಿಶ್ಚಿತವಾಗಿದೆ. ಈ ಶಿಕ್ಷಕರ ನೈಜ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದರೂ ಹೊಸ ಸರಕಾರದ ತೀರ್ಮಾನಕ್ಕೆ ಸಮಯ ತಗಲಲಿದೆ. ಶಿಕ್ಷಕರ ವರ್ಗಾವಣೆ, ನೇಮಕಾತಿ, ಹೆಚ್ಚುವರಿ ಶಿಕ್ಷಕರ ನಿಯೋಜನೆ ಶೈಕ್ಷಣಿಕ ವರ್ಷದೆಡೆಯಲ್ಲಿ ನಡೆಯಲು ಪ್ರಾರಂಭಗೊಂಡರೆ ಶೈಕ್ಷಣಿಕ ಚಟುವಟಿಕೆಯಲ್ಲಿ ವ್ಯತ್ಯಾಸಗೊಳ್ಳುವ ಸಾಧ್ಯತೆಯಿದೆ. ಇದರ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಈಗಲೂ ಇರುವ ಲಕ್ಷ ಶಿಕ್ಷಕರ ಕೊರತೆ ಮುಂತಾದ ಅಂಶಗಳು ಶೈಕ್ಷಣಿಕ ವರ್ಷವನ್ನು ಗೋಜಲುಗೊಳಿಸುವುದೇ ಎಂಬ ಆತಂಕವಿದೆ.

ಪ್ರಕಟಗೊಳ್ಳದ ಅನಧಿಕೃತ ಶಾಲೆಗಳ ಪಟ್ಟಿ
ಈ ವರ್ಷದಿಂದ ಅನಧಿಕೃತ ಶಾಲೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಆದರೆ ಯಾವುದೆಲ್ಲ ಅನಧಿಕೃತ ಶಾಲೆಗಳು ಎಂಬ ಅಧಿಕೃತ ಪಟ್ಟಿ ಇನ್ನೂ ಬಹಿರಂಗವಾಗಿಲ್ಲ. ಸುಮಾರು 1,600 ಶಾಲೆಗಳಿಗೆ ಅನಧಿಕೃತ ಎಂದು ನೋಟಿಸ್‌ ನೀಡಿ, ಲೋಪದೋಷಗಳನ್ನು ತಿದ್ದಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು. ಆದರೆ ಈ ಅವಧಿಯಲ್ಲಿ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳದೆ ಅನಧಿಕೃತವಾಗಿರುವ ಶಾಲೆಗಳು ಯಾವುವು ಎಂಬ ಮಾಹಿತಿ ಹೊರಬಿದ್ದಿಲ್ಲ. ಅನಧಿಕೃತ ಶಾಲೆಗಳಿಗೆ ಪ್ರವೇಶ ಪಡೆದರೆ ಆ ವಿದ್ಯಾರ್ಥಿಗೆ ಮಾನ್ಯತೆ ನೀಡುವುದಿಲ್ಲ ಎಂದು ಸರಕಾರ ಹೇಳಿದೆ. ಆದರೆ ಅನಧಿಕೃತ ಶಾಲೆಯ ಮಾಹಿತಿ ಬಹಿರಂಗಗೊಳ್ಳದಿದ್ದರೆ ವಿದ್ಯಾರ್ಥಿ ಮತ್ತು ಪೋಷಕರಿಗೆ ತಾವು ಸೇರುವ ಶಾಲೆಯ ಸಾಚಾತನ ತಿಳಿಯುವುದಿಲ್ಲ. ಶಾಲೆಗಳಿಗೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಮೇ 25ರ ತನಕ ಸಮಯ ನೀಡಿದ್ದೆವು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನ ಕುಮಾರ್‌ ಹೇಳಿದ್ದಾರೆ.

– ರಾಕೇಶ್‌ ಎನ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next