Advertisement

ಸುರಕ್ಷಿತ ವಾತಾವರಣದೊಂದಿಗೆ ಶಾಲಾ ಕಾಲೇಜು ಆರಂಭಕ್ಕೆ ಸಿದ್ಧತೆ : ಸಚಿವ ಸುರೇಶ್ ಕುಮಾರ್

06:13 PM Dec 23, 2020 | sudhir |

ಬೆಂಗಳೂರು : ಈಗಾಗಲೇ ರಾಜ್ಯ ಸರಕಾರ ನಿರ್ಧರಿಸಿದಂತೆ ಜನವರಿ 1 ರಿಂದಲೇ ಶಾಲಾ ಕಾಲೇಜುಗಳನ್ನು ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿದ್ದಾರೆ.

Advertisement

ಶಾಲಾರಂಭದ ಕುರಿತು ಕೋವಿಡ್ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಮಾರ್ಗದರ್ಶನದೊಂದಿಗೆ ಬುಧವಾರ ಬೆಳಗ್ಗೆ ರಾಜ್ಯದ ಎಲ್ಲ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಡಿಡಿಪಿಐ ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿ ಅವರಿಂದ ಸಲಹೆಗಳನ್ನು ಪಡೆದುಕೊಂಡು ಮಾತನಾಡಿದ ಸಚಿವರು ಮಹಾಮಾರಿ ಕರೋನಾ ಓಡಿಸೋಣ… ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಓದಿಸೋಣ..’ ಎಂಬ ಧ್ಯೇಯದೊಂದಿಗೆ ಸುರಕ್ಷಿತ ವಾತಾವರಣದಲ್ಲಿ ಜ. 1 ರಿಂದ ಶಾಲೆಗಳನ್ನು ಆರಂಭಿಸಲು ವಿವಿಧ  ಇಲಾಖೆಗಳ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಶಾಲಾರಂಭದ ಬಳಿಕ ಎಷ್ಟೇ ಮಕ್ಕಳು ಶಾಲೆಗೆ ಬರಲಿ ಅವರು ಸುರಕ್ಷಿತವಾಗಿರುವಂತೆ ಎಲ್ಲ ಉಪಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಗಳು ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ:ಬೀದರ್ ಗೆ ಆಗಮಿಸಿದ ಬ್ರಿಟನ್ ಯಾತ್ರಾರ್ಥಿ ಮೇಲೆ ನಿಗಾ : ಜಿಲ್ಲಾಧಿಕಾರಿ ರಾಮಚಂದ್ರನ್ ಆರ್

ಭರವಸೆ ಮೂಡಿಸುವ ಕೆಲಸಗಳಾಗಲಿ
ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳು ಸುರಕ್ಷಿತ ವಾತಾವರಣದಲ್ಲಿ ಆರಂಭಗೊಂಡು ತರಗತಿಗಳು ಸಾಮಾಜಿಕ ಅಂತರದಲ್ಲಿ ನಡೆಯುತ್ತವೆ ಎಂಬ ಕುರಿತು ಪೋಷಕರಲ್ಲಿ ಮತ್ತು ಸಮಾಜದಲ್ಲಿ ಭರವಸೆ ಮೂಡಿಸುವ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

Advertisement

ಡಿ. 24ರ ಗುರುವಾರ ಬೆಳಗ್ಗೆ ಆಯಾ ಜಿಲ್ಲಾ ಡಿಡಿಪಿಐ ಮತ್ತು ಡಿಡಿಪಿಯುಗಳು ತಮ್ಮ ವ್ಯಾಪ್ತಿಯ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಮತ್ತು ಪಿಯು ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ 10 ಮತ್ತು 12ನೇ ತರಗತಿಗಳ ಮತ್ತು 6ರಿಂದ 9ನೇ ತರಗತಿಗಳ ವಿದ್ಯಾಗಮ ತರಗತಿಗಳನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಮತ್ತು ಎಸ್ಒಪಿಗಳನ್ನು ಪಾಲಿಸುವ ಸಂಬಂಧದಲ್ಲಿ  ಮಾರ್ಗದರ್ಶನ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದರು.

ಪ್ರತಿಷ್ಠೆಯ ವಿಷಯವಲ್ಲ:
ಶಾಲಾರಂಭ ಸರ್ಕಾರಕ್ಕೆ ಬದ್ಧತೆಯ ವಿಷಯ ಮಾತ್ರವೇ ಆಗಿದ್ದು, ಅದು ಪ್ರತಿಷ್ಠೆಯ ವಿಷಯವಾಗಿಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವರು, ಇನ್ನೊಂದು ವಾರದಲ್ಲಿ ಶಾಲಾ ತರಗತಿಗಳ ಪೀರಿಯಡ್ ಸಮಯ, ಪಠ್ಯಕ್ರಮ ನಿಗದಿ ಮಾಡಲಾಗುತ್ತದೆ ಮತ್ತು 10 ಮತ್ತು 12ನೇ ತರಗತಿಗಳ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next