ಹಿರೇಕೆರೂರ: ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ನಡೆಯಿತು.
ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರಚಾರ ನಡೆಸಿ, ತಮಗೇ ಮತ ಹಾಕುವಂತೆ ಮತದಾರ(ವಿದ್ಯಾರ್ಥಿ)ನ್ನು ಮನವೊಲಿಸುತ್ತಿರುವುದು ಮಾಡಿಕೊಳ್ಳುವ ದೃಶ್ಯಗಳು ಗಮನ ಸೆಳೆದವು.
ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ ಪಡೆಯುವುದು, ನಾಮಪತ್ರ ಪರಿಶೀಲನೆ, ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದ ಅಭ್ಯರ್ಥಿಗಳ ಘೋಷಣೆ, ಚುನಾವಣೆ ಪ್ರಚಾರ, ಚುನಾವಣೆ ದಿನಾಂಕ ಪ್ರಕಟಣೆ ಎಲ್ಲ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ಜರುಗುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಅರಿವು ಮೂಡಿಸಿದವು.
ಚುನಾವಣೆಯಲ್ಲಿ ಮತದಾನಕ್ಕೆ ಇವಿಎಂ ಬಳಸುವ ರೀತಿಯಲ್ಲಿ ಮೊಬೈಲ್ ವೋಟಿಂಗ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು. ಇವಿಎಂ ನಲ್ಲಿ ಇರುವಂತೆ ನೋಟಾವೂ ಸೇರಿದಂತೆ 16 ಅಭ್ಯರ್ಥಿಗಳ ಫೋಟೋ ಸಹಿತ ಮೊಬೈಲ್ಗಳಲ್ಲಿ ಸೆಟಿಂಗ್ ಮಾಡಲಾಗಿತ್ತು. ಚುನಾವಣೆ ನಡೆಯುವ ಪೂರ್ವದಲ್ಲಿ ಇವಿಎಂ ಮಷಿನ್ ನಲ್ಲಿರುವ ಬ್ಯಾಲಟಿಂಗ್, ಕ್ಲೋಸ್, ರಿಸಲ್r, ಕ್ಲಿಯರ್ ಬಟನ್‌ಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸಮಾಜ ಶಿಕ್ಷಕ ಷಣ್ಮುಖ ಜಿ.ಎಚ್. ಮಾಹಿತಿ ನೀಡಿದ್ದರು.
ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ಎಂ.ಎಸ್.ದಿವೀಗಿಹಳ್ಳಿ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆಯ ಎಲ್ಲ ಕಾರ್ಯಗಳನ್ನು ವಿದ್ಯಾರ್ಥಿಗಳೆ ನಿರ್ವಹಿಸಿದರು. ಈ ಸಮಯದಲ್ಲಿ ಶಿಕ್ಷಕರಾದ ಎಂ.ಎಂ.ಕೆರೂರ, ಎಂ.ಸಿ.ತುಮ್ಮಿನಕಟ್ಟಿ, ಎಸ್.ಎಂ.ಪಟ್ಟಣಶೆಟ್ಟಿ, ಬಿ.ಡಿ.ಪಾಟೀಲ, ಸಿ.ಎಚ್.ಬತ್ತೇರ, ವೀರೇಶ ಆಲದಕಟ್ಟಿ, ಎಸ್.ಕೆ.ಗುಳೇದಗುಡ್ಡ, ಗೀತಾ ಶೇತಸನದಿ ಇದ್ದರು.