ವೇಣೂರು: ಮಕ್ಕಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ಜರಗಿತು. ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕವನ್ನು ವಿತರಿಸಿ, ಕೂಕ್ರಬೆಟ್ಟು ಸರಕಾರಿ ಶಾಲೆ ತಾಲೂಕಿಗೆ ಮಾದರಿಯಾಗಿದೆ. ಮುಚ್ಚುವ ಹಂತದಲ್ಲಿದ್ದ ಈ ಶಾಲೆಗೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಹಾಗೂ ಮರೋಡಿ ಗ್ರಾಮ ಸಮಿತಿಯ ಜಯಂತ ಕೋಟ್ಯಾನ್ ನೇತೃತ್ವದ ತಂಡದ ಮೂಲಕ ಮರುಜೀವ ದೊರಕಿದೆ. ಈ ಶಾಲೆಗೆ ಸರಕಾರದಿಂದ ಮೂಲಸೌಕರ್ಯ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿ ಸುತ್ತೇನೆ. ಮುಂದಿನ ವರ್ಷದಲ್ಲಿ ವಿವಿಧ ಕಂಪೆನಿಗಳ ಸಿಎಸ್‌ಆರ್ ನಿಧಿಯಿಂದ ಈ ಶಾಲೆಗೆ 20 ಲಕ್ಷ ರೂ. ಅನುದಾನವನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ನಿವೃತ್ತ ಶಿಕ್ಷಕ ಅಣ್ಣಪ್ಪ ಹೆಗ್ಡೆ ಕಾರ್ಯ ಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಸಮಿತಿಯ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ, ಶಾಲೆ ಎಂಬುದು ಮತ್ತೂಂದು ದೇವಸ್ಥಾನ ಇದ್ದಂತೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ಸಮಾಜದ ಆಸ್ತಿಯಾಗಿ ಬೆಳೆಸುವ ಕಾರ್ಯ ಆಗಬೇಕಿದೆ. ಸರಕಾರಿ ಶಾಲೆಯ ಬಗ್ಗೆ ಯಾರೂ ಕೀಳಾಗಿ ಮಾತನಾಡಬಾರದು. ಸರಕಾರಿ ಶಾಲೆ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಮರೋಡಿ ಗ್ರಾ.ಪಂ. ಉಪಾಧ್ಯಕ್ಷೆ ವನಿತಾ, ಸದಸ್ಯ ಕೃಷ್ಣಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪತ್ರಕರ್ತ ಪ್ರದೀಶ್ ಹಾರೊದ್ದು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುಫಲಾ ಸ್ವಾಗತಿಸಿ, ಶಿಕ್ಷಕಿ ಹರ್ಷಲಾ ನಿರೂಪಿಸಿದರು. ಬಾಲಕೃಷ್ಣ ಬಂಗೇರ ವಂದಿಸಿದರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ, ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಮಕ್ಕಳ ಹೆತ್ತವರು, ಶಿಕ್ಷಣಾಭಿಮಾನಿಗಳು, ಶಿಕ್ಷಕರು ಮತ್ತಿತರರು ಭಾಗವಹಿಸಿದ್ದರು.
ಕಳೆದ ವರ್ಷ ಕೇವಲ 16 ಮಕ್ಕಳಿದ್ದ ಈ ಶಾಲೆಯಲ್ಲಿ ಇಂದು 80ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ 36 ಮಕ್ಕಳು ದಾಖಲಾದರು. ಕಳೆದ ವರ್ಷ 1ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೆ, ಈ ಬಾರಿ 18 ಮಕ್ಕಳು ಸೇರ್ಪಡೆಯಾದರು. ಹಾಗೆಯೇ ವಿವಿಧ ತರಗತಿಗಳಿಗೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳು ಈ ಶಾಲೆಗೆ ದಾಖಲಾಗಿದ್ದಾರೆ.
ಅತ್ಯುತ್ತಮ ಪ್ರತಿಕ್ರಿಯೆ
ಶಾಲೆಯಲ್ಲಿ ಆರಂಭಿಸಲಾದ ಎಲ್ಕೆಜಿ ಮತ್ತು ಯುಕೆಜಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟು ಉತ್ತಮ ಪ್ರತಿಕ್ರಿಯೆ ತಾಲೂಕಿನ ಬೇರೆ ಸರಕಾರಿ ಶಾಲೆಯಲ್ಲಿ ಕಂಡಿಲ್ಲ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅದು ಸಾಕಾರಗೊಂಡರೆ ಯಾವುದೇ ಸರಕಾರಿ ಶಾಲೆ ಮುಚ್ಚುವುದಿಲ್ಲ.
-ಹರೀಶ್ ಪೂಂಜಶಾಸಕರು
ಆಂಗ್ಲ ಶಿಕ್ಷಣಕ್ಕೆ 36 ಮಕ್ಕಳು
ಕಳೆದ ವರ್ಷ ಕೇವಲ 16 ಮಕ್ಕಳಿದ್ದ ಈ ಶಾಲೆಯಲ್ಲಿ ಇಂದು 80ಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ 36 ಮಕ್ಕಳು ದಾಖಲಾದರು. ಕಳೆದ ವರ್ಷ 1ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೆ, ಈ ಬಾರಿ 18 ಮಕ್ಕಳು ಸೇರ್ಪಡೆಯಾದರು. ಹಾಗೆಯೇ ವಿವಿಧ ತರಗತಿಗಳಿಗೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳು ಈ ಶಾಲೆಗೆ ದಾಖಲಾಗಿದ್ದಾರೆ.