Advertisement

ಶಾಲೆ ಒಂದು ಕಡೆ, ಕೊಠಡಿಗಳು ಇನ್ನೊಂದೆಡೆ

06:03 PM May 31, 2022 | Team Udayavani |

ಗುಳೇದಗುಡ್ಡ: ಇಲ್ಲಿ ಶಾಲೆಯೊಂದು ಕಡೆ ಇದ್ದರೆ ಕೊಠಡಿಗಳು ಇನ್ನೊಂದು ಕಡೆ ಇವೆ. ಶಿಕ್ಷಕರಿಗೆ-ಮಕ್ಕಳಿಗೆ ಅತ್ತಿಂದಿತ್ತ ಇತ್ತಿಂದತ್ತ ಅಲೆದಾಟ ನಿತ್ಯ ತಪ್ಪಿದ್ದಲ್ಲ. ಇದು ಗುಳೇದಗುಡ್ಡ ತಾಲೂಕಿನ ಪರ್ವತಿ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ.

Advertisement

ಪರ್ವತಿ ಗ್ರಾಮದ ಸರಕಾರಿ ಶಾಲೆಯು ಕಳೆದ ಹತ್ತು ವರ್ಷಗಳ ಹಿಂದಿನಿಂದಲೂ ಕೊಠಡಿಗಳ ಸಮಸ್ಯೆ ಎದುರಿಸುತ್ತ ಬಂದಿದೆ. ಆದರೆ ಇದುವರೆಗೂ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಶಾಲೆಗೆ ಎರಡು ಎಕರೆ ಭೂಮಿ ಮಂಜೂರಿಯಾಗಿದೆ. ಸರಕಾರ ಈ ಹಿಂದೆ ಇದಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಆ ಅನುದಾನ ಮರಳಿ ಹೋಗಿದೆ ಎನ್ನಲಾಗಿದೆ.

ಕೇವಲ ಐದೇ ಕೊಠಡಿಗಳಿವೆ: ಪರ್ವತಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 8 ಕೊಠಡಿಗಳಿದ್ದು, ಅದರಲ್ಲಿ ಒಂದು ಶಿಥಿಲಾವಸ್ಥೆಯಲ್ಲಿದೆ. ಎರಡು ಕೊಠಡಿಗಳನ್ನು ಹೈಸ್ಕೂಲ್‌ನವರಿಗೆ ನೀಡಲಾಗಿದೆ. ಇನ್ನು ಉಳಿದಿರುವ ಐದು ಕೊಠಡಿಗಳಲ್ಲಿಯೇ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. 1ರಿಂದ 8ನೇ ತರಗತಿವರೆಗಿನ ಸುಮಾರು 198 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. 9-10ನೇ ತರಗತಿಯ ಪ್ರೌಢಶಾಲೆ ವಿಭಾಗದಲ್ಲಿ 54 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಒಟ್ಟು 5 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಶಾಲೆಗೆ ಮುಖ್ಯ ಶಿಕ್ಷಕರು ಸೇರಿ ಇನ್ನೂ ನಾಲ್ವರ ಶಿಕ್ಷಕರ ಅವಶ್ಯಕತೆಯಿದೆ. 252 ಮಕ್ಕಳಿಗೆ ಕೇವಲ ಐದೇ ಕೊಠಡಿಗಳಿವೆ.

ದಿಕ್ಕಿಗೊಂದು ವರ್ಗ ಕೊಠಡಿ: ಗ್ರಾಮದ ಸರಕಾರಿ ಶಾಲೆಯ ಕೊಠಡಿಗಳು ಗ್ರಾಮದ ತುಂಬೆಲ್ಲ ಇದ್ದು, 1 ಮತ್ತು 3ನೇ ತರಗತಿಗಳನ್ನು ಶಾಲಾ ಕೊಠಡಿಯಲ್ಲಿ, 4 ಮತ್ತು 7ನೇ ತರಗತಿಗಳನ್ನು ಮತ್ತೂಂದು ಕಡೆ, 6 ಮತ್ತು 5ನೇ ತರಗತಿಗಳನ್ನು ಪ್ರೌಢಶಾಲೆಯ ಕೊಠಡಿ ಪಕ್ಕದಲ್ಲಿ ಹೀಗೆ ಗ್ರಾಮದಲ್ಲಿ ಎಲ್ಲೆಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆಯೋ ಅಲ್ಲಲ್ಲಿ ಶಿಕ್ಷಕರು ನಿತ್ಯ ತೆರಳಿ ಪಾಠ ಮಾಡುವುದಾಗಿದೆ. ಇದರಿಂದ ಶಿಕ್ಷಕರಿಗಷ್ಟೇ ಅಲ್ಲ ಮಕ್ಕಳಿಗೂ ಸರಿಯಾದ ಶಿಕ್ಷಣ ಪಡೆಯಲು ಆಗುತ್ತಿಲ್ಲ. 1 ಹಾಗೂ 2ನೇ ತರಗತಿ ಮಕ್ಕಳು ಒಂದೇ ಕೊಠಡಿಯಲ್ಲಿ, 3 ಹಾಗೂ 4ನೇ ತರಗತಿ ಮಕ್ಕಳನ್ನು ಒಂದೇ ಕಡೆ ಕೂರಿಸಿ ಪಾಠ ಮಾಡುವ ಸ್ಥಿತಿ ಇದೆ.

ಅನುದಾನ ಹಿಂದಕ್ಕೆ: ಪರ್ವತಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಆರ್‌ ಎಂಎಸ್‌ಎ ಅಡಿಯಲ್ಲಿ ನಾಲ್ಕು ವರ್ಗ ಕೊಠಡಿ, 1 ಸಿಬ್ಬಂದಿ, 1ಮುಖ್ಯಗುರುಗಳ ಕಚೇರಿ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಒಟ್ಟು 10 ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ ಆ ಕೆಲಸ ಇದುವರೆಗೂ ಆಗಿಲ್ಲ.

Advertisement

ಸಿಬ್ಬಂದಿ ಕೊಠಡಿ ಇಲ್ಲ: ನಿತ್ಯ ಪಾಠ ಮಾಡಿ, ಮುಂದಿನ ಪಾಠದ ಬಗ್ಗೆ, ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಕೊಳ್ಳಲು ಈ ಶಾಲೆಯಲ್ಲಿ ಶಿಕ್ಷಕರಿಗೆ ಸರಿಯಾದ ಸಿಬ್ಬಂದಿ ಕೊಠಡಿ ಇಲ್ಲ. 6ನೇ ತರಗತಿ ಮಕ್ಕಳ ಕೊಠಡಿಯಲ್ಲಿಯೇ ಸಿಬ್ಬಂದಿಗಳು ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಆಟದ ಮೈದಾನವಿಲ್ಲ. ಅಲ್ಲದೇ ಮಧ್ಯಾಹ್ನದ ಸಮಯದಲ್ಲಿ ಮಕ್ಕಳು ಊಟ ಮಾಡಲು ಸಹ ಕುಳಿತುಕೊಳ್ಳಲು ಸರಿಯಾದ ಜಾಗವಿಲ್ಲ.

2 ಎಕರೆ ಭೂಮಿ: ಪರ್ವತಿ ಗ್ರಾಮದ ಶಾಲೆಗೆ ನೂತನ ಕಟ್ಟಡ ನಿರ್ಮಾಣದ ಸಲುವಾಗಿ ಸರಕಾರ 2 ಎಕರೆ ಭೂಮಿ ಖರೀದಿಸಲಾಗಿದೆ. ಆದರೆ ಸರಕಾರ ಶಾಲೆ ನಿರ್ಮಾಣಕ್ಕೆ ಅನುದಾನ ನೀಡದ ಕಾರಣ ಕೊಠಡಿಗಳ ನಿರ್ಮಾಣ ಕಾರ್ಯ ಹಿಂದೆ ಬಿದ್ದಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರದ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ತರುತ್ತಿದ್ದಾರೆ. ಆದರೆ, ಗುಳೇದಗುಡ್ಡದ ಪರ್ವತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಹೀಗಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ.

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next