Advertisement

ಐಟಿ ದಿಗ್ಗಜನ ತಾಯಿ ತವರು ಶಾಲೆ ಅವ್ಯವಸ್ಥೆಗಳ ಆಗರ

03:37 PM Nov 29, 2019 | Suhan S |

ಶಿಡ್ಲಘಟ್ಟ: ಶಾಲೆಯೇ ದೇಗುಲ, ಕೈಮುಗಿದು ಒಳಗೆ ಬನ್ನಿ ಎಂದು ಹೇಳುವುದು ಸರ್ವೇ ಸಾಮಾನ್ಯ. ಆದರೆ ತಾಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಡಿಪನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪ್ರವೇಶಿಸಬೇಕಾದರೆ ಮೊದಲಿಗೆ ದನಕರುಗಳು ಮತ್ತು ಮೇಕೆಗಳ ದರ್ಶನ ಬಳಿಕ ವಿದ್ಯಾರ್ಥಿಗಳು ಒಳ ಪ್ರವೇಶ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹೌದು, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಇನ್ಫೋಸಿಸ್‌ ಸಂಸ್ಥಾಪಕ ಮುಖ್ಯಸ್ಥ ನಾರಾಯಣಮೂರ್ತಿ ಅವರ ತಾಯಿ ಎನ್‌.ವಿ.ಪದ್ಮಾವತಮ್ಮ ಅವರ ತವರೂರು ನಡಿಪಿನಾಯಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 8 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಶಾಲೆಯ ಪರಿಸರ ಹಾಳು: ನಡಿಪನಾಯಕನಹಳ್ಳಿ ಗ್ರಾಮದ ಸುತ್ತಮುತ್ತ ಖಾಸಗಿ ಶಾಲೆಗಳು ಅಧಿಕವಾಗಿದ್ದರಿಂದ ಸರ್ಕಾರಿ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ 8ಕ್ಕೆ ದಾಟಿಲ್ಲ. ಇಲ್ಲಿ ಒಂದರಿಂದ ಐದನೇ ತರಗತಿವರೆಗೆ ಶಾಲೆ ನಡೆಯುತ್ತಿದೆಯಾದರೂ ಒಂದನೇ ತರಗತಿಗೆ ಮಕ್ಕಳಿಲ್ಲದೆ 2,3,4 ಮತ್ತು ಐದನೆ ತರಗತಿಯ ಮಕ್ಕಳಿಗೆ ತರಗತಿ ನಡೆಯುತ್ತಿದ್ದು, ಶಾಲೆಗೆ ಪ್ರವೇಶಕ್ಕೆ ಮೊದಲೇ ದನಕರುಗಳು ಮತ್ತು ಕುರಿ-ಮೇಕೆಗಳಿಗೆ ದರ್ಶಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಶಾಲೆಯ ಕಾಂಪೌಂಡ್‌ಗೆ ಎಮ್ಮೆ-ಕುರಿ-ಮೇಕೆಗಳು ಕಟ್ಟಿದ್ದರಿಂದ ಶಾಲೆಯ ಪರಿಸರ ಹಾಳಾಗಿದೆ.

ಗ್ರಾಮಸ್ಥರು ಕೇಳುತ್ತಿಲ್ಲ: ಸರ್ಕಾರಿ ಶಾಲೆಯ ಕಾಂಪೌಂಡ್‌ಗೆ ದನಕರುಗಳು ಮತ್ತು ಮೇಕೆಗಳನ್ನು ಕಟ್ಟಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯಿನಿ ಅವರನ್ನು ಪ್ರಶ್ನಿಸಿದಾಗ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಮುಖ್ಯ ಶಿಕ್ಷಕರು ಶಾಲೆಯ ಸುತ್ತಮುತ್ತ ಹಸುಗಳನ್ನು ಕಟ್ಟಬಾರದು ಎಂದು ಮನವಿ ಮಾಡಿದರೂ ಗ್ರಾಮಸ್ಥರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದರಿಂದ ಏಕ ಮುಖ್ಯೋಪಾಧ್ಯಾಯಾನಿಯಾಗಿ ಸೇವೆ ಸಲ್ಲಿಸುತ್ತಿರುವವರು ಮಾತ್ರ ಮೌನವಾಗಿದ್ದಾರೆ. ಇದರಿಂದ ಶಾಲೆಯ ಕಾಂಪೌಂಡ್‌ ಕ್ಯಾಟಲ್‌ ಶೆಡ್‌ ಆಗಿ ಪರಿವರ್ತನೆಯಾಗಿದೆ.

ನೀರು ಶುದ್ಧೀಕರಣ ಘಟಕಕ್ಕೆ ಬ್ರೇಕ್‌: ಸರ್ಕಾರಿ ಶಾಲೆಯ ಆವರಣದಲ್ಲಿ ಶಿಥಿಲಗೊಂಡಿರುವಕೊಠಡಿಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೆಲಸಮಗೊಳಿಸಿ ಮರು ನಿರ್ಮಾಣ ಮಾಡಲು ಆಸಕ್ತಿ ವಹಿಸದ ಗ್ರಾಮಸ್ಥರು ಶಾಲಾವರಣದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.

Advertisement

ಕೊನೆ ಘಳಿಗೆಯಲ್ಲಿ ಘಟಕವನ್ನು ಶಾಲೆಯ ಹೊರ ಭಾಗದಲ್ಲಿ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಶಿಥಿಲಗೊಂಡಿರುವ ಕೊಠಡಿಗಳು ನೆಲಸಮಗೊಳಿಸಿದರೆ ಕೆಲವರು ಸಮುದಾಯ ಭವನವನ್ನು ನಿರ್ಮಿಸಬಹುದೆಂಬ ಅನುಮಾನ ಮೂಡಿದೆ. ಇದರಿಂದ ಶಾಲಾವರಣದಲ್ಲಿಶಿಥಿಲಗೊಂಡಿರುವ ಕೊಠಡಿಗಳ ಕುರಿತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಶಿಕ್ಷಕರು ಹಿಂಜರಿದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕೊಠಡಿಗಳು ಕುಸಿಯುವ ಭೀತಿ : ಶಾಲೆಯಲ್ಲಿ ಈ ಹಿಂದೆ ನಿರ್ಮಿಸಿರುವ ಕೊಠಡಿಗಳು ಶಿಥಿಲಗೊಂಡಿದ್ದು, ಇಂದು ಅಥವಾ ನಾಳೆ ಕುಸಿದು ಬೀಳುವ ಅಂಚಿಗೆ ತಲುಪಿವೆ. ಅಡುಗೆ ಮಾಡುವ ಕೊಠಡಿ ಸಹ ಶಿಥಿಲವಾಗಿದೆ. ನಾಗಮಂಗಲ ಗ್ರಾಮ ಪಂಚಾಯಿತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೂತನ ಅಡುಗೆ ಕೊಠಡಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.ಆದರೆ ಕಾಮಗಾರಿ ನಡೆಸದೆ ಶಾಲಾ ಕೊಠಡಿಯನ್ನು ಅಡುಗೆ ಕೊಠಡಿಯಾಗಿ ಪರಿವರ್ತನೆಗೊಂಡಿದೆ. ಶಾಲಾ ಕೊಠಡಿಗಳು ಮತ್ತು ಅಡುಗೆ ಕೊಠಡಿ ಅಪಾಯದ ಅಂಚಿಗೆ ತಲುಪಿದರೂ ಸಹ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಶಿಥಿಲವಾಗಿರುವ ಕೊಠಡಿಗಳನ್ನು ನೆಲಸಮಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆಯೇ? ಎಂಬ ಅನುಮಾನ ಮೂಡಿದೆ

ಕಾಂಪೌಂಡ್‌ಗೆ ದನಕರು, ಮೇಕೆ: ಗಂಭೀರ ಪರಿಗಣನೆ:   ಶಿಡ್ಲಘಟ್ಟ ತಾಲೂಕಿನ ನಡಿಪನಾಯಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಚಟುವಟಿಕೆಗಳು ಹೇಗಿದೆ ಎಂಬುದುರ ಕುರಿತು ಭಕ್ತರಹಳ್ಳಿ ಸಮೂಹ ಸಿಆರ್‌ಪಿ ಅವರಿಗೆ ಸೂಚನೆ ನೀಡಿದ್ದೇನೆ. ಶಾಲೆಯ ಸ್ಥಿತಿಗತಿ ವಿದ್ಯಾರ್ಥಿಗಳು ಮತ್ತು ಪೋಷಕರ ಸ್ಪಂದನೆ ಕುರಿತು ಮಾಹಿತಿ ಸಂಗ್ರಹಿಸಿ ಶಾಲೆಯ ಸುತ್ತಮುತ್ತ ದನಕರುಗಳನ್ನು ಕಟ್ಟಿತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಶಿಡ್ಲಘಟ್ಟ ತಾಲೂಕು ಬಿಇಒ ಆರ್‌.ಶ್ರೀನಿವಾಸ್‌ ತಿಳಿಸಿದ್ದಾರೆ.

ಗ್ರಾಮಸ್ಥರು ಸಹ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಲು ಸಹಕರಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಲೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಬೇಕೆಂದು ಪತ್ರ ವ್ಯವಹಾರ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಶಾಲಾಭಿವೃದ್ಧಿಗಾಗಿ ಮುಖ್ಯ ಶಿಕ್ಷಕರು ಸಮಿತಿ ಸದಸ್ಯರಿಗೆ ಮಾಹಿತಿ ಕಳುಹಿಸುತ್ತಾರೆ. ಆದರೆ, ಸದಸ್ಯರು ಸಕಾಲದಲ್ಲಿ ಬರುವುದಿಲ್ಲ. ಹೀಗಾಗಿ ಸಭೆ ಮುಂದೂಡಬೇಕಿದೆ. ಶಾಲೆಗೆ ಹೊಂದುಕೊಂಡಂತೆ ದನಕರು ಕಟ್ಟಿರುವ ಕುರಿತು ಮುಖ್ಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸುತ್ತೇನೆ.ಗಾಯತ್ರಿ, ಎಸ್‌ಡಿಎಂಸಿ ಅಧ್ಯಕ್ಷರು

 

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next