ನರಗುಂದ: ಲಕ್ಷಾಂತರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿದ, ಸುದೀರ್ಘ 155 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯ ಕಟ್ಟಡ ಪ್ರವಾಹದ ಹೊಡೆತಕ್ಕೆ ಸಿಲುಕಿ ವಿನಾಶದ ಅಂಚಿಗೆ ತಲುಪಿದ್ದು, ತಗಡಿನ ತಾತ್ಕಾಲಿಕ ಶೆಡ್‌ನಲ್ಲೇ ಅಕ್ಷರ ದಾಸೋಹ ಮುಂದುವರಿಸಿದೆ.
1864ರಲ್ಲೇ ನಿರ್ಮಾಣಗೊಂಡ ತಾಲೂಕಿನ ಕೊಣ್ಣೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ 14 ಕೊಠಡಿ ಹೊಂದಿದ್ದು, 7 ಕೊಠಡಿಗಳನ್ನು ಬ್ರಿಟಿಷ್ ಕಾಲದಲ್ಲಿಯೇ ನಿರ್ಮಿಸಲಾಗಿದೆ. ಉಳಿದ 7 ಕೊಠಡಿಗಳನ್ನು ದಶಕಗಳ ಹಿಂದೆ ನಿರ್ಮಿಸಲಾಗಿದೆ. ವಿಚಿತ್ರವೆಂದರೆ ನೂತನವಾಗಿ ನಿರ್ಮಿಸಿದ 7 ಕೊಠಡಿಗಳು ಬಹಳ ದಿನಗಳ ಹಿಂದೆಯೇ ಬಳಕೆಗೆ ಅಯೋಗ್ಯವಾಗಿದ್ದರೆ, ಹಳೆ ಕೊಠಡಿಗಳು ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಜಲಾವೃತಗೊಂಡ ಸಂದರ್ಭದಲ್ಲಿ ಹಾನಿಗೊಳಗಾಗಿವೆ.
ತಾತ್ಕಾಲಿಕ ಶೆಡ್‌ಗೆ ಸ್ಥಳಾಂತರ: ಆಗಸ್ಟ್‌ನಲ್ಲಿ ಕೊಣ್ಣೂರು ಸಂಪೂರ್ಣ ಜಲಾವೃತಗೊಂಡ ಬಳಿಕ ಒಂದೂವರೆ ಶತಮಾನದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಲ್ಲಿನ ಕೆಜಿಎಸ್ ಶಾಲೆಯಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿ ಈಗ ತಾತ್ಕಾಲಿಕ ಶೆಡ್‌ಗೆ ಸ್ಥಳಾಂತರಗೊಂಡಿದೆ. 139 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾತ್ಕಾಲಿಕ 7 ಶೆಡ್‌ಗಳಲ್ಲಿ ಬಿಸಿಯೂಟ ತಯಾರಿಕೆಗೆ ಹೊರತುಪಡಿಸಿ ಉಳಿದ 6 ಶೆಡ್‌ಗಳಲ್ಲಿ ವರ್ಗಗಳು ನಡೆಯುತ್ತಿವೆ.
ನೆಲಸಮಕ್ಕೆ ಸಜ್ಜು: ಶಾಲೆ ಕೊಠಡಿಗಳು ಬಳಕೆಗೆ ಸಂಪೂರ್ಣ ಅಯೋಗ್ಯವಾಗಿದ್ದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಯ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸಿ ಮರು ನಿರ್ಮಾಣಕ್ಕೆ ಮುಂದಾಗಿದೆ. ನರಗುಂದ ಕೇಂದ್ರ ಸ್ಥಾನದಿಂದ 20 ಕಿಮೀ ದೂರದ ಕೊಣ್ಣೂರಲ್ಲಿ ಹೆದ್ದಾರಿಗೆ ಹೊಂದಿಕೊಂಡ ಮಾದರಿ ಶಾಲೆ ಮಲಪ್ರಭಾ ನದಿ ಪ್ರವಾಹ ಉಕ್ಕಿ ಹರಿದರೆ ಮೊದಲಿಗೆ ಚುಂಬಿಸುವುದೇ ಈ ಶಾಲೆ ಕಟ್ಟಡ. ನಿರಂತರ ಪ್ರವಾಹದ ಒಡಲಾಳಿಗೆ ನಲುಗಿದ ಒಂದೂವರೆ ಶತಮಾನ ಹಿನ್ನೆಲೆಯ ಈ ಶಾಲೆ ಕಟ್ಟಡ ನೆಲಸಮಗೊಳಿಸುವ ಸ್ಥಿತಿಗೆ ಬಂದಿರುವುದು ವಿಪರ್ಯಾಸ.
ಸರಕಾರಿ ಮಾದರಿ ಶಾಲೆ ನೆಲಸಮಗೊಳಿಸಿ ಮರು ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಸೂಚಿಸಿದ್ದಾರೆ. ಶಾಲೆ ಕಟ್ಟಡಗಳ ನೆಲಸಮಕ್ಕೆ ಶೀಘ್ರ ಚಾಲನೆ ನೀಡಲಾಗುವುದು. –
ಎನ್.ಎಚ್.ನಾಗೂರ, ಜಿಲ್ಲಾ ಉಪ ನಿರ್ದೇಶಕರು. ಸಾರ್ವಜನಿಕ ಶಿಕ್ಷಣ ಇಲಾಖೆ.
-ಸಿದ್ಧಲಿಂಗಯ್ಯ ಮಣ್ಣೂರಮಠ