ಬೆಂಗಳೂರು: ಆಟೋ ಚಾಲಕನ ಮನೆಗೆ ನುಗ್ಗಿ ಮಗನ ಶಾಲಾ ಶುಲ್ಕಕ್ಕೆಂದು ಇಟ್ಟಿದ್ದ ಸಾವಿರಾರು ರೂ. ನಗದು, ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾಮಾಕ್ಷಿಪಾಳ್ಯದ ತೋಟದ ರಸ್ತೆ ಸಣ್ಣಕ್ಕಿಬೈಲು ನಿವಾಸಿ ಪ್ರೀತನ್ ಅಲಿಯಾಸ್ ಅಪ್ಪು(21), ರಜತ್(22) ಮತ್ತು ವಿಜಯ್ ಕುಮಾರ್ (19) ಬಂಧಿತರು. ತಲೆಮರೆಸಿಕೊಂಡಿರುವ ಟೆಕ್ಕಿ ಪ್ರವೀಣ್, ಅಫ್ತಾಭ್, ಭರತ್, ಮನೋಜ್ ಎಂಬವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಬಂಧಿತ ಆರೋಪಿಗಳಿಂದ ಸಾವಿರಾರು ರೂ. ನಗದು, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಮೇ 26ರಂದು ಕಾಮಾಕ್ಷಿಪಾಳ್ಯ ನಿವಾಸಿ ಆಟೋ ಚಾಲಕ ನಾಗೇಶ್ ಎಂಬವರ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಆರೋಪಿಗಳ ಪೈಕಿ ಪ್ರೀತನ್ ಅಲಿಯಾಸ್ ಅಪ್ಪು ನಾಗೇಶ್ ಪರಿಚಯಸ್ಥನಾಗಿದ್ದು, ಅವರ ಮನೆ ಮೇಲಿನ ಮನೆಯಲ್ಲಿ ವಾಸವಾಗಿದ್ದಾನೆ. ನಾಗೇಶ್ ಪತ್ನಿ ಇಲ್ಲದಾಗ ಪ್ರೀತನ್ ಇಲ್ಲಿಯೇ ಮಲಗುತ್ತಿದ್ದ. ಆಗ ಮನೆಯಲ್ಲಿರುವ ಚಿನ್ನಾಭರಣ ಹಾಗೂ 2ನೇ ತರಗತಿ ಓದುತ್ತಿರುವ ಮಗನ ಶಾಲಾ ಶುಲ್ಕ ಪಾವತಿಗಾಗಿ 40 ಸಾವಿರ ರೂ. ತಂದಿದ್ದೇನೆ ಎಂದು ಹೇಳಿಕೊಂಡಿದ್ದರು. ಈ ವಿಚಾರ ತಿಳಿದ ಪ್ರೀತನ್, ನಗರದ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಟೆಕ್ಕಿ ಆಗಿರುವ ಪ್ರವೀಣ್‌ಗೆ ಹೇಳಿಕೊಂಡಿದ್ದ. ಬಳಿಕ ಪ್ರವೀಣ್, ಇತರೆ ಆರೋಪಿಗಳ ಜತೆ ಹಂಚಿಕೊಂಡು ಮೇ 25ರಂದು ರಾತ್ರಿ ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಈ ವೇಳೆಯೇ ನಾಗೇಶ್ ಮನೆಯ ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.
ಸಂಚು ರೂಪಿಸಿ ದರೋಡೆ: ಮತ್ತೂಂದೆಡೆ ನಾಗೇಶ್ ಪತ್ನಿ ಮತ್ತು ಮಗ ಊರಿಗೆ ತೆರಳಿದ ದಿನವೇ ಕಳವು ಮಾಡಬೇಕು. ಆಗ ಮಾತ್ರ ಹಣ ಸಿಗುತ್ತದೆ ಎಂದು ನಿರ್ಧರಿಸಿದ್ದ ಆರೋಪಿಗಳು, ಮೇ 26ರಂದು ನಾಗೇಶ್ ಪತ್ನಿ ಊರಿಗೆ ತೆರಳಿರುವ ವಿಚಾರ ಪ್ರೀತನ್‌ನಿಂದ ತಿಳಿದುಕೊಂಡಿದ್ದರು. ಅದೇ ದಿನ ಪ್ರೀತನ್, ತಾನು ನಾಗೇಶ್ ಮನೆಯಲ್ಲಿ ಹೋಗಿ ಮಲಗುತ್ತೇನೆ. ನೀವುಗಳು ಬಂದು ದಾಳಿ ನಡೆಸಿ, ದರೋಡೆ ಮಾಡಿ ಎಂದು ಸಲಹೆ ಕೊಟ್ಟಿದ್ದ. ಇತರೆ ಎಲ್ಲ ಆರೋಪಿಗಳು ಮುಸುಕುಧಾರಿಗಳಾಗಿ ಬಂದಿದ್ದು, ಮೂವರು ನಾಗೇಶ್ ಮನೆಗೆ ನುಗ್ಗಿದ್ದಾರೆ. ಇತರೆ ಮೂವರು ಆರೋಪಿಗಳು ರಸ್ತೆಯಲ್ಲಿ ನಿಂತು ಯಾರಾದರೂ ಬರುತ್ತಿದ್ದಾರೆಯೇ ಎಂದು ಗಮನಿಸಿದ ಮಾಹಿತಿ ನೀಡುತ್ತಿದ್ದರು. ಮನೆಯೊಳಗೆ ನುಗ್ಗಿದ್ದ ಆರೋಪಿಗಳು ನಾಗೇಶ್ ಮತ್ತು ಪ್ರೀತನ್‌ಗೆ ಮಾರಕಾಸ್ತ್ರ ತೋರಿಸಿ 30 ಗ್ರಾಂ ಚಿನ್ನಾಭರಣ, 35 ಸಾವಿರ ರೂ. ನಗದು ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ದೂರು ನೀಡುವುದಿಲ್ಲ ಎಂದು ಕೃತ್ಯ: ದೂರುದಾರ ನಾಗೇಶ್ ಬಗ್ಗೆ ತಿಳಿದುಕೊಂಡಿದ್ದ ಪ್ರೀತನ್, ಒಂದು ವೇಳೆ ದರೋಡೆ, ಕಳ್ಳತನವಾದರೆ ಪೊಲೀಸ್ ಠಾಣೆಗೆ ದೂರು ನೀಡುವುದಿಲ್ಲ ಎಂದು ಭಾವಿಸಿದ್ದ. ಅಲ್ಲದೆ, ಮಾತನಾಡುವಾಗಲೂ ಪೊಲೀಸ್ ಸಹವಾಸ ಬೇಡವೆಂದು ನಾಗೇಶ್ ಹೇಳಿಕೊಂಡಿದ್ದರಂತೆ. ಅದರಂತೆ ಆರೋಪಿಗಳು ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಐಷಾರಾಮಿ ಜೀವನಕ್ಕಾಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.
ಇನ್‌ಸ್ಪೆಕ್ಟರ್ ಲೋಹಿತ್ ನೇತೃತ್ವದಲ್ಲಿ ಪಿಎಸ್‌ಐ ಮೂರ್ತಿಧರ್ಮರಾಜ್, ಎಎಸ್‌ಐ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.