Advertisement
ಸ್ಥಳೀಯ ಸಂಸ್ಥೆಗಳ ಮೂಲಕ ನಡೆಸಿದ ಮನೆ ಮನೆ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 34,411 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ. ಇವರಲ್ಲಿ 13,081 ಮಕ್ಕಳು ಶಾಲೆಗೆ ನೋಂದಣಿ ಮಾಡಿಲ್ಲ. 21,330 ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ. ಈ ಪೈಕಿ 19,336 ಮಕ್ಕಳು 6ರಿಂದ 14 ವರ್ಷದವರಾಗಿದ್ದರೆ 15,075 ಮಕ್ಕಳು 14ರಿಂದ 16 ವರ್ಷದವರು. ಮಕ್ಕಳು ಶಾಲೆಯಿಂದ ಹೊರ ಗುಳಿಯಲು ವೈದ್ಯಕೀಯ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
Related Articles
Advertisement
ಹೀಗಿದೆ ಕಾರ್ಯಯೋಜನೆ :
ಸ್ಥಳೀಯ ಸಂಸ್ಥೆಗಳು ನಡೆಸಿದ ಮಕ್ಕಳ ಸಮೀಕ್ಷಾ ಮಾಹಿತಿಯನ್ನು ಜಿಲ್ಲಾವಾರು ಉಪ ನಿರ್ದೇಶಕರಿಗೆ ಕಳುಹಿಸಬೇಕು. ಉಪನಿರ್ದೇಶಕರು ಅದನ್ನು ಬ್ಲಾಕ್‌ವಾರು ವಿಂಗಡಿಸಿ ತಾಲೂಕುಗಳಿಗೆ ಕಳುಹಿಸಿಕೊಡ ಬೇಕು. ಜಿಲ್ಲೆಯಿಂದ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಾಜರಾತಿ ಅಧಿಕಾರಿಗಳ ಸಭೆ ಕರೆದು ಸಭೆಯಲ್ಲಿ ಮಕ್ಕಳ ಪಟ್ಟಿ ಪರಿಶೀಲಿಸಿ ಕ್ಲಸ್ಟರ್‌ವಾರು ವಿಂಗಡಿಸಿ ಸಿಆರ್‌ಪಿಗಳಿಗೆ ನೀಡಬೇಕು.
ಈ ಪಟ್ಟಿಯನ್ನು ಸಿಆರ್‌ಪಿಗಳು ಮತ್ತು ಹಾಜರಾತಿ ಅಧಿಕಾರಿಗಳು ಮತ್ತೂಮ್ಮೆ ಪರಿಶೀಲಿಸಿ, ಮುಖ್ಯ ಶಿಕ್ಷಕರ ಸಭೆ ಕರೆದು ಪಟ್ಟಿಯಲ್ಲಿರುವ ಮಕ್ಕಳು ಈಗಾಗಲೇ ಶಾಲೆಯಲ್ಲಿ ದಾಖಲಾಗಿರುವ ಬಗ್ಗೆ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು. ದಾಖಲಾದ ಮಕ್ಕಳ ಮಾಹಿತಿ (ಮಗುವಿನ ಹೆಸರು, ಶಾಲೆ ಹೆಸರು, ಎಸ್‌ಟಿಎಸ್ ಸಂಖ್ಯೆ) ಸಂಗ್ರಹಿಸಬೇಕೆಂದು ಶಿಕ್ಷಣ ಇಲಾಖೆ ಆಯುಕ್ತರು ಕಾರ್ಯ ಸೂಚಿಯಲ್ಲಿ ನಿರ್ದೇಶನ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಟ್ಟಿ ಯಲ್ಲಿರುವ ಮಕ್ಕಳು ತಾಲೂಕಿನ ಹೊರಗೆ ಹೋಗಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಮಕ್ಕಳು ದಾಖಲಾಗಿರುವುದನ್ನು ಖಚಿತಪಡಿಸಿಕೊಂಡು ಮಗು ಮತ್ತು ಶಾಲೆಯ ಮಾಹಿತಿ ಪಡೆದು ಕೊಳ್ಳಬೇಕು. ಮಕ್ಕಳು ಹೊರ ಜಿಲ್ಲೆಗೆ ತೆರಳಿದ್ದರೆ ಅಂಥವರ ಪಟ್ಟಿ ಮಾಡಿ ಉಪನಿರ್ದೇಶಕರು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರಿಂದ ವಿವರ ಪಡೆದು ಮಕ್ಕಳು ಹಾಜರಾಗಿರುವ ಬಗ್ಗೆ ಮಾಹಿತಿ ಪಡೆಯಬೇಕು. ಇದೇ ರೀತಿ ಶಾಲೆಗೆ ದಾಖಲಾಗದ ಎಲ್ಲ ಮಕ್ಕಳನ್ನು ದಾಖಲಾತಿ ಮಾಡಿ ನಿರಂತರ ಹಾಜರಾಗುವಂತೆ ಮೇಲ್ವಿ ಚಾರಣೆ ನಡೆಸಬೇಕು. ಮಕ್ಕಳು ಹೊರ ರಾಜ್ಯಗಳಿಗೆ ಹೋದಲ್ಲಿ ಆ ಮಕ್ಕಳ ಬಗ್ಗೆ ಆಂಗ್ಲ ಭಾಷೆಯಲ್ಲಿ ಆಯಾ ರಾಜ್ಯ ಯೋಜನ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡಬೇಕು.
ಕೊನೆಯ ಅಸ್ತ್ರ ಪೊಲೀಸ್ :
ಅಧಿಕಾರಿಗಳು ಮಗುವಿನ ಗೈರು ಹಾಜರಿಗೆ ನಿಖರ ಕಾರಣ ಪತ್ತೆ ಹಚ್ಚಿ ಹೆತ್ತವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಆದರೂ ಮಗು ಶಾಲೆಗೆ ಹಾಜರಾಗದಿದ್ದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ದೊಂದಿಗೆ ಡಯಟ್ ಮತ್ತು ತಜ್ಞರಿಂದ ಮಗುವಿಗೆ ಕೌನ್ಸೆಲಿಂಗ್ ಮಾಡಬೇಕು. ಅದೂ ವಿಫಲವಾದರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವಂತೆ ಹೆತ್ತವ ರಿಗೆ ಆದೇಶ ಹೊರಡಿಸಬೇಕು. ಆಗಲೂ ಹಾಜರಾಗದಿದ್ದರೆ ಬಾಲ ನ್ಯಾಯ ಕಾಯ್ದೆ-2015ರ ಪ್ರಕಾರ ಪೊಲೀಸರ ಸಹಕಾರ ಪಡೆದು ಮಗುವಿನೊಂದಿಗೆ ಹೆತ್ತವರನ್ನು ಸಮಿತಿ ಎದುರು ಹಾಜರಾಗಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಆರ್‌ಡಿಪಿಆರ್, ಪೊಲೀಸ್ ಸಹಿತವಾಗಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಮೀಕ್ಷೆ ನಡೆಯುತ್ತಿದೆ. ಇಂತಹ ಮಕ್ಕಳಿಗೆ ಮೊದಲು ವಸತಿ ಸಹಿತ ತರಬೇತಿ ನೀಡಿ, ಅನಂತರ ಅವರನ್ನು ಶಾಲೆಗೆ ದಾಖಲು ಮಾಡಲಾಗುತ್ತದೆ. ಇದು ಶಿಕ್ಷಣ ಇಲಾಖೆಯ ನಿರಂತರ ಪ್ರಕ್ರಿಯೆ. – ಎಂ. ಪ್ರಸನ್ನ ಕುಮಾರ್, ನಿರ್ದೇಶಕರು, ಶಿಕ್ಷಣ ಇಲಾಖೆ
- ಎಚ್.ಕೆ. ನಟರಾಜ