Advertisement

ಮಾಯವಾದಂತಿದೆ.. ಸಂಸ್ಕಾರವೆಂಬ ಸಿರಿವಂತಿಕೆ

04:36 PM Jun 21, 2021 | Team Udayavani |

ಜಂತೂನಾಂ ನರಜನ್ಮಮುತ್ತಮಂ ಜೀವಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ ಜನ್ಮ. ವಿಕಸಿತ ಪ್ರಾಣಿಯ ಅಂತಿಮ ಹಂತವೇ ಮಾನವ ಜನ್ಮ. ಅದು ಪರಿಪೂರ್ಣವಾಗಬೇಕಾದರೆ ಸುನಡತೆ, ಸುಸಂಸ್ಕಾರ ಅತ್ಯಗತ್ಯ. ಮನುಷ್ಯರ ಸರ್ವತೋಮುಖ ಬೆಳವಣಿಗೆಗೆ ಸಂಸ್ಕಾರವು ಅತ್ಯಗತ್ಯ. ವಿಮರ್ಶಾತ್ಮಕ ವರ್ತನೆ ಮನುಷ್ಯನ ಜ್ಞಾನವನ್ನು ಸೂಚಿಸಿದರೆ, ಸಂಸ್ಕಾರವು ಮನೆತನವನ್ನು ಸೂಚಿಸುತ್ತದೆ.

Advertisement

ಜನ್ಮನಾ ಜಾಯತೆ ಪ್ರಾಣಿಃ ಕರ್ಮಣಾ ಮನುಷ್ಯೊಚ್ಯತೆ ಜನ್ಮದಿಂದ ಎಲ್ಲರೂ ಪ್ರಾಣಿಗಳು, ಆದರೆ ಅವರ ಕಾರ್ಯ ಚಟುವಟಿಕೆಗಳಿಂದ ಮನುಷ್ಯನೆಂದು ಗುರುತಿಸಿಕೊಳ್ಳುತ್ತಾನೆ. ಸಂಸ್ಕಾರ ಪೂರ್ವಕ  ಸನ್ನಡತೆಯ ಜನ್ಮಭೂಮಿ ನಮ್ಮ ಭಾರತ. ಪುರಾತನವಾದ, ಮಹೋನ್ನತವಾದ ತತ್ವ- ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿ ನಮ್ಮದು.  ಕಾಂಚಾಣೇನ ಕಾರ್ಯಸಿದ್ಧಿಃ  ಎನ್ನುವ ಈ ಕಾಲದಲ್ಲಿ ಕೇವಲ ವೃತ್ತಿಪರ ಶಿಕ್ಷಣದ ಪಥದಲ್ಲಿ ನಮ್ಮ ಆದರ್ಶ ಪರಂಪರೆಯ ಉತ್ತಮ ಮೌಲ್ಯಗಳು ನಶಿಸುತ್ತಿವೆ.

ಒಂದು ವಿಪರ್ಯಾಸ ಏನು ಗೊತ್ತಾ? ವಿದೇಶಿಗರು ನಮ್ಮ ಸಂಸ್ಕೃತಿ, ವೇದಗಳ ಆಚರಣೆಯ ಕಡೆಗೆ ಒಲವು ತೋರಿಸುತ್ತಿದ್ದಾರೆ. ಆದರೆ ನಮ್ಮವರು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಮೊದಲು ವೇದಶಾಸ್ತ್ರಗಳ ಅಧ್ಯಯನಕ್ಕಾಗಿ ಚಿಕ್ಕಮಕ್ಕಳನ್ನು ಗುರುಕುಲಕ್ಕೆ ಕಳುಹಿಸುತ್ತಿದ್ದರು. ಆದರೆ ಈಗ ನಮಗೆ ಅಂತಹ ಗುರುಕುಲಗಳು ಕಾಣಸಿಗುವುದು ವಿರಳ. ಎಲ್ಲಿ ಹೋದವು ಗುರುಕುಲಗಳು? ಇಂದು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಬದಲು ವೃತ್ತಿಪರ ಶಿಕ್ಷಣ ನೀಡುತ್ತಿರುವುದರಿಂದ ಶಿಕ್ಷಣವೇ ವ್ಯಾಪಾರೋದ್ಯಮವಾಗಿ ಬದಲಾಗಿದೆ.

ಸ್ನಾತಕೋತ್ತರ ಪದವಿ ಪಡೆದರೂ ಗುರುಗಳನ್ನು ಕಂಡೊಡನೆ ತೋರಿಸುವ ಭಯ-ಭಕ್ತಿ, ಕೈಯಲ್ಲಿ ಲಕ್ಷಕೋಟಿ ಇದ್ದರೂ ಹಿರಿಯರನ್ನು ಕಂಡೊಡನೆ ಕಾಲಿಗೆ ಬೀಳುವುದು, ಹಸಿದು ಬಂದವರಿಗೆ ಅನ್ನವನ್ನು ನೀಡುವುದು, ಯಜಮಾನಿಕೆ ಕೈಯಲ್ಲಿದ್ದರೂ ಚಿಕ್ಕಮಕ್ಕಳಿಗೆ ತೋರಿಸುವ ಪ್ರೀತಿ, ಕನಿಕರ, ಕಳಕಳಿ, ನಮ್ಮ ನಡವಳಿಕೆಯಲ್ಲಿರುವ ನಯ-ವಿನಯ, ಉದಾರತೆ ಇವೆಲ್ಲ ಎಲ್ಲಿ ಹೋದವು? ಇವೆಲ್ಲಾ ಮಾಯವಾಗುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಈಗಿನ ಜನರು ತಮ್ಮ ಸಣ್ಣತನವನ್ನು ಪ್ರದರ್ಶನಕ್ಕಿಡುತ್ತಿದ್ದಾರೆ. ಹಿರಿಯರನ್ನು ಬಹಿರಂಗವಾಗಿ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಕಂಡರೆ ಸಂಸ್ಕಾರವೇ ಮಾಯವಾದಂತೆ ಭಾಸವಾಗುತ್ತಿದೆ.

ಸಂಸ್ಕಾರ ಎಂದಕೂಡಲೇ ಒಂದು ಕಥೆಯು ನೆನಪಿಗೆ ಬರುತ್ತದೆ. ಒಂದು ಊರಿನಲ್ಲಿ ಮೂವರು ಮಕ್ಕಳು ಶಾಲೆಯಿಂದ ಮನೆಗೆ ಬರುತ್ತಿದ್ದರು. ಅದೇ ಸಮಯದಲ್ಲಿ ಮೂವರು ಮಹಿಳೆಯರು ನೀರು ತುಂಬಿಸುತ್ತಿದ್ದರು. ಮೊದಲನೆಯ ಮಹಿಳೆ ಉಳಿದಿಬ್ಬರಲ್ಲಿ ತನ್ನ ಮಗನನ್ನು ತೋರಿಸಿ  ತನ್ನ ಮಗ ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದಾನೆ ಎಂದು ಹೇಳುತ್ತಾಳೆ. ಎರಡನೆಯವಳು ತನ್ನ ಮಗ ಸಿಬಿಎಸ್‌ಇಯಲ್ಲಿ ಓದುತ್ತಿದ್ದಾನೆ ಎಂದು ಹೇಳುತ್ತಾಳೆ. ಆಗ ಒಬ್ಬ ಹುಡುಗ ತಾಯಿಯ ಬಳಿ ಇರುವ ನೀರಿನ ಕೊಡವನ್ನು ತೆಗೆದುಕೊಂಡು ಬಾ ಅಮ್ಮಾ ಮನೆಗೆ ಹೋಗೋಣ ಎಂದು ಹೇಳುತ್ತಾನೆ. ಆಗ ಮೂರನೇ ಮಹಿಳೆ ಅತ್ಯಾನಂದದಿಂದ ಇವನೇ ನನ್ನ ಮಗ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ ಎಂದು ತಲೆಯೆತ್ತಿ ಹೇಳುತ್ತಾಳೆ. ಈ ಕಥೆಯ ನೀತಿ ಏನೆಂದರೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಸಂಸ್ಕಾರವನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಅದು ಮಡಕೆ ಯಾಗುತ್ತದೆ. ಶಿಲ್ಪಿಯ ಸಂಸ್ಕಾರದಿಂದ ಶಿಲೆಯೂ ಶಂಕರನಾಗುತ್ತಾನೆ.

Advertisement

 

ರಮಾ ಭಟ್‌

ಎಸ್‌ಡಿಎಂ ಕಾಲೇಜು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next