Advertisement

ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ

05:08 PM Jul 22, 2022 | Team Udayavani |

ಸಿರಿಗೆರೆ: ಭರಮಸಾಗರ ಸಮೀಪದ ಇಸಾಮುದ್ರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಬಿಸಿಯೂಟ ಮಾಡಿದ ನೂರಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

Advertisement

ಶಾಲೆಯಲ್ಲಿ ತಯಾರಿಸಿದ್ದ ಅನ್ನ, ಸಾಂಬಾರು ಸೇವಿಸಿದ ಕೆಲ ಹೊತ್ತಿನ ನಂತರ ಮಕ್ಕಳಿಗೆ ತಲೆನೋವು, ಹೊಟ್ಟೆನೋವು ಕಾಣಿಸಿಕೊಂಡಿದೆ. ಹಲವರು ವಾಂತಿ ಮಾಡಿಕೊಂಡಿದ್ದರೆ, ಮತ್ತೆ ಕೆಲವರು ತಲೆಸುತ್ತಿನಿಂದ ಬಳಲಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 149 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದು, ಇಂದು 120ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವನೆ ಮಾಡಿದ್ದಾರೆ. ಇದರಲ್ಲಿ 70ರಿಂದ 80 ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಕೂಡಲೇ ಅವರನ್ನು ಹೋಬಳಿಯ ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಕೆಲವು ಪೋಷಕರು ಭೀತಿಗೆ ಒಳಗಾಗಿ ತಮ್ಮ ಮಕ್ಕಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.

ಕ್ರಿಮಿನಾಶಕಗಳನ್ನು ಬಳಸಿ ಬೆಳೆಯುತ್ತಿರುವ ತರಕಾರಿಗಳನ್ನು ಜಮೀನುಗಳಿಂದ ಕೊಂಡು ತಂದು ಸ್ವಚ್ಚ ಮಾಡದೆ ಅಡಿಗೆ ಮಾಡಿರುವುದು ಈ ಘಟನೆಗೆ ಕಾರಣವೆಂದು ಹೇಳಲಾಗಿದೆ. ಮಕ್ಕಳ ದೂರಿನ ಅನ್ವಯ ಕೆಲ ದಿನಗಳ ಹಿಂದೆ ಪೋಷಕರ ಸಭೆ ಕರೆದಾಗ ಬಿಸಿಯೂಟದಲ್ಲಿ ಹುಳಗಳು ಕಂಡು ಬಂದ ವಿಚಾರವನ್ನು ಪ್ರಸ್ತಾಪಿಸಿದ್ದೆವು. ಆದರೂ ಸಹ ಶಿಕ್ಷಕರು ಯಾವುದೇ ರೀತಿಯ ಮಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಮಕ್ಕಳಿಗೆ ಕುಡಿಯಲು ನೀರಿಲ್ಲ ಎಂದು ಬಿಸಿಯೂಟ ತಯಾರಕರು ಹಾಗೂ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಭರಮಸಾಗರದ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ಚಿಕಿತ್ಸೆಗೆ ಕರೆತರುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ಆತಂಕದಿಂದಲೇ ಬಂದು ತಮ್ಮ ಮಕ್ಕಳ ಆರೋಗ್ಯ ವಿಚಾರಿಸಿದರು. ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆಗೆ ಚರ್ಚಿಸಿ ಪೋಷಕರಿಗೆ ಧೈರ್ಯ ಮೂಡಿಸಿದರು. ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಿಇಒ ಎಚ್‌.ಎಂ. ಬಸವರಾಜಯ್ಯ ಬಿಆರ್‌ಸಿ ಸಂಪತ್‌ ಕುಮಾರ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕುಮಾರಸ್ವಾಮಿ, ಭರಮಸಾಗರ ಪೊಲೀಸ್‌ ನಿರೀಕ್ಷಕ ಟಿ.ಎಸ್‌. ಮಧು, ಜಿಲ್ಲಾ ಆರೋಗ್ಯಾಧಿಕಾರಿ  ಡಾ| ಆರ್‌. ರಂಗನಾಥ್‌, ಅಕ್ಷರ ದಾಸೋಹ ಯೋಜನೆ ಸಹನಿರ್ದೇಶಕ ಹುಲಿಕಟ್ಟಿ ರಾಯ, ತಹಶೀಲ್ದಾರ್‌ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲಿಸಿದರು.

ಕೆಲವು ಮಕ್ಕಳಿಗೆ ಹೊಟ್ಟೆನೋವು ಇರುವುದರಿಂದ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಪೋಷಕರು ಭಯಪಡುವ ಅಗತ್ಯ ಇಲ್ಲ. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. –ಡಾ| ಆರ್‌. ರಂಗನಾಥ್‌, ಜಿಲ್ಲಾ ಆರೋಗ್ಯಾಧಿಕಾರಿ

Advertisement

ಒಂದು ಮಗುವಿಗೆ ಕೆಲವು ದಿನಗಳಿಂದ ಜ್ವರ ಇತ್ತು. ಈ ಮಗು ಊಟದ ನಂತರ ವಾಂತಿ ಮಾಡಿಕೊಂಡಾಗ ಹಲವು ವಿದ್ಯಾರ್ಥಿಗಳು ಹೊಟ್ಟೆ ನೋವು ಎಂದಿದ್ದಾರೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಯಾವ ಮಕ್ಕಳಿಗೂ ಗಂಭೀರ ಸಮಸ್ಯೆ ಉಂಟಾಗಿಲ್ಲ.  -ಎಚ್‌.ಎಂ. ಬಸವರಾಜಯ್ಯ, ಚಿತ್ರದುರ್ಗ ಬಿಇಒ

Advertisement

Udayavani is now on Telegram. Click here to join our channel and stay updated with the latest news.

Next