Advertisement

Education: ಶಾಲೆ ಮಕ್ಕಳು ಅನ್ಯ ಕೆಲಸಕ್ಕಿಲ್ಲ – ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

10:38 PM Aug 11, 2023 | Team Udayavani |

ಬೆಂಗಳೂರು: ಮಕ್ಕಳಿಂದ ಶಾಲೆಗಳಲ್ಲಿ ಬೇರೆ ಕೆಲಸ ಮಾಡಿಸುವಂತಿಲ್ಲ, ಶಾಲಾ ಮಕ್ಕಳನ್ನು ಮ್ಯಾನೇಜ್‌ಮೆಂಟ್‌ ಸೇವೆಗಳಿಗೆ ಬಳಸಿದರೆ ಕಠಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

Advertisement

ಶುಕ್ರವಾರ ಮಾತನಾಡಿದ ಅವರು, ಖಾಸಗಿ ಶಾಲೆಗಳು ಪ್ರತಿವರ್ಷ ಆಗ್ನಿ ಶಾಮಕ ದಳದಿಂದ ಅನುಮತಿ ನವೀಕರಣ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಸಡಿಲಿಸಲು ಸಾಧ್ಯವಿಲ್ಲ. ನಮಗೆ ಮಕ್ಕಳ ಸುರಕ್ಷೆ ಮುಖ್ಯ. ಅದೇ ರೀತಿ ಶಾಲಾ ಮಕ್ಕಳನ್ನು ಮ್ಯಾನೇಜ್‌ಮೆಂಟ್‌ನ ಸೇವೆಗಳಿಗೆ ಬಳಸಿದರೆ ನಾವು ಕಠಿನ ಕ್ರಮ ಕೈಗೊಳ್ಳುತ್ತೇವೆ. ಗಿಡ ನೆಡುವುದು ಮುಂತಾದ ಕಲಿಕೆಯ ಉದ್ದೇಶದ ಕೆಲಸಗಳಿಗೆ ವಿನಾಯಿತಿ ಇದೆ ಎಂದು ತಿಳಿಸಿದರು.

ಇದೇ ವೇಳೆ ಸರಕಾರಿ ಶಾಲೆಗಳ ನೀರು ಮತ್ತು ವಿದ್ಯುತ್‌ ಬಿಲ್‌ ಮೊತ್ತವನ್ನು ಮನ್ನಾ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ಸರಕಾರಿ ಶಾಲೆಗಳ ಬಿಲ್‌ ಅತೀ ಕಡಿಮೆ ಮೊತ್ತದ್ದಾಗಿರುವುದರಿಂದ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿಯೂ ಸಚಿವರು ತಿಳಿಸಿದರು.

ಮುಂದುವರಿದ ಗೊಂದಲ

ರಾಜ್ಯದಲ್ಲಿ ಅನಧಿಕೃತ ಶಾಲೆಗಳನ್ನು ಮುಚ್ಚುವ ಅಥವಾ ಅವುಗಳನ್ನು ಸಕ್ರಮಗೊಳಿಸುವ ಬಗ್ಗೆ ರಾಜ್ಯ ಸರಕಾರದ ಅಸ್ಪಷ್ಟ ನಡವಳಿಕೆಯಿಂದ ಗೊಂದಲ ಮುಂದುವರಿದಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಆಯುಕ್ತರು ಆ. 9ರಂದು ಆದೇಶ ನೀಡಿ ಅನಧಿಕೃತ ಶಾಲೆಗಳನ್ನು ಆ. 14ರೊಳಗೆ ಮುಚ್ಚಬೇಕು ಎಂದು ಆದೇಶ ನೀಡಿದ್ದರು. ಆದರೆ ಖಾಸಗಿ ಶಾಲೆಗಳ ವಿವಿಧ ಒಕ್ಕೂಟಗಳ ಜತೆ ಸಮಗ್ರ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ಬಳಿಕ ಸಚಿವ ಮಧು ಬಂಗಾರಪ್ಪ ಅನಧಿಕೃತ ಶಾಲೆಗಳ ಮುಚ್ಚುವ ಗಡುವನ್ನು ವಿಸ್ತರಿಸುವ ಮತ್ತು ಅನಧಿಕೃತ ಶಾಲೆಗಳ ಸಕ್ರಮಕ್ಕೆ ಇನ್ನೊಂದು ಅವಕಾಶ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

1,695 ಅನಧಿಕೃತ ಶಾಲೆಗಳು

ರಾಜ್ಯವ್ಯಾಪಿ ಒಟ್ಟು 1,695 ಅನಧಿಕೃತ ಶಾಲೆಗಳಿವೆ. ಈ ಶಾಲೆಗಳಿಗೆ ತಮ್ಮ ಲೋಪವನ್ನು ಸರಿಪಡಿಸಲು ಸಮಯ ನೀಡಬೇಕಿದೆ, ಸಮಯ ಅವಕಾಶ ನೀಡಿ ಹಂತ ಹಂತವಾಗಿ ಈ ಶಾಲೆಗಳನ್ನು ಮುಚ್ಚುತ್ತೇವೆ. ಶಾಲೆಗಳನ್ನು ಮುಚ್ಚಿಸುವುದು ದೊಡ್ಡ ವಿಷಯವಲ್ಲ, ಆ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಹಿತ ಕಾಯುವುದು ಸರಕಾರದ ಕರ್ತವ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಜರುಗಿಸುವುದಾಗಿ ಮಧು ಬಂಗಾರಪ್ಪ ತಿಳಿಸಿದರು.

ರಾಜ್ಯಾದ್ಯಂತ 26 ಶಾಲೆಗಳು ನೋಂದಣಿಯನ್ನೇ ಮಾಡಿಲ್ಲ, ಅನುಮತಿ ಪಡೆಯದೆ ಉನ್ನತೀಕರಿಸಿರುವ ಶಾಲೆಗಳು 76, ಇತರ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು 143, ಅನುಮತಿ ಪಡೆಯದೆ ಹೆಚ್ಚುವರಿ ವಿಭಾಗಗಳನ್ನು ಪಡೆದಿರುವ 631, ಅನುಮತಿ ಪಡೆಯದೆ ಸ್ಥಳಾಂತರಿಸಿರುವ 190, ಅನುಮತಿ ಪಡೆಯದೆ ಹಸ್ತಾಂತರ ಮಾಡಿರುವ 15, ಒಂದೇ ಕಟ್ಟಡದಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳು 495 ಇವೆ ಎಂದು ಸಚಿವರು ಮಾಹಿತಿ ನೀಡಿದರು.

ಹೊಸದಾಗಿ ಅನಧಿಕೃತ ಶಾಲೆಗಳು ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗುವಂತೆ ಆಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವರ ಜತೆಗಿನ ನಮ್ಮ ಭೇಟಿ ಸಕಾರಾತ್ಮಕವಾಗಿತ್ತು. ನಮ್ಮ ಹಲವು ಬೇಡಿಕೆಗಳಿಗೆ ಸಚಿವರು ಸ್ಪಂದಿಸಿದ್ದಾರೆ. ಹೆಚ್ಚುವರಿ ತರಗತಿ ಹೊಂದಿರುವ 620 ಶಾಲೆಗಳನ್ನು ಅನಧಿಕೃತ ಶಾಲೆಗಳ ಪಟ್ಟಿಯಿಂದ ಕೈ ಬಿಡಬೇಕು ಎಂದು ನಾವು ಸಚಿವರನ್ನು ಒತ್ತಾಯಿಸಿದ್ದೇವೆ.

 -ಡಿ. ಶಶಿಕುಮಾರ್‌, ಕೆಪಿಎಂಟಿಸಿಸಿಯ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next