Advertisement
ಈ ಶಾಲೆ ಇರುವುದು ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ. ಇಲ್ಲಿ 1ರಿಂದ 8ನೇ ತರಗತಿವರೆಗಿನ ಒಟ್ಟು 124 ವಿದ್ಯಾರ್ಥಿಗಳು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕಟ್ಟಡದಲ್ಲಿ 8 ತರಗತಿ ಕೋಣೆಗಳಿದ್ದು, ಈ ಪೈಕಿ 2 ಕೋಣೆಗಳ ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಶಾಲೆಯ ಆವರಣ ಗೋಡೆ ಸಂಪೂರ್ಣ ಕುಸಿದಿದೆ. ಕೊಠಡಿಯ ಮೇಲೆ ಮರವೊಂದು ವಾಲಿಕೊಂಡಿದೆ.
ಈ ಶಾಲೆಗೆ ಬರುವ ಶಿಕ್ಷಕರೂ ಇಲ್ಲಿರಲು ಹಿಂಜರಿಯುತ್ತಾರೆ. ವರ್ಗಾವಣೆಯಾಗಲಿ ಎಂದು ಬಯಸುತ್ತಾರೆ. ಆದರೆ ಯಾರೂ ಕೂಡ ಬಹಿರಂಗವಾಗಿ ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಸಂಬಂಧಪಟ್ಟವರು ಕಳೆದೈದು ವರ್ಷಗಳಿಂದ ನೂತನ ಕಟ್ಟಡ ನಿರ್ಮಿಸುವಂತೆ ಹತ್ತಾರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಗತಿಯಾಗಿಲ್ಲ.
2 ಕೊಠಡಿಗಳಿಗೆ ಬೀಗ!
ಈ ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆಯೇ ಗ್ರಾಮಸ್ಥರು ಶಿಕ್ಷಣ ಇಲಾಖೆಯನ್ನು ತರಾಟೆ ತೆಗೆದುಕೊಂಡಿದ್ದರು. ಆನಂತರದಲ್ಲಿ ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಯೋಜಕರನ್ನು ಕಳುಹಿಸಿದ್ದರು. ಅವರು ಪರಿ ಶೀ ಲನೆ ನಡೆಸಿ ಕಟ್ಟಡದ 2 ಕೊಠಡಿಗಳಿಗೆ ಬೀಗ ಹಾಕಿಸಿದ್ದು, ಉಳಿದ 6 ಕೊಠಡಿಗಳಲ್ಲಿ ಮಾತ್ರ ಪಾಠ ಮಾಡುವಂತೆ ಸೂಚಿಸಿದ್ದರು. ಆದರೆ ಇಲ್ಲಿ ತೀರಾ ಅಪಾಯದಲ್ಲಿರುವ 2 ಕೊಠಡಿಗಳಿಗೆ ಹೊಂದಿಕೊಂಡೇ ಇತರ ಕೊಠಡಿಗಳಿದೆ. ಆ ಕೋಣೆಗಳ ಛಾವಣಿ ಮುರಿದರೆ ಇತರ 6 ಕೋಣೆಗಳಿಗೂ ಅದರ ಪರಿಣಾಮ ಬೀರುತ್ತದೆ.
Related Articles
ಎರಡು ವರ್ಷಗಳ ಹಿಂದೆ ಮಾಜಿ ಶಾಸಕ ವಸಂತ ಬಂಗೇರ ಅವರು ಮಕ್ಕಳಿಗೆ ಸೈಕಲ್ ವಿತರಣೆಗೆಂದು ಈ ಶಾಲೆಗೆ ಬಂದವರು ಕೋಣೆಗಳ ದುಸ್ಥಿತಿಯನ್ನು ಕಂಡಿದ್ದಾರೆ. ತತ್ ಕ್ಷಣವೇ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ಮಾಡಿಸಿದ್ದಾರೆ. 12 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸುವ ಭರವಸೆಯನ್ನೂ ಶಾಸಕರು ನೀಡಿದ್ದರು. ಕಟ್ಟಡದ ರಿಪೇರಿಗೆ 4 ಲಕ್ಷ ರೂ. ಅನುದಾನ ಒದಗಿಸಿಕೊಡುವಂತೆ ಶಾಲಾ ಮುಖ್ಯ ಶಿಕ್ಷಕರು ಬೇಡಿಕೆ ಇಟ್ಟಿದ್ದರು. ಆನಂತರದಲ್ಲಿ 12 ಲಕ್ಷ ರೂ. ಅನುದಾನ ಮಂಜೂರಾಗಿದ್ದರೂ, ಅದು ಪುತ್ತಿಲ ಗ್ರಾಮದ ಹೇರಾಜೆ ಶಾಲೆಗೆ ವರ್ಗಾವಣೆಗೊಂಡಿತ್ತು. ಶಾಲೆಯ ಸ್ಥಿತಿ ಗಂಭೀರವಾಗಿದ್ದರೂ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿಲ್ಲದಿರುವುದು ಖೇದಕರ ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement
ಮಾಹಿತಿ ಬಂದಿಲ್ಲ
ತಣ್ಣೀರುಪಂತ ಸರಕಾರಿ ಶಾಲೆ ಅಪಾಯದ ಸ್ಥಿತಿಯಲ್ಲಿರುವ ಕುರಿತು ಯಾವುದೇ ಮಾಹಿತಿ ಈವರೆಗೆ ಬಂದಿಲ್ಲ. ಒಂದೊಮ್ಮೆ ಮನವಿ ಬಂದರೆ ಮೇಲಧಿಕಾರಿಗಳ ಮೂಲಕ ಸರಕಾರದ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು.
– ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ ಸ್ಪಂದನೆ ಸಿಕ್ಕಿಲ್ಲ
ಮಾಜಿ ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೆವು. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಹಿಂದೆ ಶಾಸಕರು ಜಿ.ಪಂ. ಎಂಜಿನಿಯರ್ ಅವರನ್ನು ಕರೆಯಿಸಿ ನೂತನ ಕಟ್ಟಡದ ಅನುದಾನಕ್ಕೆ ಅಂದಾಜು ಪಟ್ಟಿ ತಯಾರಿಸಿದ್ದರು. ಆನಂತರದಲ್ಲಿ ಯಾವುದೇ ಪ್ರಗತಿಯಾಗಿಲ್ಲ.
– ಶ್ರೀಧರ್, SDMC ಅಧ್ಯಕ್ಷರು
ಮನವಿಗೆ ತೀರ್ಮಾನ
ಶಾಲೆಯ ಸ್ಥಿತಿಗತಿಗಳ ವಿವರವಾದ ಮಾಹಿತಿ ಆಧರಿಸಿ ಗ್ರಾ.ಪಂ. ಮೂಲಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಲಿಖಿತ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
– ಯೋಗೀಶ್ ಅಳಕೆ, ಹಳೆ ವಿದ್ಯಾರ್ಥಿ — ಎಂ.ಎಸ್. ಭಟ್