ಬೆಳ್ತಂಗಡಿ : ಸವಣಾಲು ಅನುದಾನಿತ ಹಿ.ಪ್ರಾ. ಶಾಲೆಯ ಕಟ್ಟಡವು ಹಳೆಯದಾಗಿದ್ದು, ಶಿಥಿಲಾವಸ್ಥೆಗೆ ತಲುಪಿ ಪ್ರಸ್ತುತ ಮಳೆ ನೀರು ಬೀಳುವ ಜತೆಗೆ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳ ಹೆತ್ತವರು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಹಿತ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ.
ಶಾಲೆಯ ಕಟ್ಟಡವು ಸುಮಾರು 75 ವರ್ಷಗಳ ಹಳೆಯದಾಗಿದ್ದು, ಒಂದರಿಂದ 7ನೇ ತರಗತಿಯ 63 ಮಕ್ಕಳು ಅದೇ ಕಟ್ಟಡದಲ್ಲಿ ವ್ಯಾಸಂಗ ಮಾಡಬೇಕಾದ ಸ್ಥಿತಿ ಇದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ನೀರು ಬೀಳುತ್ತಿದೆ. ಕಿಟಕಿ ಬಾಗಿಲುಗಳೂ ತುಕ್ಕು, ಗೆದ್ದಲು ಹಿಡಿದಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಗಮನ ಹರಿಸುತ್ತಿಲ್ಲ. ಶಾಲೆಯಲ್ಲಿ ಹೆತ್ತವರ ಸಭೆಯೂ ನಡೆಯುತ್ತಿಲ್ಲ. ಯಾವ ಸೌಲಭ್ಯವೂ ಇಲ್ಲಿ ವಿದ್ಯಾರ್ಥಿಗಳಿಗೆ ಲಭಿಸುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು. ಜತೆಗೆ ಕಟ್ಟಡದ ಸವಣಾಲು ಅನುದಾನಿತ ಹಿ.ಪ್ರಾ. ಶಾಲೆ ದುರಸ್ತಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ದೂರಿನ ಪ್ರತಿಯನ್ನು ಬೆಳ್ತಂಗಡಿ ಶಾಸಕರು, ದ.ಕ. ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೂ ನೀಡಿದ್ದಾರೆ. ನಾವು ಈ ತನಕ ನೀಡಿದ ದೂರಿಗೆ ಯಾರೂ ಸ್ಪಂದಿಸಿಲ್ಲ ಎಂದು ಹೆತ್ತವರಾದ ಅರುಣ್ ಕುಮಾರ್ ಆರೋಪಿಸಿದ್ದಾರೆ.
ಕರೆ ಸ್ವೀಕರಿಸುತ್ತಿಲ್ಲ
ಹೆತ್ತವರ ದೂರಿನ ಕುರಿತು ವಿಚಾರಿಸುವುದಕ್ಕಾಗಿ ಬೆಳ್ತಂಗಡಿಯ ಬಿಇಒ ಗುರುಪ್ರಸಾದ್ ಅವರಿಗೆ ದೂರವಾಣಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ತಾ.ಪಂ. ಇಒ ಅವರ ಬಳಿ ಕೇಳಿದರೆ ಬಿಇಒ ಬಳಿ ಮಾತನಾಡಿ ಎಂಬ ಉತ್ತರ ನೀಡಿದ್ದಾರೆ. ಬಳಿಕ ಡಿಡಿಪಿಐ ವೈ. ಶಿವರಾಮಯ್ಯ ಅವರ ಬಳಿ ಕೇಳಿದಾಗ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟವರಲ್ಲಿ ವಿಚಾರಿಸುವುದಾಗಿ ತಿಳಿಸಿದ್ದಾರೆ.