Advertisement

ಶತಮಾನೋತ್ತರ ದಶಮಾನೋತ್ಸವ ಆಚರಣೆ ಹೊಸ್ತಿಲಲ್ಲಿ ಶಾಲೆ

04:27 PM Jan 13, 2020 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1910 ಶಾಲೆ ಆರಂಭ
ದಿ| ಕಕ್ಯ ಕೃಷ್ಣಾಚಾರ್ಯ ಅವರಿಂದ ಸ್ಥಾಪನೆ, ತಾ| ಬೋರ್ಡ್‌ಗೆ ಹಸ್ತಾಂತರ

ಪುಂಜಾಲಕಟ್ಟೆ: ಲಭ್ಯ ದಾಖಲೆಗಳ ಹಾಗೂ ಊರಿನ ಹಿರಿಯರ ಪ್ರಕಾರ ಬಾರªಡ್ಡು ಚೆಲುವಮ್ಮನವರು ಮತ್ತು ಅವರ ಹಿಂದಿನ ಜೈನ ಮನೆತನದಿಂದ ಸ್ಥಳದಾನವನ್ನು ಪಡೆದು 1910ರಲ್ಲಿ ಉಳಿ ಗ್ರಾಮದ ಕಕ್ಯಪದವುನಲ್ಲಿ ದಿ| ಕಕ್ಯ ಕೃಷ್ಣಾಚಾರ್ಯರಿಂದ ಈ ಶಾಲೆ ಸ್ಥಾಪಿಸಲ್ಪಟ್ಟಿತ್ತು.

ಆರಂಭದಲ್ಲಿ ಹುಲ್ಲು ಛಾವಣಿಯ ಕಟ್ಟಡದಲ್ಲಿದ್ದ ಶಾಲೆ 1926ರ ಡಿಸೆಂಬರ್‌ನಲ್ಲಿ ಬೆಂಕಿಗೆ ಆಹುತಿಯಾಗಿ ಬಳಿಕ ಹೆಂಚಿನ ಛಾವಣಿ ನಿರ್ಮಿಸಲಾಯಿತು. ಕಾಲಾಂತರದಲ್ಲಿ ಗೋಡೆ ಶಿಥಿಲಗೊಂಡಾಗ ಅಂದಿನ ಪಟೇಲರು ದಿ| ರಾಮಕೃಷ್ಣ ಆಚಾರ್ಯರು ತನ್ನ ಮನೆಯಲ್ಲಿದ್ದ ತೇಗದ ಮರದ ಸಾಮಗ್ರಿಗಳನ್ನು ಬಳಸಿ ದುರಸ್ತಿಗೊಳಿಸಿದ ಬಳಿಕ 1958ರ ಜ. 1ರಂದು ತಾಲೂಕು ಬೋರ್ಡ್‌ಗೆ ಹಸ್ತಾಂತರವಾಗಿತ್ತು.

ಸತತ ಪರಿಶ್ರಮದ ಫಲ
ದಿ| ತನಿಯಪ್ಪ ಮಾಸ್ತರ್‌, ದಿ| ತಾಚಪ್ಪ ಮಾಸ್ತರ್‌, ದಿ| ನಾಗಪ್ಪ ಪೂಜಾರಿ, ಬಾಬು ಮಾಸ್ತರ್‌ ಕೋಂಗುಜೆ ಮೊದಲಾದ ಹಿರಿಯ ಶಿಕ್ಷಕರ ಸತತ ಪರಿಶ್ರಮದ ಫಲವಾಗಿ ಪಿತ್ತಿಲ, ತೆಕ್ಕಾರು, ಮಣಿನಾಲ್ಕೂರು, ಕಜೆಕಾರು ಮೊದಲಾದ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆ ಕ್ರಮೇಣ ಹಿರಿಯ ಪ್ರಾಥಮಿಕ ಶಾಲೆಯಾಗಿ, ಶಾಸಕರ ಮಾದರಿ ಶಾಲೆಯಾಗಿ ಬೆಳೆಯಿತು. ಈ ಶಾಲೆಯಲ್ಲಿ 650 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ ಇತಿಹಾಸವಿದೆ. ಪ್ರಸ್ತುತ ಈ ಶಾಲೆಯಲ್ಲಿ 250 ಮಕ್ಕಳಿದ್ದು, 8 ಮಂದಿ ಖಾಯಂ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕಿ, ಓರ್ವ ಕಂಪ್ಯೂಟರ್‌ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಕಂಪ್ಯೂಟರ್‌ ಕೊಠಡಿ ಸೌಲಭ್ಯ, ವಿಜ್ಞಾನದ ಪರಿಣಾಮಕಾರಿ ಕಲಿಕೆಗೆ ಲ್ಯಾಬ್‌ ವ್ಯವಸ್ಥೆ ಇದೆ.

Advertisement

ಅತ್ಯುತ್ತಮ ಹಿ.ಪ್ರಾ. ಶಾಲೆ ಪ್ರಶಸ್ತಿ
2004ರಲ್ಲಿ ಮುಖ್ಯ ಶಿಕ್ಷಕ‌ ಕೃಷ್ಣ ಆಚಾರ್ಯ ಅವರ ಅವಧಿಯಲ್ಲಿ ಈ ಶಾಲೆ ತಾಲೂಕಿನ ಅತ್ಯುತ್ತಮ ಹಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿ ಗಳಿಸಿತ್ತು. 2010 ರಲ್ಲಿ ಅನೇಕ ಗಣ್ಯರು, ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶತಾನಿ-ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶತಮಾನೊತ್ಸವವನ್ನು ಆಚರಿಸಿಕೊಂಡಿದ್ದು, 2020ರಲ್ಲಿ ಶತಮಾನೋತ್ತರ ದಶಮಾನೋತ್ಸವ ಆಚರಿಸಿಕೊಳ್ಳಲಿದೆ.

2009-11ನೇ ಸಾಲಿನಲ್ಲಿ, ಶತಮಾನೋತ್ಸವದ ಸಂದರ್ಭದಲ್ಲಿ ಆಗಿನ ಎಸ್‌.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ ಅವರ ಹಾಗೂ ಶತಮಾನೋತ್ಸವದ ಅಧ್ಯಕ್ಷ ಡಾ| ರಾಜಾರಾಮ ಕೆ.ಬಿ. ಅವರ ಮುತುವರ್ಜಿಯಿಂದ ಆಗಿನ ಸಚಿವ ಬಿ. ರಮಾನಾಥ ರೈ ಅವರ ಸಹಕಾರದಿಂದ ಹೆಚ್ಚಿನ ಅನುದಾನ ದೊರೆತು ಶಾಲೆ ಪ್ರಗತಿ ಸಾಧಿಸಿರುತ್ತದೆ. ಸ್ವತ್ಛ, ಸುಂದರ ಪರಿಸರವನ್ನು ಹೊಂದಿದ ಈ ಶಾಲೆಯು ಹೂತೋಟ ಹಾಗೂ ತರಕಾರಿ ತೋಟವನ್ನು ಒಳಗೊಂಡಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಯಲ್ಲಿ ಬೆಳೆದ ತರಕಾರಿಗಳು ಉಪಯೋಗಿಸಲ್ಪಡುತ್ತಿವೆ.

ಹಳೆ ವಿದ್ಯಾರ್ಥಿಗಳು
ಡಾ| ರಾಜಾರಾಮ್‌ ಕೆ.ಬಿ., ಡಾ| ದಿನೇಶ್‌ ಬಂಗೇರ ವೈದ್ಯರಾಗಿದ್ದು, ಹಲವರು ಶಿಕ್ಷಕರಾಗಿ, ಯೋಧರಾಗಿ, ರಾಜಕೀಯ, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬೋಧನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಪ್ರೊಜೆಕ್ಟರ್‌ ಹಾಗೂ ಹೊಸ ಕಂಪ್ಯೂಟರ್‌ಗಳ ಆವಶ್ಯಕತೆ ಇದೆ.
-ವಿದ್ಯಾ ಕೆ., ಪ್ರಭಾರ ಮುಖ್ಯ ಶಿಕ್ಷಕಿ.

ನಮಗೆ ವಿದ್ಯೆ ಕಲಿಸಿ, ವ್ಯಕ್ತಿತ್ವ ರೂಪಿಸಿದ ಶಾಲೆಯ ಶತಮಾನೋತ್ಸವ ಆಚರಣೆಯಲ್ಲಿ ನಾವು ಪಾಲು ಪಡೆದಿರುವುದು ಸಂತಸವಾಗಿದೆ. ತೀರಾ ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ಪ್ರಗತಿ ಶ್ಲಾಘನೀಯವಾಗಿದೆ.
-ಡಾ| ರಾಜಾರಾಮ ಕೆ.ಬಿ., ದಂತ ವೈದ್ಯರು, ಉಪ್ಪಿನಂಗಡಿ, ಹಳೆ ವಿದ್ಯಾರ್ಥಿ

-  ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next