ಶಿಕ್ಷಕರು ತರಗತಿಯಲ್ಲಿ ಪಾಠಮಾಡುತ್ತಿದ್ದಾಗ ಪುಟ್ಟ ಹೊರಗೆ ನೋಡುತ್ತಿದ್ದ.ಅಲ್ಲಿ ಮರವೊಂದರ ಪೊಟರೆಯೊಳಗೆ ಹಾವು ನುಸುಳುತ್ತಿತ್ತು. ತಾನು ಮಾಡಿದ ಪಾಠ ಅರ್ಥ ಆಯಿತೇ ಎಂಬ ಅರ್ಥದಲ್ಲಿ ಶಿಕ್ಷಕರು, “ಹೊಕ್ಕಿತಾ?’ ಎಂದು ಕೇಳಿದರು. ಒಮ್ಮೆಲೇ ಪುಟ್ಟ, “ಹೊಕ್ಕಿತು ಸರ್, ಬಾಲ ಮಾತ್ರ ಹೊರಗೆ…’ ಎಂದನಂತೆ. ಇದು ಒಂದು ತಮಾಷೆಯಾದರೂ ಶಾಲೆಯ ಪರಿಸರದಲ್ಲಿ, ಅದರಲ್ಲೂ ಶಾಲೆಯ ಛಾವಣಿಯ ಮೇಲೆ ಹಾವು ಓಡಾಡುವುದು ತಮಾಷೆಯಲ್ಲ. ಸರಕಾರಿ ಶಾಲೆಗಳೆಂದರೆ ಹೆಂಚಿನ ಛಾವಣಿಯ ಕಟ್ಟಡಗಳು. ಆ ಛಾವಣಿಯ ಒಳಗಡೆ ನಡು ಮಧ್ಯದಲ್ಲಿರುವ ಭಾಗವೇ ಹಾವುಗಳ ಸಂಚಾರದ ಮಾರ್ಗ. ಶಾಲೆಯ ನಿತ್ಯ ಸಂದರ್ಶಕರೆಂದರೆ ಕೇರೆ ಹಾವುಗಳು. ಅವುಗಳಿಗೆ ಪ್ರಿಯವಾದ ಆಹಾರ ಇಲಿಗಳು. ಹಾವು ಅಟ್ಟಿಸಿಕೊಂಡು ಬಂದಾಗ ಇಲಿಗಳು ಪಕ್ಕಾಸಿನ ಮಧ್ಯದ ಭಾಗವನ್ನು ರಾಜಮಾರ್ಗವೆಂದು ತಿಳಿದು ದೌಡಾಯಿಸುತ್ತವೆ. ಅದರ ಹಿಂದೆ ಹಾವಿನ ಸವಾರಿ ಬರುತ್ತದೆ. ಶಾಲೆಯ ಯಾವುದಾದರೊಂದು ತರಗತಿಯಲ್ಲಿ ಒಮ್ಮೆಲೇ ಮಕ್ಕಳೆಲ್ಲಾ ಕಿರುಚಿಕೊಂಡರೆ ಅದಕ್ಕೆ ಕಾರಣ ಕೇರೆ ಹಾವೇ ಇರಬೇಕು. ಒಂದು ತರಗತಿಯ ಛಾವಣಿ ಮೂಲಕ ಹಾವು ಸ್ವಲ್ಪ ಹೊತ್ತಲ್ಲಿ ಆಚೆ ತರಗತಿಯಲ್ಲಿರುತ್ತದೆ.
ಇಲಿಯನ್ನು ಹುಡುಕಿ ಹೊರಟು ಧಾವಂತದಲ್ಲಿ ಚಲಿಸುವಾಗ ಒಮ್ಮೊಮ್ಮೆ ಅದು ಸಮತೋಲನ ಕಳೆದುಕೊಳ್ಳುತ್ತದೆ. ಒಂದು ದಿನ ಹೀಗೇ ಹಾವು ವೇಗವಾಗಿ ಇಲಿಯನ್ನು ಅಟ್ಟಿಸಿಕೊಂಡು ಬಂತು. ಸರಸರ ನುಗ್ಗುವ ರಭಸದಲ್ಲಿ ಒಮ್ಮೆಲೇ ಅದು ಆಯತಪ್ಪಿ ಕೆಳಗೆ ಬಿತ್ತು. ಮಕ್ಕಳು ಹಾವು ತರಗತಿಗೆ ಬಂದದ್ದನ್ನು ನೋಡುವಷ್ಟರಲ್ಲಿ ದೊಪ್ಪೆಂದು ಆ ಹಾವು ಕೊನೆಯ ಬೆಂಚಿನಲ್ಲಿ ಕುಳಿತ ಜೀಕ್ಷಿತಾಳ ಭುಜಕ್ಕೆ ಅಪ್ಪಳಿಸಿ ಕೆಳಗೆ ಬಿತ್ತು. ಅವಳು ಈ ಅನಿರೀಕ್ಷಿತ ಘಟನೆಯಿಂದಾದ ಗಾಬರಿಯಿಂದ ಕಿರುಚಿಬಿಟ್ಟಳು. ಉಳಿದ ಮಕ್ಕಳೂ ಕಿರುಚಿದರು. ಹಾವಿಗೂ ಭಯವಾಗಿತ್ತು. ಮಕ್ಕಳು ಬೆಂಚಿನ ಮೇಲೆ ಹತ್ತಿದರು. ಹಾವು ಹೊರಗಡೆ ಹೋಯಿತು. ಆ ಮಕ್ಕಳು ಸಹಜ ಸ್ಥಿತಿಗೆ ಮರಳಬೇಕಾದರೆ ಸ್ವಲ್ಪ ಹೊತ್ತು ಬೇಕಾಯ್ತು.
ಅದು ಅರ್ಧವಾರ್ಷಿಕ ಪರೀಕ್ಷೆಯ ಸಮಯ. ಕೆಲವು ಮಕ್ಕಳು ಉತ್ತರ ಪತ್ರಿಕೆ ಕೊಟ್ಟು ಹೊರಗಡೆ ಹೋಗಿದ್ದರು. ಆ ಉತ್ತರ ಪತ್ರಿಕೆಗಳನ್ನು ಮೇಜಿನ ಮೇಲಿಟ್ಟು ನಾನು ಕೊಠಡಿ ಮೇಲ್ವಿಚಾರಣೆ ಮಾಡುತ್ತ ಇದ್ದೆ. ಉಳಿದ ಮಕ್ಕಳು ಪರೀಕ್ಷೆ ಬರೆಯುತ್ತಲೂ ಇದ್ದರು. ಒಮ್ಮೆಲೇ ಮೇಲಿನಿಂದ ಏನೋ ಶಬ್ದವಾಯ್ತು. ನೋಡಿದೆ. ಮೇಲಿನಿಂದ ದ್ರವರೂಪದಲ್ಲಿ ಬೆಳ್ಳಗಿರುವುದೇನೋ ಬೀಳುತ್ತಲಿತ್ತು. ಅದು ನೇರವಾಗಿ ಮೇಜಿನ ಮೇಲಿಟ್ಟಿದ್ದ ಉತ್ತರ ಪತ್ರಿಕೆಗಳ ಮೇಲೆ ಚೆಲ್ಲಿತು. ಮೇಲೆ ನೋಡಿದರೆ ಅಲ್ಲೊಂದು ಕೇರೆ ಹಾವು. ಅದು ಗೋಡೆಯಾಚೆಗೆ ಸರಿದು ಹೋಯಿತು. ಅದು ಆ ಹಾವಿನ ಮಲವೋ, ವಾಂತಿಯೋ… ತಿಳಿಯಲಿಲ್ಲ. ಆದರೆ, ಅದರ ಗಬ್ಬು ವಾಸನೆಯಿಂದ ನನಗೆ ವಾಂತಿ ಬರುವಂತಾಯಿತು. ಅದು ಮಕ್ಕಳ ಉತ್ತರಪತ್ರಿಕೆಗಳ ಮೇಲೆ ಚೆಲ್ಲಿದೆ. ಉತ್ತರಪತ್ರಿಕೆಗಳನ್ನು ಎಸೆಯುವಂತೆಯೂ ಇಲ್ಲ. ಹಾಗೇ ತೆಗೆದುಕೊಂಡು ಹೋಗಿ ಮೌಲ್ಯಮಾಪನ ಮಾಡುವಂತೆಯೂ ಇಲ್ಲ. ಕೊನೆಗೆ ಹೇಗೋ ಅವನ್ನೆತ್ತಿ ಹೊರಗೆ ಸಾಗಿಸಿದೆ. ಮೇಲಿನಿಂದ ಸ್ವಲ್ಪ ನೀರು ಹೊಯ್ದೆ. ಆ ಕೊಳಕು ತೊಳೆದು ಹೋಯಿತು. ಪೇಪರ್ ಒದ್ದೆಯಾಗಿ ಅಕ್ಷರಗಳು ಮಸುಕಾದವು. ಆ ಪೇಪರ್‌ಗಳನ್ನು ಬಿಸಿಲಲ್ಲಿ ಒಣಗಲು ಇಟ್ಟೆ. ಪೇಪರ್ ರಟ್ಟಿನಂತಾಯಿತು. ಅಂತೂ ಹೇಗೋ ಅದನ್ನು ಮೌಲ್ಯಮಾಪನ ಮಾಡಿದೆ. ಎಷ್ಟೋ ದಿನಗಳವರೆಗೆ ಊಟ ಮಾಡುವಾಗೆಲ್ಲ ಬೇಡಬೇಡವೆಂದರೂ ಇದರ ನೆನಪಾಗಿ ಅಸಹ್ಯಪಟ್ಟುಕೊಂಡೇ ಊಟ ಮಾಡುತ್ತಿದ್ದೆ.
ನಮ್ಮ ಶಾಲೆಯ ಪರಿಸರದಲ್ಲಿ ಇತರ ಹಾವುಗಳೂ ಆಗಾಗ ಕಾಣಸಿಗುತ್ತದೆ. ನಾಗರಹಾವುಗಳೂ ಶಾಲಾ ಅಂಗಳದಲ್ಲಿ ಬರುತ್ತವೆ. “ಪಗೆಲ’ ಎಂಬ ಜಾತಿಯ ಹಾವುಗಳೂ ಆಗಾಗ ಬರುತ್ತವೆ.
ಒಮ್ಮೆ ನಮ್ಮ ಶಾಲೆಯ ಬಿಸಿಯೂಟದ ಅಡುಗೆ ಕೋಣೆಯ ಬಳಿ ಹೆಬ್ಟಾವಿನ ಮರಿಯೊಂದು ಇತ್ತು. ವಿಜ್ಞಾನ ಶಿಕ್ಷಕರಾದ ವಿನೋದ್ ಸರ್ ಹಾವುಗಳನ್ನು ಕೋಲಿನಲ್ಲಿ ಎತ್ತಿಯೋ, ಮೆಲ್ಲನೆ ಕೋಲಿನಿಂದ ದಿಕ್ಕು ಬದಲಿಸಿಯೋ ಆಚೆ ಕಳಿಸುವುದರಲ್ಲಿ ನಿಷ್ಣಾತರು. ನನಗೆ ಹಾವೆಂದರೆ ಭಯ. ಅದಕ್ಕಿಂತ ಹೆಚ್ಚಾಗಿ ಅದರ ಮೈ ನನಗೆ ಅಸಹ್ಯ ಭಾವನೆ ಮೂಡಿಸುತ್ತಿತ್ತು. (ಎಷ್ಟೆಂದರೆ ಹಾವನ್ನು ನೋಡಿದ ನೆನಪು ಮರೆಯಾಗುವವರೆಗೂ ನಾನು ಮೀನು ತಿನ್ನುತ್ತಿರಲಿಲ್ಲ.) ಈ ಹೆಬ್ಟಾವಿನ ಮರಿಯನ್ನು ವಿನೋದ್ ಸರ್ ಒಂದು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಇಟ್ಟರು. ಎಲ್ಲರಿಗೂ ತೋರಿಸುವುದು ಅವರ ಉದ್ದೇಶವಾಗಿತ್ತು. ಇದಾಗಿ ಸ್ವಲ್ಪ ದಿನಗಳ ನಂತರ ಮಧ್ಯಾಹ್ನದ ಬಿಸಿಯೂಟಕ್ಕೆ ಚಿತ್ರಾನ್ನ ಮಾಡಿದರು. ಮಕ್ಕಳ ಮೂರು ಕೌಂಟರ್‌ಗಳಲ್ಲಿ ಬಡಿಸಿ ಆಗುವಾಗ ಶಿಕ್ಷಕರಿಗೆ ಅನ್ನ ಉಳಿಯಲಿಲ್ಲ. “ಅಡುಗೆ ಕೋಣೆಯಲ್ಲಿ ಇದೆ. ಅಲ್ಲಿಂದ ತೆಗೆದುಕೊಳ್ಳಿ’ ಎಂದರು ಅಡುಗೆಯವರು. ತಟ್ಟೆ ಹಿಡಿದು ಅಡುಗೆ ಕೋಣೆಗೆ ಹೋದೆವು. ಅಲ್ಲಿ ಪ್ಲಾಸ್ಟಿಕ್ ಬಕೆಟ್ ಒಂದರಲ್ಲಿ ಚಿತ್ರಾನ್ನವನ್ನು ಹಾಕಿಟ್ಟಿದ್ದರು. ತಿಳಿ ಆರೆಂಜ್ ಬಣ್ಣದ ಆ ಬಕೆಟ್ ನೋಡುವಾಗ ನನಗೆ ಹೆಬ್ಟಾವಿನ ಮರಿಯ ನೆನಪಾಯ್ತು. ಆ ಬಕೆಟ್ ಇದೇ ಬಣ್ಣ, ಇದೇ ಗಾತ್ರ¨ªಾಗಿತ್ತು. “ಅದೇ ಇದು’ ಎಂದುಕೊಂಡೆ. ನನ್ನ ಸಹೋದ್ಯೋಗಿಗಳೂ ಹಾಗೇ ತಿಳಿದುಕೊಂಡರು. ಬೆಪ್ಪಾಗಿ ಮುಖಮುಖ ನೋಡಿಕೊಂಡೆವು. ನಾವು ಅನ್ನ ಹಾಕಿಸಿಕೊಳ್ಳಲು ಹಿಂಜರಿಯುವುದನ್ನು ಕಂಡಾಗ ಅವರು, “ಏನಾಯ್ತು ಮೇಡಂ?’ ಅಂದರು. “ಅಲ್ಲ ಅಕ್ಕಾ, ಈ ಬಕೆಟ…? ಇದರಲ್ಲಿ ಅಲ್ವಾ ಆವತ್ತು ಹಾವನ್ನು ಇಟ್ಟದ್ದು?’ ಅಳುಕುತ್ತ ಕೇಳಿದೆ. “ಅಯ್ಯೋ, ಮೇಡಂ. ನಾವು ಹಾಗೆ ಮಾಡ್ತೇವಾ? ಅದು ನಾವು ತರಕಾರಿ ವೇಸ್ಟ್ ಹಾಕುತ್ತಿದ್ದ ಬಕೆಟ್ ಇದು ಹೊಸ ಬಕೆಟ್ ನೋಡಿ ಅದು ಅಲ್ಲಿದೆ’ ಎಂದು ತೋರಿಸಿದರು.
ಹೆಸರಿಗೊಂದಿಷ್ಟು ಅನ್ನ ಬಡಿಸಿಕೊಂಡು ಹೋದೆವು.
ಜೆಸ್ಸಿ ಪಿ. ವಿ.