ಬದಿಯಡ್ಕ: ಅಧ್ಯಾಪನ, ಯಕ್ಷಗಾನ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಮ್ಮ ನಾಡಿನ ಶ್ರೀಮಂತ ಬದುಕನ್ನು ಕ್ರಿಯಾಶೀಲವಾಗಿಟ್ಟವರು ಪಂಡಿತ ಪೆರ್ಲ ಕೃಷ್ಣ ಭಟ್ ಅವರು ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ ಪೆರ್ಲ ಅವರು ಹೇಳಿದರು.
ಬದಿಯಡ್ಕ ಸಮೀಪದ ನಾರಾಯಣೀಯಂ ಸಮುತ್ಛಯದ ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ಏರ್ಪಡಿಸಲಾದ ಓಣಂ ಹಬ್ಬದಲ್ಲಿ ಜರಗಿದ ಪೆರ್ಲ ಕೃಷ್ಣ ಭಟ್ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೀಣಾವಾದಿನಿ ಸಂಗೀತ ವಿದ್ಯಾಪೀಠವು ಕರಾವಳಿ ಜಿಲ್ಲೆಗಳಲ್ಲಿ ಸಂಗೀತವನ್ನು ಪಸರಿಸುವ ಉದಾತ್ತ ಕೆಲಸ ಮಾಡುತ್ತಿದೆ. ಇದನ್ನು ಎಲ್ಲರೂ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಸಭಾಧ್ಯಕ್ಷತೆ ವಹಿಸಿದ ಮುಳ್ಳೇರಿಯದ ಹಿರಿಯ ವೈದ್ಯ ಡಾ.ಮಂಜುನಾಥ ಭಟ್ ಹೇಳಿದರು.
ನಾರಾಯಣೀಯಂನ ಸಂಚಾಲಕರಾದ ಬಳ್ಳಪದವು ಯೋಗೀಶ ಶರ್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾವಿದ ಪ್ರಭಾಕರ ಕುಂಜಾರು ವಂದಿಸಿದರು.ಬೆಳಗ್ಗಿನಿಂದಲೇ ಆರಂಭವಾದ ಓಣಂ ಉತ್ಸವವನ್ನು ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ನಿವೃತ್ತ ಮಹಾಪ್ರಬಂಧಕ ಎಸ್.ಗೋವಿಂದರಾಜ ಭಟ್ ಅವರು ನೆರವೇರಿಸಿದರು. ಆನಂದ ಕೆ. ಮವ್ವಾರು ಮತ್ತು ಶಶಿಧರ ತೆಕ್ಕೆಮೂಲೆ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಂಜೆ ನಡೆದ ಸಂಗೀತ ಕಚೇರಿಗಳಲ್ಲಿ ಮಂಗಳೂರಿನ ಉದಯೋನ್ಮುಖ ಕಲಾವಿದೆ ತೃಪ್ತಿ ಭಟ್ ಮತ್ತು ಕಾಸರಗೋಡಿನ ಪೂರ್ಣಪ್ರಜ್ಞ ಅವರು ಹಾಡುಗಾರಿಕೆ ನಡೆಸಿಕೊಟ್ಟರು. ಮಧ್ಯಾಹ್ನ ವಿಶಿಷ್ಟವಾದ ಓಣಂ ಭೋಜನ ಏರ್ಪಡಿಸಲಾಗಿತ್ತು.
ನಾಡಿಗೆ ಸದಾ ಬೆಳಕು
ವಿದ್ವಾಂಸರು ಒಂದು ಸಮಾಜದ ಬದುಕನ್ನು ನಿರ್ದಿಷ್ಟ ಗತಿಯತ್ತ ಒಯ್ಯುವ ಶಕ್ತಿಶಾಲಿ ವ್ಯಕ್ತಿಗಳು. ದೀಪಸ್ತಂಭಗಳಂತೆ ನಾಡಿಗೆ ಸದಾ ಬೆಳಕು ನೀಡುವ ಇಂತಹ ಅನುಪಮ ವ್ಯಕ್ತಿಗಳನ್ನು ಸ್ಮರಣೆ ಮಾಡುತ್ತಿರುವುದು ಒಂದು ಮಾದರಿ ಕೆಲಸ. ವೀಣಾವಾದಿನಿ ಸಂಗೀತ ಶಾಲೆ ಇಂತಹ ಮೇಲ್ಪಂಕ್ತಿ ಹಾಕಿರುವುದು ಸ್ತುತ್ಯರ್ಹ ಮತ್ತು ಅದು ಒಂದು ಸಾಂಸ್ಕೃತಿಕ ಬಾಧ್ಯತೆಯೂ ಹೌದು ಎಂದು ಡಾ.ವಸಂತಕುಮಾರ ಪೆರ್ಲ ಅವರು ಹೇಳಿದರು.