Advertisement
ನಾನು ಮತ್ತು ಜಿಎಸ್‌ಎಸ್ ಒಂದೇ ಕೋಣೆಯಲ್ಲಿ ವಸತಿ ಹೂಡಿದ್ದೆವು. ಪರಸ್ಥಳಕ್ಕೆ ಹೋದಾಗ ಜಿಎಸ್‌ಎಸ್ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದರು. ಮೊದಲನೆಯದು, ತಮಗೆ ಗೊತ್ತಾಗಿರುವ ಕೋಣೆಯಲ್ಲಿ ಕಮೋಡಿದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು! ಎರಡನೆಯದು, ಕೋಣೆಗೆ ಹೋದ ಕೂಡಲೇ ತಾವು ಊರಿಂದ ತಮ್ಮೊಂದಿಗೆ ತಂದಿದ್ದ ಬಿಳಿಯ ಬೆಡ್‌ಶೀಟ್ ಒಂದನ್ನು ತಮ್ಮ ಹಾಸಿಗೆಯ ಮೇಲೆ ಹಾಸುವುದು. ಮೂರನೆಯದು, ಬಾತ್‌ರೂಮಿನಲ್ಲಿ ಖಾಲಿ ಬಕೆಟ್ಟಿನಲ್ಲಿ ಭರ್ತಿ ನೀರು ತುಂಬಿ ಇಡುವುದು. ಈ ಮೂರು ವಿಷಯಗಳನ್ನು ಅವರು ಯಾವತ್ತೂ ಮರೆಯುತ್ತಿರಲಿಲ್ಲ.
Related Articles
Advertisement
ಚುಮುಚುಮು ಬೆಳಗು. ಇಬ್ಬರೂ ಸ್ವೆಟ್ಟರ್-ಟೋಪಿ ಇತ್ಯಾದಿ ಧರಿಸಿ ವಾಕಿಂಗ್ ಹೊರಟೆವು. ಪೈಜಾಮದ ತುದಿ ಮಾಸಬಾರದು ಎಂದು ಜಿ.ಎಸ್.ಎಸ್. ಚಪ್ಪಲಿಗೆ ತಾಗದಂತೆ ತಮ್ಮ ಬೆಳ್ಳನೆಯ ಪೈಜಾಮವನ್ನು ಸ್ವಲ್ಪ$ಮೇಲಕ್ಕೆ ಎತ್ತಿ ಕಟ್ಟುತ್ತಿದ್ದರು. ಮತ್ತೆ ಚೊಕ್ಕವಾಗಿ ಪಾಲಿಷ್ ಮಾಡಿದ ಮಿರಿಮಿರಿ ಕಪ್ಪಿನ ಪಾದರಕ್ಷೆಗಳು. ಎತ್ತಂಗಡಿ ಮೂಲಕ ನಾವು ಕೆಳಗೆ ಬಂದು ಹಸಿರು ಮರಗಳ ಕೆಳಗೆ ಅದೆಷ್ಟೋ ಉದ್ದ ನಡೆದದ್ದಾಯಿತು. “”ಎಲ್ಲಿ ಸರ್, ನಿಮ್ಮ ಸೂರ್ಯ? ಕಾಣುತ್ತಲೇ ಇಲ್ಲ” ಎಂದೆ. “”ಚಳಿಗೆ ಏಳ್ಳೋದು ಸ್ವಲ್ಪ$ಲೇಟಾಗಿರಬಹುದು” ಎಂದರು.
ಬಿಳಿಗೂದಲ ಜಾಂಬವಂತರಂತೆ ಮೈತುಂಬ ಶಾಲು ಸುತ್ತಿಕೊಂಡು ನಾವು ಬೆಳಗಿನ ವಾಕ್ ಮುಗಿಸಿ ದಾರಿಯಲ್ಲಿ ಸೂರ್ಯೋದಯವನ್ನೂ ನೋಡಿ ಪುಳಕಿತರಾಗಿ ವಸತಿಗೆ ಹಿಂದಿರುಗಿದ್ದಾಯಿತು. ಬಿಸಿಬಿಸಿ ಕಾಫಿ ತರಿಸಿ ಕುಡಿದು ಮತ್ತೆ ಅದೂಇದೂ ಮಾತು. ಯಾವು ಯಾವುದೋ ಪ್ರಕರಣಗಳ ನೆನಪು. ಮಧ್ಯೆ ಇದ್ದಕ್ಕಿದ್ದಂತೆ ಜಿಎಸ್‌ಎಸ್ ಮಾತು ನಿಲ್ಲಿಸಿ ಹೊಸದಾಗಿ ಒಮ್ಮೆಗೇ ಜ್ಞಾನೋದಯವಾದಂತೆ “”ನನಗೆ ಯಾಕೋ ಹೊಟ್ಟೆ ಹಪಹಪ ಅನ್ನುತ್ತಿದ್ದೇರಿ. ನಿಮಗೆ ಹಸಿವಾಗುತ್ತಿಲ್ಲವಾ?” ಎಂದರು.
“”ಆಗುತ್ತಿದೆ ಸರ್, ನೆನ್ನೆ ಸಾಂಬಾರ್ ರುಚಿ ಯಾಕೋ ನನಗೆ ಹಿಡಿಸಲಿಲ್ಲ… ಊಟ ಸ್ವಲ್ಪ$ಕಮ್ಮಿಯೇ ಆಯಿತು”“”ತಿಂಡಿ ಏನಿದೆ ನೋಡಿ ಮತ್ತೆ”
ನಾನು ಮೆನೂ ನೋಡಿದೆ. “”ಸರ್! ದೋಸೆ ಸಿಗುತ್ತೆ. ಆರ್ಡರ್ ಮಾಡಲಾ?”
“”ಮಾಡಿ ಮಾಡಿ ಕೇರಳದಲ್ಲಿ ದೋಸೆ ತುಂಬ ಚೆನ್ನಾಗಿರತ್ತೆ. ಹೋದ ಬಾರಿ ನಾನು ಕಣವಿ ಬಂದಾಗ ದೋಸೆಯನ್ನೇ ತಗೊಂಡಿದ್ದೆವು”
“”ನಾನು ರೆಸ್ಟೋರೆಂಟಿಗೆ ಫೋನ್ ಹಚ್ಚಬೇಕು”.
“”ಬೆಲೆ ಸ್ವಲ್ಪ$ ನೋಡಿರಪ್ಪಾ” ಎಂದರು ಜಿಎಸ್ಸೆಸ್.
ದೋಸೆಯ ಮುಂದೆ ನೂರೈವತ್ತು ರೂಪಾಯಿ ಎಂದು ನಮೂದಾಗಿತ್ತು. “”ಸರ್, ಒಂದು ದೋಸೆಗೆ ನೂರೈವತ್ತು”
ಜಿಎಸ್‌ಎಸ್ ಹಾರಿಬಿದ್ದರು! “”ಏನು ಏನು, ಒಂದು ದೋಸೆಗೆ ನೂರೈವತ್ತಾ? ನಮ್ಮ ವಿದ್ಯಾರ್ಥಿಭವನದಲ್ಲಿ ಇದರ ಅರ್ಧ ಬೆಲೆಯೂ ಇಲ್ಲವಲ್ಲರೀ. ಅನ್ಯಾಯ. ಪರಮ ಅನ್ಯಾಯ” ಎಂದು ಬುಸುಗುಟ್ಟಿದರು.
“”ಸರ್ ಸರ್ಕಾರದ ಆತಿಥ್ಯ. ಎರಡು ದೋಸೆ ಖಂಡಿತ ಆಳುವ ಸರ್ಕಾರಕ್ಕೆ ಭಾರವಾಗುವುದಿಲ್ಲ”
“”ಆದರೂ ನೂರೈವತ್ತು ರೂಪಾಯಿ ಕೊಟ್ಟು ದೋಸೆ ತಿನ್ನುವುದು ಅಂದರೆ ಹೇಗಪ್ಪಾ? ನೀವು ದೋಸೆ ತಗೊಳ್ಳಿ. ನನಗೆ ಇಡ್ಲಿ ಸಾಕು”
ಇದು ನಮ್ಮ ಜಿಎಸ್‌ಎಸ್. ಹಣ ಯಾರದ್ದೇ ಇರಲಿ. ದುಂದು ವೆಚ್ಚ ಸಲ್ಲದು ಎನ್ನುವುದು ಅವರ ತಣ್ತೀ .
ಗುರುಗಳಿಗೆ ಇಡ್ಲಿ ತಿನ್ನಿಸಿ ನಾನು ದೋಸೆ ಹೇಗೆ ತಿನ್ನೋದು?
“”ಎರಡು ಪ್ಲೇಟ್ ಇಡ್ಲಿ-ವಡೆ, ಎರಡು ಕಾಫಿ” ಎಂದು ಆರ್ಡರ್ ಮಾಡಿ ತಿಂಡಿಯ ನಿರೀಕ್ಷೆಯಲ್ಲಿ ಇಬ್ಬರೂ ಮಾತಿಲ್ಲದೆ ಕುಳಿತೆವು. “ಅನ್ನದೇವರಿಗಿಂತ ಇನ್ನು ದೇವರು ಇಲ್ಲ’ ಎಂದು ಬೇಂದ್ರೆಯವರು ಅಪ್ಪಣೆ ಕೊಡಿಸಿಲ್ಲವೆ? ಇಡ್ಲಿಯನ್ನು ನೆನೆಯುತ್ತ ನನ್ನ ಬಾಯಂತೂ ಮೆಲ್ಲಗೆ ರಸಲಿಪ್ತವಾಗುತ್ತಿತ್ತು. ಜಿಎಸ್‌ಎಸ್ ಅರೆಗಣ್ಣು ಮಾಡಿಕೊಂಡು ಏನೋ ಲೋಕಾತೀತವಾದುದನ್ನು ಧ್ಯಾನಿಸುತ್ತ ತುಟಿಬಿಗಿದು ಕುಳಿತಿದ್ದರು.
ಪಾಪ, ಮೇಷ್ಟ್ರಿಗೆ ದೋಸೆ ಇಷ್ಟ. ಅವರೂ ಬರೀ ಇಡ್ಲಿ ತಿನ್ನುವಂತಾಯಿತಲ್ಲ ಎಂದು ನನ್ನ ಯೋಚನೆ.
ಹೆಚ್ಚು ಎಣ್ಣೆ ಪದಾರ್ಥ ತಿನ್ನಬಾರದೆಂದು ವೈದ್ಯರು ಅವರಿಗೆ ಹೇಳಿದ್ದರು. ಹೋಟೆಲ್-ಗೀಟೆಲ್‌ನಲ್ಲಿಯಂತೂ ತಿನ್ನಲೇ ಬಾರದು ಎಂಬುದು ಅವರ ಪತ್ನಿ ರುದ್ರಾಣಿಯವರ ತಣ್ತೀ. ಜಿಎಸ್‌ಎಸ್‌ಗೆ ಯಾವಾಗಲಾದರೂ ದೋಸೆ ತಿನ್ನಬೇಕೆಂಬ ಆಸೆ ಉಂಟಾದರೆ ಬೆಳಗಾಬೆಳಿಗ್ಗೆ ಅವರಿಂದ ಫೋನ್ ಬರುತ್ತ¤ ಇತ್ತು. ಫೋನಲ್ಲಿ ಅವರು ಎರಡು ಅಥವಾ ಮೂರು ವಾಕ್ಯಗಳಿಗಿಂತ ಹೆಚ್ಚು ಯಾವತ್ತೂ ಮಾತಾಡುತ್ತಿರಲಿಲ್ಲ. “ಮೂರ್ತಿಯವರೇ, ಗಾಂಧಿಬಜಾರಲ್ಲಿ ಸ್ವಲ್ಪ ಕೆಲಸವಿದೆ. ಬರುತ್ತೀರಾ? ಹೋಗಿ ಬರೋಣ?’
“”ಪುಸ್ತಕದ ಅಂಗಡಿಗಾ ಸರ್?”
“”ಹಾಂ… ಬೇಗ ಬನ್ನಿ!”
ಫೋನ್ ಕಟ್! ಫೋನ್‌ನಲ್ಲಿ ಹೆಚ್ಚು ಮಾತಾಡುವುದು ರಾಷ್ಟ್ರೀಯ ಅಪರಾಧ ಎಂಬುದು ನಮ್ಮ ಮೇಷ್ಟ್ರ ನಂಬಿಕೆಯಾಗಿತ್ತು. ನಾನು ಕಾರ್ ತಗೊಂಡು ಜಿಎಸ್‌ಎಸ್ ಮನೆಗೆ ಹೋಗುತ್ತಿದ್ದೆ.
“”ನಾವು ಸ್ವಲ್ಪ ಗಾಂಧೀಬಜಾರಿಗೆ ಹೋಗಿಬರ್ತೀವಿ” ಎಂದು ಒಳಕ್ಕೆ ಕೇಳುವಂತೆ ಕೂಗಿ ಜಿಎಸ್‌ಎಸ್ ಕಾರು ಏರುತ್ತಿದ್ದರು. ಮಂದಗಮನದಲ್ಲಿ ನಮ್ಮ ಕಾರುಯಾನ ಪ್ರಾರಂಭವಾಗುತ್ತಿತ್ತು. “”ಆಹಾ! ಕಾರು ಓಡಿಸೋದರಲ್ಲಿ ನಿಮ್ಮನ್ನು ಬಿಟ್ಟರೆ ಇಲ್ಲ ಕಣ್ರೀ” ಎಂದು ಜಿಎಸೆಸ್ ತಾರೀಫು ಮಾಡುತ್ತಿದ್ದರು. (ನಿನ್ನ ಕಾರನ್ನು ಸೈಕಲ್ ಸವಾರರು ಓವರ್ ಟೇಕ್ ಮಾಡುತ್ತಾರೆ ಎನ್ನುವುದು ನನ್ನ ಸಹಯಾತ್ರಿ ಬಿ. ಆರ್. ಲಕ್ಷ್ಮಣರಾವ್ ಉವಾಚ!). ನಾನು ಅಂಕಿತ ಪುಸ್ತಕದಂಗಡಿಯ ಕಡೆ ಕಾರು ತಿರುಗಿಸಿದರೆ ಜಿಎಸೆಸ್, “”ಆ ಕಡೆ ಎಲ್ಲಿಗೆ ಹೋಗುತ್ತೀರಿ? ವಿದ್ಯಾರ್ಥಿ ಭವನಕ್ಕೆ ಹೋಗಿರಪ್ಪಾ!” ಎಂದು ರೇಗುತ್ತಿದ್ದರು. “”ಸರ್, ನೀವು ಪುಸ್ತಕದ ಅಂಗಡಿ ಎಂದು ಹೇಳಿದಿರಲ್ಲ ?” “”ಎಣ್ಣೆ ಪದಾರ್ಥ ತಿನ್ನಬೇಡಿ ಅನ್ನುತ್ತಾರೆ ಮನೆಯವರು. ಸುಮ್ಮನೆ ಅವರಿಗೆ ಯಾಕೆ ಬೇಜಾರು ಅಲ್ಲವಾ”. ಜಿಎಸ್‌ಎಸ್ ಪಂಪನ ಕಾವ್ಯದ ವಿಶ್ಲೇಷಣೆಯ ಗಂಭೀರ ದಾಟಿಯಲ್ಲೇ ನುಡಿದರು. ಅವರು ಸಾಮಾನ್ಯವಾಗಿ ಸಣ್ಣಪುಟ್ಟದ್ದಕ್ಕೆಲ್ಲ ನಗುತ್ತಿರಲಿಲ್ಲ. ಸದಾ ರಾಜಗಾಂಭೀರ್ಯದ ಅಂಚಿನಲ್ಲೇ ಸುಳಿದಾಡುತ್ತಿದ್ದರು. ರುದ್ರಾಣಿ ಅವರಿಗೆ ತಮಾಷೆ ಮಾಡುತ್ತಿದ್ದರು. “”ಕ್ಯಾಮರಾದೋನು ಫೋಟೋ ತೆಗೆಯುತ್ತಿದ್ದಾನೆ. ಈಗಲಾದರೂ ಸ್ವಲ್ಪ ನಗಬಾರದೆ?”
ಕ್ಯಾಮರಕ್ಕೆ ಯಾವಾಗಲೂ ನಗದ ಇಬ್ಬರು ವ್ಯಕ್ತಿಗಳು ನನಗೆ ಆಪ್ತರು. ಒಬ್ಬರು ನನ್ನ ಮೇಷ್ಟ್ರು ಜಿಎಸ್ಸೆಸ್, ಇನ್ನೊಬ್ಬರು ಗೆಳೆಯ ಬಿಆರ್‌ಎಲ್!
ವಿದ್ಯಾರ್ಥಿಭವನದಲ್ಲಿ ದೋಸೆ ಮುಗಿಸಿದ್ದಾಯಿತು. ಜೊತೆಗೆ ಹಿರಿಯರಾದ ಜಿಎಸ್‌ಎಸ್ ಇದ್ದರಲ್ಲ. ಸಾಹಿತ್ಯಪ್ರಿಯರಾದ ಹೊಟೇಲಿನ ಯಜಮಾನರಿಂದ ನಮಗೆ ರಾಜೋಪಚಾರ! ತಿಂಡಿ ಮುಗಿದ ಮೇಲೆ ಬಿಲ್ಲು ಬಂತು. ನಾನು ತೆಗೆದುಕೊಳ್ಳುವ ಹುಸಿಯತ್ನ ಮಾಡಿದೆ.
“”ಹಿರಿಯರು ಇರುವಾಗ ಚಿಕ್ಕವರು ಬಿಲ್ಲೆತ್ತುವುದು ಶ್ರೇಯಸ್ಕರವಲ್ಲ ” ಎಂದು ಜಿಎಸೆಸ್ ರೇಗಿದರು.
ಎಂದೂ ಅವರು ನಾನು ಹೊಟೇಲಲ್ಲಿ ಬಿಲ್ಲೆತ್ತುವುದಕ್ಕೆ ಬಿಡಲಿಲ್ಲ. ಕೊನೆಯವರೆಗೂ ತಮ್ಮ ಬಿಲ್ಲೋಜತ್ವವನ್ನು ಮುಕ್ಕಾಗದಂತೆ ಉಳಿಸಿಕೊಂಡರು! ಎಚ್ . ಎಸ್ . ವೆಂಕಟೇಶಮೂರ್ತಿ