Advertisement

Scheme: ದಂಡ ಸಹಿತ ಪಾನ್‌-ಆಧಾರ್‌ ಜೋಡಿಸಿದವರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ!

01:57 AM Sep 17, 2024 | Team Udayavani |

ಸುಳ್ಯ: ಪಾನ್‌(ಪರ್ಮನೆಂಟ್‌ ಅಕೌಂಟ್‌ ನಂಬರ್‌)ಗೆ ಕೊನೆಯ ಹಂತದಲ್ಲಿ ದಂಡ ಸಹಿತವಾಗಿ ಆಧಾರ್‌ ಜೋಡಣೆ ಮಾಡಿಸಿಕೊಂಡ ಬಡವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರೀಗ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಸರಕಾರದ ಕೆಲವು ಯೋಜನೆಗಳ ಫ‌ಲಾನುಭವಿ ಪಟ್ಟಿಯಿಂದ ಹೊರಗುಳಿದಿದ್ದಾರೆ!

Advertisement

ಪಾನ್‌ ಕಾರ್ಡ್‌ಗೆ ವಿಳಂಬವಾಗಿ ಆಧಾರ್‌ ಲಿಂಕ್‌ ಜೋಡಿಸಿದ ಸಂದರ್ಭದಲ್ಲಿ ದಂಡದ ರೂಪದಲ್ಲಿ ಪಾವತಿಸಲಾದ 1 ಸಾ.ರೂ. ಆದಾಯ ತೆರಿಗೆ ಇಲಾಖೆಗೆ ಪಾವತಿಯಾಗಿದ್ದು, ಈ ಕಾರಣದಿಂದ ಅವರು ಈಗ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರೂ ಇದ್ದಾರೆ. ಅಂಥವರು ಸರಕಾರದ ವಿವಿಧ ಸವಲತ್ತುಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಗೃಹಲಕ್ಷ್ಮಿಯಿಂದ ಹೊರಕ್ಕೆ
ಈ ರೀತಿ ಆದಾಯ ತೆರಿಗೆದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಡ ಮಹಿಳೆಯರಿಗೆ ಈಗ ರಾಜ್ಯ ಸರಕಾರದ ಗೃಹಲಕ್ಷ್ಮಿ  ಯೋಜನೆಯ ಹಣ ಬರುತ್ತಿಲ್ಲ. ಜತೆಗೆ ಮನೆ ಕಟ್ಟಲು ಸಾಲ ಪಡೆಯುವ ಉದ್ದೇಶಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಸಿದವರೂ ಗೃಹಲಕ್ಷಿ$¾ ಫ‌ಲಾನುಭವವಿಗಳ ಪಟ್ಟಿಯಿಂದ ಹೊರಗಿದ್ದಾರೆ ಎನ್ನಲಾಗಿದ್ದು, ಇದು ಇಲಾಖೆ ಅಧಿಕಾರಿಗಳಿಗೂ ತಲೆ ನೋವು ತರುತ್ತಿದೆ.

ಮನವಿ ಸ್ವೀಕಾರ
ಈ ರೀತಿಯ ಕಾರಣಗಳಿಂದ ಗೃಹಲಕ್ಷಿ$¾ಯಿಂದ ವಂಚಿತರಾದರಿಗೆ ಯೋಜನೆಯನ್ನು ಮುಂದುವರಿಸಲು ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು ಮನವಿ ಪತ್ರಗಳನ್ನು ಪಡೆದುಕೊಳ್ಳಲು ಆರಂಭಿಸಿದ್ದಾರೆ. ಅಂತಹವರು ಐಟಿ/ಜಿಎಸ್‌ಟಿ ಪಾವತಿದಾರರಲ್ಲ ಎಂಬ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ವಿವರ
ಗೃಹಲಕ್ಷ್ಮಿ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ 337 ಮಂದಿ ಐಟಿ ಪಾವತಿದಾರರು ಹಾಗೂ 226 ಮಂದಿ ಜಿಎಸ್‌ಟಿ ಪಾವತಿದಾರರು ಎಂದು ದಾಖಲಾಗಿದೆ. ಬೆಳ್ತಂಗಡಿಯಲ್ಲಿ 716 ಐಟಿ, 613 ಜಿಎಸ್‌ಟಿ, ಕಡಬದಲ್ಲಿ 457 ಐಟಿ, 180 ಜಿಎಸ್‌ಟಿ, ಮಂಗಳೂರಿನಲ್ಲಿ 1,470 ಐಟಿ, 976 ಜಿಎಸ್‌ಟಿ, ಮೂಡುಬಿದಿರೆಯಲ್ಲಿ 228 ಐಟಿ, 75 ಜಿಎಸ್‌ಟಿ, ಮೂಲ್ಕಿಯಲ್ಲಿ 180 ಐಟಿ, 93 ಜಿಎಸ್‌ಟಿ, ಪುತ್ತೂರಿನಲ್ಲಿ 586 ಐಟಿ, 436 ಜಿಎಸ್‌ಟಿ, ಉಳ್ಳಾಲದಲ್ಲಿ 571 ಮಂದಿ ಐಟಿ, 347 ಮಂದಿ ಜಿಎಸ್‌ಟಿ ಪಾವತಿದಾರರು ಎಂದು ಒಟ್ಟು ಜಿಲ್ಲೆಯಲ್ಲಿ 8,503 ಮಂದಿಯ ಅರ್ಜಿ ತಿರಸ್ಕೃತಗೊಂಡಿದೆ. ಸುಳ್ಯ ತಾಲೂಕಿನಿಂದ 150ಕ್ಕೂ ಅಧಿಕ ಮಂದಿ ತಾವು ಐಟಿ/ಜಿಎಸ್‌ಟಿ ಪಾವತಿದಾರರಲ್ಲ ಎಂಬುದಾಗಿ ಮನವಿ ಹಾಗೂ ಇತರ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಉಡುಪಿ ಜಿಲ್ಲೆ ಮಾಹಿತಿ
ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವ 4,610 ಮಂದಿ ಆದಾಯ ತೆರಿಗೆ ಪಾವತಿದಾರರು ಕಂಡು ಬಂದಿದ್ದಾರೆ. ಇದರಲ್ಲಿ ಕೆಲವರಿಗೆ ಗೃಹಲಕ್ಷ್ಮಿ ಹಣ ಬರುವುದು ನಿಂತಿದೆ. 452 ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದರೂ ನೇರವಾಗಿ ಅವರಿಗೆ ಸಂಬಂಧಿಸಿರದ ಕಾರಣಕ್ಕೆ ಈ ಬಗ್ಗೆ ಲಿಖೀತ ದೃಢೀಕರಣ ನೀಡಿದ್ದಾರೆ. ಆ ದೃಢೀಕರಣ ಪತ್ರವನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುವವರಿಗೆ ತಾನಾಗಿಯೇ ಸೌಲಭ್ಯ ಕಡಿತವಾಗುತ್ತದೆ. ಗೃಹಲಕ್ಷ್ಮಿ ಸಾಫ್ಟ್ ವೇರ್‌ ರೂಪಿಸುವಾಗಲೇ ಪಾನ್‌ ಕಾರ್ಡ್‌-ಆಧಾರ್‌ ಕಾರ್ಡ್‌, ಆದಾಯ ತೆರಿಗೆ ಪಾವತಿ ಇತ್ಯಾದಿ ಲಿಂಕ್‌ ಆಗಿರುವುದರಿಂದ ಅವರಿಗೆ ಸೌಲಭ್ಯ ಹೋಗುವುದಿಲ್ಲ ಎಂದು ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಗೃಹಲಕ್ಷ್ಮಿಯೋಜನೆಗೆ ಸಂಬಂಧಿಸಿ ಹಲವರಿಗೆ ಆದಾಯ ತೆರಿಗೆ ಪಾವತಿದಾರರು ಎಂಬುದಾಗಿ ಹಣ ಬಂದಿಲ್ಲ. ಆದರೆ ಪರಿಶೀಲನೆ ವೇಳೆ ಕೆಲವರು ಆದಾಯ ತೆರಿಗೆ ಪಾವತಿದಾರರಲ್ಲ ಎಂಬುದು ತಿಳಿದು ಬಂದಿದೆ. ದಂಡ ಸಹಿತ ಪಾನ್‌ಗೆ ಆಧಾರ್‌ ಜೋಡಣೆ ಮಾಡಿಸಿರುವವರನ್ನೂ ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರಿಸಿರುವುದು ಕಂಡುಬಂದಿದೆ. ಇದು ಸರಿಯಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಸಮಸ್ಯೆ ಶೀಘ್ರ ಪರಿಹಾರ ಕಾಣುವ ನಿರೀಕ್ಷೆ ಇದೆ.”
– ಭರತ್‌ ಮುಂಡೋಡಿ, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಅನುಷ್ಠಾನ ಸಮಿತಿ ದಕ್ಷಿಣ ಕನ್ನಡ

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.