Advertisement

ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಅನುದಾನ ಇತರೆಡೆ ಬಳಕೆ!

12:19 PM Jan 14, 2020 | Suhan S |

ಚನ್ನಗಿರಿ: ರಾಜ್ಯ ಸರ್ಕಾರ ಪರಿಶಿಷ್ಟರ ಕಾಲೋನಿಗಳ ಅಭಿವೃದ್ಧಿಗೆ ಹಲವಾರು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದ್ದರೂ, ನವಗ್ರಾಮ ಯೋಜನೆಗೆ ಆಯ್ಕೆಯಾದ ಬಸವಾಪುರ ಗ್ರಾಮದಲ್ಲಿ ಪರಿಶಿಷ್ಟ ವರ್ಗವಲ್ಲದ ಕಾಲೋನಿಯಲ್ಲಿ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು ಪರಿಶಿಷ್ಟ ಪಂಗಡ ಇಲಾಖೆ ಹಣ ದುರ್ಬಳಕೆಗೆ ಹಿಡಿದ ಕೈಗನ್ನಡಿಯಾಗಿದೆ.

Advertisement

ಹೌದು, ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ತವರು ಗ್ರಾಪಂ ಚನ್ನೇಶಪುರ ವ್ಯಾಪ್ತಿಯಲ್ಲಿ ಬರುವ ಬಸವಾಪುರ ಗ್ರಾಮದಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಗ್ರಾಮದ ಪರಿಶಿಷ್ಟ ವರ್ಗದ ಕಾಲೋನಿಗಳ ಅಭಿವೃದ್ಧಿಗೆ 50 ಲಕ್ಷ ರೂ. ಮಂಜೂರಾಗಿತ್ತು. ಮಂಜೂರು ಆದ ಅನುದಾನದಲ್ಲಿ ಸುಮಾರು 25 ಲಕ್ಷ ರೂ. ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಈಗ ಕೇಳಿ ಬಂದಿದೆ.

ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಹಾಲಸ್ವಾಮಿ ದೇವಸ್ಥಾನದವರೆಗೆ ರಸ್ತೆಯ ಎರಡು ಭಾಗದಲ್ಲಿ ಬಾಕ್ಸ್‌ ಚರಂಡಿ ನಿರ್ಮಿಸಿದ್ದು. ಈ ಕಾಲೋನಿಯಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಒಂದು ಮನೆ ಕೂಡ ಇಲ್ಲ. 50 ಲಕ್ಷ ರೂ. ಅನುದಾನದಲ್ಲಿ 25 ಲಕ್ಷ ರೂ.ಹಣವನ್ನು ಇಲ್ಲಿ ಖರ್ಚು ಮಾಡಲಾಗಿದೆ. ಉಳಿದ 25 ಲಕ್ಷ ರೂ. ಅನುದಾನವನ್ನು ಪರಿಶಿಷ್ಟ ವರ್ಗದ ಜನ ವಾಸವಾಗಿರುವ ಕಾಲೋನಿಗಳ ಚರಂಡಿಗಳ ಅಭಿವೃದ್ಧಿಗೆ ಬಳಸಲಾಗಿದೆ.

ಪರಿಶಿಷ್ಟ ವರ್ಗದ ಕಾಲೋನಿಗೆ ಬೇಕಿವೆ ಸೌಲಭ್ಯಗಳು: ಬಸವಾಪುರ ಗ್ರಾಮದಲ್ಲಿ ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನೂ ಕೂಡ ಈ ಗ್ರಾಮಕ್ಕೆ ಸಂಚಾರದ ವ್ಯವಸ್ಥೆಯಿಲ್ಲ, ಕೆಲ ರಸ್ತೆಗಳು ಡಾಂಬರೀಕರಣ ಅಥವಾ ಕಾಂಕ್ರೀಟ್‌ ಭಾಗ್ಯ ಇಲ್ಲಿವರೆಗೂ ಕಂಡಿಲ್ಲ, ಇನ್ನು ಪರಿಶಿಷ್ಟರ ಕಾಲೋನಿಗಳಲ್ಲಿ ಮೂಲಭೂತ ಸಮಸ್ಯೆ ತಾಂಡವವಾಡುತ್ತಿವೆ. ಚರಂಡಿಗಳಿಲ್ಲದೆ ನೀರು ಸಂಗ್ರಹವಾಗಿ ರೋಗರುಜಿನಗಳು ಹರಡುತ್ತಿವೆ. ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಪ್ರತಿಷ್ಠಿತ ಕಾಲೋನಿ ಅಭಿವೃದ್ಧಿ ಪಡಿಸಿದ್ದು, ಪರಿಶಿಷ್ಟ ವರ್ಗಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಪರಿಶಿಷ್ಟರ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಇತರೆಡೆ ಬಳಸಿರುವುದು ಅಕ್ಷಮ್ಯ ಅಪರಾಧ. ತಕ್ಷಣ ಹಣ ದುರ್ಬಳಕೆ ಕುರಿತು ತನಿಖೆ ನಡೆಸಬೇಕು ಎಂಬುದು ಪರಿಶಿಷ್ಟ ವರ್ಗದ ನಿವಾಸಿಗಳ ಆಗ್ರಹವಾಗಿದೆ.

 

Advertisement

ಶಶೀಂದ್ರ ಸಿ.ಎಸ್‌. ಚನ್ನಗಿರಿ

Advertisement

Udayavani is now on Telegram. Click here to join our channel and stay updated with the latest news.

Next