Advertisement

ಪರಿಶಿಷ್ಟ ನೌಕರರ ಬಡ್ತಿ ಮೀಸಲಾತಿ ರದ್ದತಿಗೆ ಹುನ್ನಾರ

04:55 PM Jun 01, 2018 | Team Udayavani |

ಚಿತ್ರದುರ್ಗ: ಹಿಂಬಡ್ತಿ ತಪ್ಪಿಸಿ ಸಾಂವಿಧಾನಿಕ ಹಕ್ಕು ರಕ್ಷಿಸುವಂತೆ ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿ ಒಕ್ಕೂಟ, ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ನಿವೃತ್ತ
ನೌಕರರ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಗುರುವಾರ ಧರಣಿ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಕೃಷ್ಣಮೂರ್ತಿಗೆ ಮನವಿ ಸಲ್ಲಿಸಲಾಯಿತು.

Advertisement

ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ. ಕುಮಾರ್‌ ಮಾತನಾಡಿ, ಸುಪ್ರೀಂ ಕೋರ್ಟ್‌ ತೀರ್ಪು ಮತ್ತು ಅದಕ್ಕೆ ಅನುಗುಣವಾದ ಸರ್ಕಾರಿ ಆದೇಶವನ್ನು ಅನೇಕ ಇಲಾಖೆಗಳಲ್ಲಿ ಗಾಳಿಗೆ ತೂರಲಾಗಿದೆ. ಇದರಿಂದ ಪರಿಶಿಷ್ಟ
ಜಾತಿ/ಪಂಗಡದ ನೌಕರರು ಹಿಂಬಡ್ತಿ ಪಡೆಯುವಂತಾಗಿದೆ. ಮುಂಬಡ್ತಿ ಮೀಸಲಾತಿ ನಿಯಮವನ್ನು ಯಾರೂ ರದ್ದುಪಡಿಸಿಲ್ಲ. ಎಲ್ಲಾ ಹಂತಗಳ ಹುದ್ದೆಗಳಲ್ಲಿ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಶೇ.15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3 ಕ್ಕಿಂತ ಅಧಿಕ ಪ್ರಮಾಣದಲ್ಲಿ ಇರಬಾರದೆಂಬ ಆದೇಶವಿದೆ. ಹೀಗಿದ್ದರೂ ವಿವಿಧ ಇಲಾಖೆಗಳ
ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮುಂಬಡ್ತಿ ಮೀಸಲಾತಿಯನ್ನೇ ರದ್ದುಪಡಿಸುವ ಕೆಲಸಕ್ಕೆ ಕೈಹಾಕಿರುವುದರಿಂದ ಎಸ್‌ಸಿ, ಎಸ್‌ಟಿ ನೌಕರರ ಹಕ್ಕನ್ನೇ ಕಸಿದುಕೊಂಡಂತಾಗಿದೆ ಎಂದು ದೂರಿದರು.

ದೌರ್ಜನ್ಯ ತಡೆ ಕಾಯ್ದೆಯನ್ನು ಸಡಿಲಗೊಳಿಸಿರುವುದರಿಂದ ಅನಾದಿ ಕಾಲದಿಂದಲೂ ಶೋಷಣೆ, ಸಾಮಾಜಿಕ ಬಹಿಷ್ಕಾರ ಅನುಭವಿಸಿಕೊಂಡು ಬರುತ್ತಿರುವ ಎಸ್‌ಸಿ, ಎಸ್‌ಟಿ ಸಮುದಾಯದವರು ದೌರ್ಜನ್ಯಗಳನ್ನು ಸಹಿಸಿಕೊಂಡು ಇರಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ದೌರ್ಜನ್ಯ ತಡೆ ಕಾಯ್ದೆಯನ್ನು ಬಿಗಿಗೊಳಿಸಬೇಕು ಎಂದು
ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಮುರುಘರಾಜೇಂದ್ರ ಒಡೆಯರ್‌ ಮಾತನಾಡಿ, ಪರಿಶಿಷ್ಟ ಜಾತಿ
ಮತ್ತು ಪಂಗಡದ ಮುಂಬಡ್ತಿ ಮಸೂದೆ 2017ಕ್ಕೆ ರಾಷ್ಟ್ರಪತಿಗಳು ಶೀಘ್ರವೇ ಅಂಕಿತ ಹಾಕಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಎಸ್‌ಸಿ, ಎಸ್‌ಟಿ ವರ್ಗದ ಮೇಲೆ ನಡೆಯುವ ದೌರ್ಜನ್ಯ ತಡೆ ಕಾಯ್ದೆಯನ್ನು
ಯಾರೂ ಸಡಿಲಗೊಳಿಸದ ರೀತಿಯಲ್ಲಿ ಹೊಸ ಕಾನೂನು ರಚಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿರುವ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಖಾಸಗಿ ವಲಯದಲ್ಲಿ ಎಸ್‌ಸಿ, ಎಸ್‌ಟಿ ಮತ್ತು
ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಸಂಘರ್ಷ ಸಮಿತಿ ಕಾರ್ಯದರ್ಶಿ ಚಿಕ್ಕಣ್ಣ, ಹೊಳಿಯಪ್ಪ, ರಮೇಶ್‌, ಮಂಜೇಶ್‌, ಕೆ. ವಿಶ್ವಾನಂದ, ಶಂಕರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next