ಮಧುಗಿರಿ: ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮಧುಗಿರಿ ವಿದ್ಯಾಸಂಸ್ಥೆ ಖಜಾಂಚಿ ಎಂ.ಎಸ್. ಧರ್ಮವೀರ್ ನಿರ್ಮಾಣದಲ್ಲಿ ತಯಾರಾದ ಸೀನಿಕ್ ಬ್ಯೂಟಿ ಆಫ್ ಮಧುಗಿರಿ ಡ್ನೂರಿಂಗ್ ಕೋವಿಡ್-19 ಲಾಕ್‌ಡೌನ್‌ಗೆ ಸಂಬಂಧಿಸಿದ 9 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ಉಪವಿಭಾಗಾಧಿಕಾರಿ ಡಾ. ನಂದಿನಿದೇವಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ವಿಶ್ವವಿಖ್ಯಾತ ಏಕಶಿಲಾ ಬೆಟ್ಟ ಹೊಂದಿರುವ ಅಪಾರ ನಿಗೂಢ ಇತಿಹಾಸವನ್ನು ಮಧುಗಿರಿ ಹೊಂದಿದೆ. ಇದರಲ್ಲಿ ಪುರಾತನ ಚೋಳೇನಹಳ್ಳಿ, ಸಿದ್ದಾಪುರ ಕೆರೆ, ನೂತನ ಬೈಪಾಸ್ ರಸ್ತೆ, ಬೆಟ್ಟದ ಮೇಲಿನ ಸೌಂದರ್ಯ, ಐತಿ ಹಾಸಿಕ ದಂಡಿನ ಮಾರಮ್ಮ, ಮಲ್ಲೇಶ್ವರ, ವೆಂಕಟರಮಣ ಸ್ವಾಮಿ ದೇಗುಲ,
ಪ್ರಮುಖ ರಸ್ತೆ, ಹೈಕೋರ್ಟ್‌ನಂತಹ ನ್ಯಾಯಾಲಯ ಸಂಕೀರ್ಣ, ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ, ಪೊಲೀಸ್‌ಠಾಣೆ, ಬ್ರಿಟಿಷರ ಕಾಲದ ಶಾಲೆ, ಕೋದಂಡರಾಮ ದೇಗುಲ, ಕ್ರೀಡಾಂಗಣ, ಆಸ್ಪತ್ರೆ ಹಾಗೂ ವಿವಿಧ ಸರ್ಕಾರಿ ಕಚೇರಿಗಳು ಸೇರಿದಂತೆ ಮಧುಗಿರಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಡ್ರೋಣ್ ಕ್ಯಾಮೆರಾ ಮೂಲಕ ಪತ್ರಿಕಾ ಛಾಯಾ ಗ್ರಾಹಕ ಸಿದ್ದರಾಜು ಕೈಚಳಕದಲ್ಲಿ ಸೌಂದರ್ಯದ ಸೊಬಗನ್ನು ಕಾಣಬಹುದಾಗಿದ್ದು
ಮನಸ್ಸಿಗೆ ಮುದ ನೀಡಲಿದೆ. ಈ ಸಾಕ್ಷ್ಯಚಿತ್ರದಿಂದ ಮಧುಗಿರಿಯ ಸೌಂದರ್ಯದ ಬಗ್ಗೆ ಹೆಮ್ಮೆ ಎನಿಸಿದೆ ಎಂದು ನಂದಿನಿ ದೇವಿ ತಿಳಿಸಿದರು. ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವ ಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ತಾಲೂಕು ಆಡಳಿತ ಸೂಚಿಸಿದಂತೆ ದಿನದ ಕಾರ್ಯಕ್ರಮಗಳು ನಡೆಯಲಿ.
ನಿಮ್ಮ ಆರೋಗ್ಯ ನಿಮ್ಮ ಕೈಲಿದ್ದು, ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ರೈತರ ಹಾಗೂ ಕೂಲಿ ಕಾರ್ಮಿಕರ ಕೆಲಸಗಳಿಗೆ ಯಾವುದೇ ಅಡ್ಡಿಯಿಲ್ಲ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದರು. ಮಧುಗಿರಿ ವಿದ್ಯಾ ಸಂಸ್ಥೆಯ ಎಂ.ಎಸ್. ಧರ್ಮವೀರ್, ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್, ಮಾಜಿ ಸದಸ್ಯ ಮೋಹನ್, ಶ್ರೀನಿವಾಸ್ ಇದ್ದರು.