ಬೆಂಗಳೂರು: ಮಹಿಳಾ ಪೇಯಿಂಗ್ ಗೆಸ್ಟ್(ಪಿಜಿ)ನ ಸ್ನಾನಗೃಹದಲ್ಲಿ ಯುವತಿಯರು ಸ್ನಾನ ಮಾಡುವ ದೃಶ್ಯಗಳನ್ನು ಮೊಬೈಲ್ ಇರಿಸಿ ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ನಿವಾಸಿ ಅಶೋಕ್(25) ಬಂಧಿತ.
ಆರೋಪಿ ನಗರದ ಖಾಸಗಿ ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಹೂಡಿಯತಿಗಳರಪಾಳ್ಯದ ಪುರುಷರ ಪಿಜಿಯಲ್ಲಿ ವಾಸವಾಗಿದ್ದಾನೆ. ಈ ಪಿಜಿಯ ಪಕ್ಕದಲ್ಲೇ ಮಹಿಳಾ ಪಿಜಿ ಇದೆ. ಜೂ.21ರಂದು ಯುವತಿಯೊಬ್ಬಳು ಸ್ನಾನಗೃಹದಲ್ಲಿ ಸ್ನಾನ ಮಾಡುವಾಗ ಯಾರೋ ವ್ಯಕ್ತಿ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಕೆ ಜೋರಾಗಿ ಕೂಗಿಕೊಂಡಾಗ ಪಿಜಿ ಮಹಿಳೆಯರು ಹಾಗೂ ಸ್ಥಳೀಯರು ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯ ಮೊಬೈಲ್ ಪಡೆದು ಪರಿಶೀಲಿಸಿದಾಗ ಮಹಿಳೆಯರು ಸ್ನಾನ ಮಾಡುವ ಏಳು ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಬಳಿಕ ಸ್ಥಳೀಯರು ಆರೋಪಿಗೆ ಧರ್ಮದೇಟು ಕೊಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿ ಕಳೆದ 3-4 ತಿಂಗಳಿಂದ ಯುವತಿಯರ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿಯುವ ಕೆಲಸ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಯಾವ ಉದ್ದೇಶಕ್ಕಾಗಿ ವಿಡಿಯೋ ಮಾಡುತ್ತಿದ್ದ? ಅವುಗಳ ಮಾರಾಟದ ಉದ್ದೇಶವಿದೆಯೇ? ಅಥವಾ ವೈಯಕ್ತಿಕವಾಗಿ, ಬ್ಲ್ಯಾಕ್‌ಮೇಲ್ ಮಾಡಲು ಬಳಸುತ್ತಿದ್ದನೇ? ಎಂಬುದು ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.