ಶಿವಮೊಗ್ಗ: ಒಂದು ಕಾಲದ ಮಿತ್ರರು, ಮಾಜಿ ಸಿಎಂ ಬಂಗಾರಪ್ಪ ಶಿಷ್ಯರಾಗಿದ್ದ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದಾರೆ. ಈ ಮೂಲಕ ಸಾಗರ ಕ್ಷೇತ್ರ ಈ ಬಾರಿ ಹೈವೋಲ್ಟೆಜ್ ಕಣವಾಗಿದೆ.
ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. 2013ರಲ್ಲಿ ಸೊರಬದಲ್ಲಿ ಶಾಸಕರಾಗಿದ್ದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪರಿಗೆ ಕ್ಷೇತ್ರ ಬಿಟ್ಟುಕೊಟ್ಟು 2018ರಲ್ಲಿ ಕಾಗೋಡು ತಿಮ್ಮಪ್ಪರಿಗೆ ಸೋಲುಣಿಸಿ ಶಾಸಕ ರಾಗಿದ್ದಾರೆ. ಒಂದು ಕಾಲದ ಸ್ನೇಹಿತರು ಈಗ ಮುಖಾಮುಖೀಯಾಗಿದ್ದು ಮಾತಿನ ಯುದ್ಧ ಜೋರಾಗಿದೆ. 2018ರಲ್ಲಿ ಕಾಗೋಡು ತಿಮ್ಮಪ್ಪರನ್ನು ಬೆಂಬಲಿಸಿದ್ದ ಬೇಳೂರಿಗೆ ಈ ಚುನಾವಣೆ ಯಲ್ಲಿ ಕಾಗೋಡು ತಿಮ್ಮಪ್ಪ ಬೆಂಬಲ ಸಿಕ್ಕಿದೆ. ಜೆಡಿಎಸ್ ಸೈಯದ್ ಜಾಕೀರ್ ಅವರಿಗೆ ಟಿಕೆಟ್ ನೀಡಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ತೀ.ನ. ಶ್ರೀನಿವಾಸ್ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ, ಅರಣ್ಯ ಸಾಗುವಳಿದಾರರ ಪರವಾಗಿ ನಿರಂತರವಾಗಿ ಹೋರಾಟ ಮಾಡಿದ್ದ ಅವರು ಜನರು ಕೈಹಿಡಿಯುವ ವಿಶ್ವಾಸದಲ್ಲಿದ್ದಾರೆ.
ಬಿಜೆಪಿ ಸೇರಿದ ಕಾಗೋಡು ಪುತ್ರಿ: ಟಿಕೆಟ್ ನಿರೀಕ್ಷೆಯಲ್ಲಿದ್ದ ಕಾಗೋಡು ತಿಮ್ಮಪ್ಪ ಪುತ್ರಿ ಡಾ| ರಾಜನಂದಿನಿ, ಇನ್ನೊಬ್ಬ ಮುಖಂಡ ಹೊನಗೋಡು ರತ್ನಾಕರ್ ಬಿಜೆಪಿ ಸರಿದ್ದು ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಕಾಗೋಡು ತಿಮ್ಮಪ್ಪ ಮಗಳ ನಡೆ ಖಂಡಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಿದರು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಚೇತನ್‌ರಾಜ್ ಕಣ್ಣೂರು ಕಾಂಗ್ರೆಸ್ ಸೇರುವ ಮೂಲಕ ಬಿಜೆಪಿಗೆ ಶಾಕ್ ನೀಡಿದರು. ಹಾಲಪ್ಪ ತಮ್ಮ ಅವ ಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳುತ್ತಿದ್ದಾರೆ. ಇತ್ತ ಬೇಳೂರು ನನ್ನದು ಹಣ ಬಲವಲ್ಲ. ಜನ ಬಲ ಎಂದು ಕೌಂಟರ್ ಕೊಡುತ್ತಿದ್ದಾರೆ. ಎಎಪಿ ಅಭ್ಯರ್ಥಿ ಕೆ.ದಿವಾಕರ್ ಎರಡೂ ಪಕ್ಷಗಳ ಮೇಲಿನ ಆರೋಪಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ಈಡಿಗರೇ ನಿರ್ಣಾಯಕ: ಕ್ಷೇತ್ರದಲ್ಲಿ ಈಡಿಗ ಮತಗಳೇ ನಿರ್ಣಾಯಕ. ಶೇ.50ಕ್ಕೂ ಅಧಿ ಕ ಇರುವ ಮತ ಗಳಿಕೆಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಎರಡನೇ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯದ ಮತ ಯಾರು ಪಡೆಯುತ್ತಾರೆ ಎಂಬುದರ ಮೇಲೆ ಗೆಲುವು ನಿಶ್ಚಯ ವಾಗಲಿದೆ. 2018ರಲ್ಲಿ ಹಾಲಪ್ಪ ಬ್ರಾಹ್ಮಣ ಮತ ಗಳಿಕೆ ಹೆಚ್ಚಿಸಿಕೊಂಡಿದ್ದರಿಂದ ಗೆಲುವು ಸಿಕ್ಕಿತ್ತು. ಮುಸ್ಲಿಂ ಮತಗಳು ಮೊದಲಿನಿಂದಲೂ ಕಾಂಗ್ರೆಸ್‌ಗೆ ಹೋಗುತ್ತವೆ ಎಂಬ ವಾದವನ್ನು ಜೆಡಿಎಸ್‌ನ ಮುಸ್ಲಿಂ ಅಭ್ಯರ್ಥಿ ಸುಳ್ಳು ಮಾಡುತ್ತಾರೆಯೇ ಎಂದು ಕಾದು ನೋಡಬೇಕಿದೆ. ಒಟ್ಟಾರೆ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೇ ನೇರ ಹಣಾಹಣಿ ಕಂಡುಬಂದಿದೆ. ಇಬ್ಬರೂ ಸ್ನೇಹಿತರ ನಡುವೆ ಆರೋಪ, ಪ್ರತ್ಯಾರೋಪ ಎಲ್ಲೆ ಮೀರಿದೆ.
~ ಶರತ್ ಭದ್ರಾವತಿ