Advertisement

ಕೋವಿಡ್ 19 ವೈರಸ್ ಪರಿಹಾರ:7 SCDCC ಬ್ಯಾಂಕ್‌ನಿಂದ 1 ಕೋ.ರೂ ದೇಣಿಗೆ

01:14 PM Mar 27, 2020 | Hari Prasad |

ಮಂಗಳೂರು: ಕೋವಿಡ್ 19 ವೈರಸ್ ವಿರುದ್ಧ ಸರಕಾರಗಳು ಕೈಗೊಳ್ಳುತ್ತಿರುವ ಕಾರ್ಯಗಳಿಗೆ ಕೈ ಜೋಡಿಸುವುದಕ್ಕಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ 1 ಕೋ.ರೂ., ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ 50 ಲಕ್ಷ ರೂ. ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌ ನೌಕರರ ಒಂದು ದಿನದ ವೇತನವನ್ನು ನೀಡಲಾಗುವುದು. ಅಲ್ಲದೆ ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ನಿಂದ 50 ಸಾವಿರ ಮಾಸ್ಕ್ ನೀಡಲಾಗುವುದು ಎಂದು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.

Advertisement

ಕೋವಿಡ್ 19 ವೈರಸ್ ವಿರುದ್ಧ ಕಾರ್ಯಾಚರಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರ ಸಂಘ, ಸಂಸ್ಥೆಗಳು, ಉದ್ಯಮಿಗಳು ಮತ್ತು ಜನತೆ ಹೆಚ್ಚಿನ ಆರ್ಥಿಕ ನೆರವನ್ನು ನೀಡುವಂತೆ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಕೋರಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವಂತೆ ಈಗಾಗಲೇ ಮುಖ್ಯಮಂತ್ರಿ ಮತ್ತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಮನವಿ ಮಾಡಿದ್ದು, ಸಹಕಾರಿಗಳು, ಸಹಕಾರಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಜನತೆ ಒಗ್ಗೂಡಿ ಗರಿಷ್ಠ ದೇಣಿಗೆಯನ್ನು ‘SCDCC Bank, Kodialbail Branch A/C No. 505/757 Covid-19 Relief Fund’ ಖಾತೆಗೆ ನಗದು/ ಚೆಕ್‌/ ಆರ್‌ಟಿಜಿಎಸ್‌ ಮುಖಾಂತರ ನೀಡಬಹುದು. ಸಂಗ್ರಹವಾದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸ ಲಾಗುವುದು ಎಂದು ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.

ಬ್ಯಾಂಕ್‌ ವ್ಯವಹಾರ ಸಮಯ ಬದಲು
ಕೊರೊನಾ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ 105 ಶಾಖೆಗಳ ವ್ಯವಹಾರದ ಸಮಯವನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನಿಗದಿಗೊಳಿಸಲಾಗಿದೆ. ಅವಿಭಜಿತ ದ.ಕ. ಸಹಕಾರ ಸಂಘಗಳಿಗೂ ಇದೇ ಸಮಯದಲ್ಲಿ ವ್ಯವಹರಿಸುವಂತೆ ಸೂಚಿಸಲಾಗಿದೆ.

ರೈತರಿಗೆ ಅಡಿಕೆ ಅಡಮಾನ ಸಾಲ ನೀಡುವುದು ಮತ್ತು ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡುವ ಜತೆಗೆ ಸಹಕಾರ ಸಂಸ್ಥೆಗಳು ಬ್ಯಾಂಕಿಂಗ್‌ ಸೇವೆಯನ್ನು ನಿಗದಿತ ಸಮಯದಲ್ಲಿ ನೀಡುವಂತೆಯೂ ರಾಜೇಂದ್ರ ಕುಮಾರ್‌ ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next