ಶಿವಮೊಗ್ಗ: ರಾಜ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಜಿಲ್ಲೆಯಲ್ಲಿರುವ ಮ್ಯಾನುವಲ್ ಸ್ಕ್ಯಾವೆಂಜರ್ ಗಳನ್ನು (ಜಾಡಮಾಲಿ) ಗುರುತಿಸಲು ಸಮೀಕ್ಷೆ ಕೈಗೊಂಡು ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ನನಗೆ ಯಾವುದೇ ಅಸಮಾಧಾನ ಇಲ್ಲ: ಆರ್. ಶಂಕರ್ ಮನವೊಲಿಸುವಲ್ಲಿ ಸಿಎಂ BSY ಯಶಸ್ವಿ
ಗುರುವಾರ ಜಿಲ್ಲಾ ನ್ಯಾಯಾಲಯದಲ್ಲಿ ಹೈಕೋರ್ಟ್ ನಿರ್ದೇಶನಗಳ ಅನುಷ್ಠಾನ ಕುರಿತು ಹಿರಿಯ ಅ ಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸಮೀಕ್ಷೆ ನಡೆಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು. ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್‌ಗಳು ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯ ನಡೆಸಿದ ಬಳಿಕ ಜಿಲ್ಲೆಯಲ್ಲಿ ಗುರುತಿಸಲಾಗುವ ಮ್ಯಾನುವಲ್ ಸ್ಕ್ಯಾವೆಂಜರ್ ಪುನರ್ ವಸತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಾಯ್ದೆ ಪ್ರಕಾರ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೈಯಿಂದ ಮಾನವ ತ್ಯಾಜ್ಯವನ್ನು ಸಾಗಿಸುವ ಈ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕಾಗಿದೆ. ತುರ್ತು ಸಂದರ್ಭದಲ್ಲಿ ಸಹ ಯಾವುದೇ ಸುರಕ್ಷೆಗಳಿಲ್ಲದೆ ಒಳಚರಂಡಿಯ ಒಳಗೆ ಮ್ಯಾನುವಲ್ ಸ್ಕ್ಯಾವೆಂಜರ್ ಗಳನ್ನು ಇಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಸಂದರ್ಭಗಳಲ್ಲಿ ದುರ್ಘಟನೆ ಸಂಭವಿಸಿದರೆ ಮೃತರ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ಧನ ಕಾಯ್ದೆ ಪ್ರಕಾರ ಒದಗಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಮ್ಯಾನುವಲ್ ಸ್ಕ್ಯಾವೆಂಜರ್ ಪ್ರಕರಣಗಳನ್ನು ದಾಖಲಿಸಲಾಗಿದೆ, ಅವರ ಪುನರ್ ವಸತಿಗೆ ಕೈಗೊಂಡ ಕ್ರಮಗಳೇನು ಇತ್ಯಾದಿಗಳ ಕುರಿತು ಮಾಹಿತಿಯನ್ನು ಹೈಕೋರ್ಟ್‌ಗೆ ಒದಗಿಸಬೇಕಾಗಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್. ಅಪರ ಜಿಲ್ಲಾ ಧಿಕಾರಿ ಜಿ. ಅನುರಾಧಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಕಾರಿ ಡಾ| ಶೇಖರ ಎಚ್.ಟಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಯೋಜನಾ ನಿರ್ದೇಶಕ ಡಾ| ನಾಗೇಂದ್ರ ಹೊನ್ನಳ್ಳಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ